

ಮೇಷ: ಈ ರಾಶಿಯವರಿಗೆ ಅ. 18 ರಂದು ಗುರು ಚತುರ್ಥಕ್ಕೆ ಬರುವುದಲ್ಲದೆ, ಶನಿಯು ವಕ್ರಗತಿಯಲ್ಲಿ ಇರುವುದರಿಂದ 11ನೇ ಮನೆಯ ಫಲವನ್ನು ನೀಡುತ್ತಾನೆ. ಕಟಕ ರಾಶಿಯಲ್ಲಿ ಉಚ್ಚನಾಗಿರುವ ಗುರುವನ್ನು ಪ್ರಾರ್ಥಿಸಿ ಲಾಭವನ್ನು ಪಡೆಯಿರಿ. ಬಿಳಿಯ ವಸ್ತ್ರವನ್ನು ಕಡಲೇಬೇಳೆಯೊಂದಿಗೆ ದಾನ ನೀಡಿ. ರಾಶ್ಯಾಧಿಪತಿ ಸುಬ್ರಹ್ಮಣ್ಯ ದೇವರನ್ನು ಪೂಜಿಸಿ. ನಿತ್ಯವೂ ಸಂಜೆ ಸುಬ್ರಹ್ಮಣ್ಯ ಅಷ್ಟೋತ್ತರ ಪಠಿಸಿ.
ವೃಷಭ: ಗುರು ಮೂರನೇ ಮನೆಗೆ ಬಂದು ಒಳ್ಳೆಯ ಫಲವನ್ನೇ ನೀಡುತ್ತಾನೆ. ಕಾರ್ಯ ಸಾಧಿಸಿಕೊಳ್ಳಲು ಯಾರಿಗೂ ನೋವಾಗದ ರೀತಿಯಲ್ಲಿ ಇರಲು ನೈಪುಣ್ಯ ಹಾಗೂ ಜಾಣ್ಮೆ ಬೇಕು. ಶನಿಯು ವಕ್ರಗತಿಯಲ್ಲಿ ದಶಮದಲ್ಲಿದ್ದಾನೆ. ಬೇಕಾದ ಸ್ಥಾನಮಾನ ಗಳಿಸಿ ಕೊಳ್ಳಲು ಚಾಮುಂಡಿಯನ್ನು ದರ್ಶಿಸಿ. ಸಾಧ್ಯವಾದಲ್ಲಿ ಚಂಡಿಕಾ ಹವನ ಮಾಡಿಸಿ.
ಮಿಥುನ: ದ್ವಿತೀಯಕ್ಕೆ ಗುರು ಬಂದು 22 ದಿವಸ ಮಾತ್ರ ಒಳ್ಳೆಯ ಫಲವನ್ನು ನೀಡುತ್ತಾನೆ. ಮತ್ತೆ ವಕ್ರಗತಿಯಲ್ಲಿ ಹಿಂದಕ್ಕೆ ಬರುವಾಗ ಯಥಾಸ್ಥಿತಿ ಕಾಯ್ದುಕೊಳ್ಳಲು ದೈವಬಲ, ಬುದ್ದಿ ಬಲ ವೃದ್ಧಿಸಿಕೊಳ್ಳಲು ಹನುಮಂತನನ್ನು ಪೂಜಿಸಿ. ಪ್ರತಿ ಶನಿವಾರ ತುಳಸಿಯಿಂದ ಅರ್ಚಿಸಿ. ‘ಹಂ ಹನುಮತೆ ನಮಃ’ ಎಂದು 28 ಅಥವಾ 108 ಬಾರಿ ಜಪ ಮಾಡಿ.
ಕಟಕ: ಹನ್ನೆರಡನೇ ಮನೆಯಿಂದ ಗುರು ಜನ್ಮಸ್ಥಾನಕ್ಕೆ ಬಂದು ಶುಭವನ್ನು ಉಂಟು ಮಾಡುತ್ತಾನೆ. ಮಿತಿಮೀರಿ ಕೆಲಸ ಮಾಡಿ ಆಯಾಸ ಪಡದಿರಿ. ಹೊಟ್ಟೆ ಹಸಿದರಷ್ಟೇ ತಿನ್ನಬೇಕೆ ಹೊರತು ರುಚಿ ನೋಡಿ ಹೆಚ್ಚು ತಿನ್ನಲು ಹೋಗದಿರಿ. ಎಚ್ಚರಿಕೆಯಿಂದ ಸಾಗಿರಿ. ನಿತ್ಯ ಉಮಾ ಮಹೇಶ್ವರ ವ್ರತಕಥೆಯ ಸಾರಾಂಶವನ್ನು ಓದಿರಿ.
ಸಿಂಹ: ಗುರು ಅ. 18ಕ್ಕೆ ಹನ್ನೆರಡನೇ ಮನೆಗೆ ಬರುತ್ತಾನೆ. 22 ದಿನಗಳ ಕಾಲ ನೀವು ಯಾರೊಂದಿಗೂ ಮಾತನಾಡದೆ, ಯಾರಿಗೂ ನೋವು ಕೊಡದೆ, ಯಾರ ತಂಟೆಗೂ ಹೋಗದಿದ್ದರೆ ಶುಭಾಶುಭ ನಿಮಗೆ ಅರಿವು ಆಗುತ್ತದೆ. ಕಟಕ ರಾಶಿಯಲ್ಲಿ ಗುರು ಉಚ್ಚನಾಗಿದ್ದು ಏನನ್ನೂ ಕೊಡಬಲ್ಲ. ಗುರುಮಂತ್ರ ಭಜಿಸಿ. ಧೈರ್ಯದಿಂದ ಸಾಗಲು ಅದೊಂದೇ ಸಾಕು.
ಕನ್ಯಾ: ಏಕಾದಶಕ್ಕೆ ಗುರು ಬಂದು ಹೊಸ ಜೀವನವನ್ನು ರೂಪಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತಾನೆ. ಆದರೆ ಮಿತಿಮೀರಿದ ಆಸೆಯು ದುಃಖಕ್ಕೆ ಕಾರಣವಾಗುತ್ತದೆ. ದೈವಬಲ ಒಂದೇ ನಿಮ್ಮನ್ನು ಕಾಪಾಡುತ್ತದೆ. ಈ ಸಂದರ್ಭದಲ್ಲಿ ಶಿವನ ಕ್ಷೇತ್ರಗಳನ್ನು ಎಷ್ಟು ದರ್ಶನ ಮಾಡುತ್ತಿರೋ ಅಷ್ಟು ಶುಭಫಲವನ್ನು ಪಡೆಯುತ್ತೀರಿ. ನಿತ್ಯವೂ ಶಿವಪೂಜೆ ಇರಲಿ.
ತುಲಾ: ದಶಮದಲ್ಲಿ ಗುರು ಯಾವ ಕೆಡುಕನ್ನೂ ಉಂಟು ಮಾಡುವುದಿಲ್ಲ. ಶನಿಯು ವಕ್ರಗತಿಯಲ್ಲಿ ಪಂಚಮದಲ್ಲಿ ಇರುವುದರಿಂದ ವ್ಯಾಪಾರದಲ್ಲಿ ಏರಿಳಿತವಾದೀತು. ಮನಸ್ಸಿಗೆ ಬೇಡದ ವಿಷಯಗಳಲ್ಲಿ ತೊಡಗಿಸಿಕೊಂಡು ತಲೆಯು ಕೆಡುತ್ತದೆ. ಅದನ್ನು ಕಾಪಾಡಿಕೊಳ್ಳಲು ಶಿವನ ಶಿರಸ್ಸಿನಲ್ಲಿ ಕುಳಿತಿರುವ ಚಂದ್ರನನ್ನು ಪ್ರಾರ್ಥಿಸಿ. ಚಂದ್ರ ಅಷ್ಟೋತ್ತರ ಓದಿ, ಅಕ್ಕಿಯನ್ನು ದಾನ ನೀಡಿ.
ವೃಶ್ಚಿಕ: ಒಂಭತ್ತನೇ ಮನೆಗೆ ಅ. 18 ರಂದು ಬರುವ ಗುರು ಕಷ್ಟಗಳನ್ನು ದೂರ ಮಾಡುತ್ತಾನೆ. ಹಗಲಿನಲ್ಲಿ ಸೂರ್ಯನ ಬೆಳಕು ಸಾಕು. ರಾತ್ರಿಯಲ್ಲಿ ದೀಪವಿದ್ದರೆ ಮಾತ್ರ ಕಾಣುತ್ತದೆ. ದುರ್ಗಾ ಪರಮೇಶ್ವರಿಯನ್ನು ಬೆಳಕನ್ನು ನೀಡುವ ದೀಪದ ರೀತಿಯಲ್ಲಿ ಪೂಜಿಸಿ. ಆ ದೀಪವೇ ನಿಮಗೆ ಎಲ್ಲಾ ಸಿರಿ ಸಂಪತ್ತು ಕೊಡುವುದರಲ್ಲಿ ಸಂಶಯವಿಲ್ಲ.
ಧನಸ್ಸು: ಗುರು ಎಂಟನೇ ಮನೆಗೆ ಹೋಗುತ್ತಾನೆ. ಶನಿಯು ಮೂರನೇ ಮನೆಯಲ್ಲಿ ವಕ್ರಗತಿಯಲ್ಲಿ ಇದ್ದಾನೆ. ತೃತೀಯ ಶನಿಯು ತೀಕ್ಷ್ಣ ವಾದ ಬುದ್ದಿವಂತಿಕೆಯನ್ನು ಕೊಟ್ಟು ಲಾಭವನ್ನು ತರುತ್ತಾನೆ. ಗುರುವಿಗಾಗಿ ಪ್ರಕೃತಿಯ ಮೂಲ ಗುರುಗಳಾದ ನಿಮ್ಮ ತಂದೆ ತಾಯಿಯನ್ನು ಪೂಜಿಸಿ ನಿತ್ಯ ಆಶೀರ್ವಾದ ಪಡೆದರೆ ಯಾವ ಹೋಮ ಹವನಗಳ ಅವಶ್ಯಕತೆ ಇರುವುದಿಲ್ಲ.
ಮಕರ: ವಾಮನ ಅವತಾರದಲ್ಲಿ ಮಹಾವಿಷ್ಣು ಬಲಿಯನ್ನು ಪಾತಾಳಕ್ಕೆ ಕಳುಹಿಸಿ ಭೂಮಿಯನ್ನು ಕಾಪಾಡುತ್ತಾನೆ. ನೀವು ಸಹ ತ್ರಿಕರಣ ಶುದ್ಧರಾಗಿ ದೇವರನ್ನು ಪೂಜಿಸಿ ಒಳ್ಳೆಯ ಕೆಲಸವನ್ನೇ ಮಾಡಿದರೆ ಇಷ್ಟಾರ್ಥಗಳು ಈಡೇರುತ್ತವೆ. ರಾಶ್ಯಾಧಿಪತಿ ಶನಿಯನ್ನು ಒಲಿಸಿಕೊಳ್ಳಲು ಇರುವುದು ಸತ್ಯ ನ್ಯಾಯ ಧರ್ಮ ಹಾಗೂ ಭಕ್ತಿ ಮಾರ್ಗ ಒಂದೇ.
ಕುಂಭ: ಇನ್ನೂ ಎರಡು ವರ್ಷಗಳ ಕಾಲ ಶನಿ ಸಂಚಾರವಿದೆ. ನಂತರವೇ ನಿಮಗೆ ಭಾಗ್ಯೋದಯ. ಆತುರವು ಗಂಡಾಂತರವನ್ನು ಆಹ್ವಾನಿಸುತ್ತದೆ. ಒಳ್ಳೆಯ ಮನದಿಂದ ಕೆಲಸದಲ್ಲಿ ತೊಡಗಿಸಿಕೊಳ್ಳಿ. ಶನಿ ಸಂಚಾರವು ಮುಗಿವವವರೆಗೂ ಸೋಮವಾರ ಶಿವಪೂಜೆ ಮಾಡಿರಿ.
ಮೀನ: ಶನಿಯು ವಕ್ರನಾಗಿ ದ್ವಾದಶದಲ್ಲಿ ರಾಹುವಿನೊಂದಿಗೆ ಇದ್ದಾನೆ. ಎಲ್ಲರ ಬಗ್ಗೆಯೂ ಎಚ್ಚರಿಕೆಯಿಂದ ಇರಬೇಕು. ರಾಶ್ಯಾಧಿಪತಿ ಗುರು ಅ. 18 ರಿಂದ 22 ದಿವಸಗಳ ಕಾಲ ಪಂಚಮದಲ್ಲಿ ಇರುತ್ತಾನೆ. ನಿಮ್ಮ ಕಷ್ಟ ಪರಿಹರಿಸುತ್ತಾನೆ. ಪ್ರತಿ ಸೋಮವಾರದಂದು ಕಥಾಶ್ರವಣವನ್ನು ಮಾಡಿ ಶಿವನ ಪೂಜೆ ಮಾಡಿದರೆ ಎಲ್ಲಾ ಸುಖವನ್ನು ಪಡೆಯುವಿರಿ.