ವಾರ ಭವಿಷ್ಯ: ಈ ರಾಶಿಯವರಿಗೆ ನಿಮ್ಮ ಇಷ್ಟಗಳು ಸಿದ್ಧಿಯಾಗುತ್ತವೆ

vara bhavishya
Published on

ಮೇಷ: ಜ್ಯೇಷ್ಠ ಮಾಸವು ಆರಂಭವಾಗಿ ಐದು ದಿನಗಳು ಕಳೆದಿವೆೆ. ಇನ್ನು ಒಂದು ಮಾಸ ಕಾಲ ಮಾತ್ರ ಉತ್ತರಾಯಣವು ಉಳಿದಿದೆ. ‘ಜ್ಯೇಷ್ಠ ರಾಜಂ ಬ್ರಹ್ಮಣಾ’ ಎಂದು ಗಣಪತಿಯನ್ನು ಪೂಜಿಸಿ. ಅಷ್ಟಸಿದ್ಧಿಗಳು ಉಂಟಾಗುತ್ತವೆ. ಆರೋಗ್ಯವನ್ನು ಕಾಪಾಡಿಕೊಳ್ಳಲು, ಕಾರ್ಯಸಿದ್ಧಿಯಾಗಲು ಗಣಪತಿಗೆ ಪ್ರತಿನಿತ್ಯ ಗರಿಕೆಯನ್ನು ಇರಿಸಿ.

ವೃಷಭ: ಭಾಗ್ಯೋದಯವಾಗುವ ಸಮಯ. ಪೂರ್ವಜನ್ಮದ ಪುಣ್ಯ ಗುರುಭಕ್ತಿಯಿಂದ ಕೂಡಿದ ದೈವಭಕ್ತಿಯು ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ. ಸಣ್ಣ ಪುಟ್ಟ ಆರೋಗ್ಯದ ವ್ಯತ್ಯಾಸವಾಗಬಹುದು. ‘ಸರ್ವಾಭಾದಾ ಪ್ರಶಮನಂ...’ ಎಂಬ ಮಂತ್ರದಿಂದ ಚಂಡಿಕಾ ಪಾರಾಯಣ ಮಾಡಿಸಿ. ರಾಜಯೋಗವು ಉಂಟಾಗುತ್ತದೆ.

ಮಿಥುನ: ಇನ್ನು 15 ದಿನಗಳು ಮಾತ್ರವೇ ಸೂರ್ಯನು ಮಿಥುನಕ್ಕೆ ಬಂದು ಉತ್ತರಾಯಣ ಸೂರ್ಯನು ಇಳಿಮುಖವಾಗುವ ಮುಂಚೆ ಸೂರ್ಯ ನಾರಾಯಣನ ಪೂಜೆ ಮಾಡಿರಿ. ನಿಂತ ಕೆಲಸ ಮುಂದೆ ಸಾಗುತ್ತದೆ. ಆರೋಗ್ಯಕ್ಕೆ ಹಿತ, ವೆಚ್ಚಕ್ಕೆ ಬೇಕಾದಷ್ಟು ಧನ ಸಿಗುತ್ತದೆ. ಗುರುರಾಘವೇಂದ್ರನ ದರ್ಶನ ಮಾಡಿ. ಗುರುಪರಂಪರಾ ಸ್ತೋತ್ರ ಪಠಿಸಿ.

ಕಟಕ: ದ್ವಾದಶದಲ್ಲಿ ಗುರುವಿದ್ದಾನೆ. ವಿಶೇಷವಾಗಿ ಮಾತೆಯರು ತಮ್ಮ ಸೌಖ್ಯ, ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯವಶ್ಯಕ. ಅಗಸನು ಅರಿವಿಲ್ಲದೆ ಕತ್ತೆಯ ಮೇಲೆ ಭಾರ ಹೊರಿಸುವಂತೆ ನೀವು ಎಲ್ಲರಿಗೂ ಅನ್ನ ನೀಡಿ ಕರ್ತವ್ಯ ಮಾಡಿದರೂ ನೀವು ಸಹ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಶಿವಾರಾಧನೆ ಅತ್ಯವಶ್ಯಕ.

ಸಿಂಹ: ಏಕಾದಶದಲ್ಲಿ ಗುರುವಿದ್ದಾನೆ. ಧನ-ಸಂಪತ್ತು ಎಲ್ಲ ದೊರಕಿ, ಆಪತ್ತು-ವಿಪತ್ತು ಹೆಸರಿಲ್ಲದಂತೆ ಓಡಿಹೋಗುತ್ತದೆ. ಆದರೆ ಸಿಂಹ ರಾಶಿಯವರು ಛಲವನ್ನು ಪಡೆಯಬೇಕಾದರೆ ದೈವಶಕ್ತಿ ಬೇಕೇ ಬೇಕು. ಸಿಂಹ ರಾಶಿಯವರಿಗೆ ಸೂರ್ಯಬಲವಿದ್ದು, ಹಾಗೂ ಕೇತು ಅಲ್ಲೇ ಇರುವುದರಿಂದ ಗಣರಾಜನ ಕೃಪೆಯು ಅವಶ್ಯ.

ಕನ್ಯಾ: ಮನಸ್ಸಿನಲ್ಲಿ ಆನಂದದಿಂದಿರಲು ಕಾರಣವು ಬೇಕಿಲ್ಲ. ನಗುವೇ ಅದಕ್ಕೆ ದಿವ್ಯ ಔಷಧ. ಸಮಯವು ಈಗ ಅಷ್ಟೇನು ಅನುಕೂಲವಾಗಿಲ್ಲದಿದ್ದರೂ, ಪ್ರತಿಕೂಲವೂ ಇಲ್ಲ. ದೈವವನ್ನು ನಂಬಿ ಮುನ್ನಡೆಯಿರಿ. ಸದ್ಭಕ್ತರ, ಸಜ್ಜನರ ಸಂಗ ಇದ್ದರೆ, ಇಂತಹ ಸಮಯವನ್ನು ಸುಲಭವಾಗಿ ದಾಟಬಹುದು.

ತುಲಾ: ವಿದ್ಯೆಯೆ ಕಾಂತಿಯನ್ನು ವೈವಿಧ್ಯಮಯ ಜೀವನವನ್ನು ತೋರಿಸುತ್ತದೆ. ಯಾವುದಕ್ಕೂ ಕೊರತೆಯಿಲ್ಲದೆ ಧನ-ಧಾನ್ಯ ಅಷ್ಟ ಸಿದ್ಧಿಗಳು ಇವೆ. ಇದೇ ರೀತಿ ನಿಮ್ಮ ದೋಣಿಯು ಬೇಕಾದ ತೀರವನ್ನು ಸೇರಲಿದೆ. ಕೃಷ್ಣನನ್ನು ಅನಂತವಾಗಿ ಪ್ರಾರ್ಥಿಸಿ. ಮುದ್ದು ಗೋಪಾಲನನ್ನು ಮಲಗುವ ಮುನ್ನ ನೆನೆದು ಮನಸ್ಸಿನಲ್ಲೇ ತೊಟ್ಟಿಲನ್ನು ತೂಗಿ ಸುಖವಾದ ನಿದ್ರೆಯನ್ನು ಮಾಡಿರಿ.

ವೃಶ್ಚಿಕ: ಕಷ್ಟ-ಕಾರ್ಪಣ್ಯ ಬಂದು ಹೋಗುತ್ತದೆ. ಜೀವನದಲ್ಲಿ ಅಳುವು- ನಗುವು ಎರಡೂ ಇರುತ್ತದೆ. ಏನೇ ಬಂದರೂ ಕುಗ್ಗಲೂ ಬಾರದು. ಹಿಗ್ಗಲೂ ಬಾರದು. ನಿಮ್ಮ ದೈನಂದಿನ ಚಟುವಟಿಕೆ ದೈವ ಪ್ರಾರ್ಥನೆಯಿಂದ ಆರಂಭವಾಗಲಿ. ಜನಕ- ಜನನಿಯರಿಗೆ ಮನಸಾರೆ ನಮಸ್ಕರಿಸಿ. ಕಷ್ಟ ಕಾಲವು ದೂರವಾಗುತ್ತದೆ. ಸುಬ್ರಹ್ಮಣ್ಯನಿಗೆ ನಿತ್ಯವೂ ಹಾಲು- ಹಣ್ಣು ನೈವೇದ್ಯ ಮಾಡಿರಿ.

ಧನುಸ್ಸು: ಜೀವನದಲ್ಲಿ ಒಮ್ಮೊಮ್ಮೆ ಆಯಾಸವನ್ನು ನೀಗುವ, ಮನಸ್ಸಿಗೆ ಹಿತವನ್ನು ನೀಡುವ ತಂಪಾದ ಗಾಳಿಯು ಬಂದೇ ಬರುತ್ತದೆ. ರಾಮಾಯಣದಲ್ಲಿ ವಸಿಷ್ಠರು ಹೇಳುವಂತೆ ನೂರು ವರುಷ ಬದುಕಿದಾಗ ಒಂದಲ್ಲ ಒಂದು ದಿನ ಅಮೃತ ಘಳಿಗೆಯ ಸಂತೋಷದ ಸಮಯವು ಮನುಷ್ಯನಿಗೆ ಬಂದೇ ಬರುತ್ತದೆ. ದೇವಿ ಆರಾಧನೆ ಮಾಡಿರಿ. ಸುಖಮಯವಾದ ಜೀವನವನ್ನು ನಡೆಸಿ.

ಮಕರ: ಕಷ್ಟ ಕಾಲವೆಲ್ಲ ಕಳೆದು ಚೈತ್ರ-ವೈಶಾಖ ಮಾಸಗಳು ಕಳೆದಿವೆ. ನಿಮ್ಮ ಸುಖದ ಕಾಲವು ನಡೆಯುತ್ತಿರುವುದು ನಿಮ್ಮ ಮೊಗದಲ್ಲೇ ತಿಳಿಯುತ್ತದೆ. ಇಷ್ಟಾರ್ಥವನ್ನು ಪೂರೈಸಿಕೊಳ್ಳಿ. ಗುರು ಬಲವು ಕಡಿಮೆಯಿರುವುದರಿಂದ ಜನಕ-ಜನನಿಯರನ್ನು ಸದಾ ನೆನೆಸಿ. ನಿಮ್ಮ ಇಷ್ಟಗಳು ಸಿದ್ಧಿಯಾಗುತ್ತವೆ.

ಕುಂಭ:  ಕುಂಭಕ್ಕೆ ಶನಿ ದ್ವಿತೀಯದಲ್ಲಿ ಇದ್ದು, ಕಡೆಯ ಭಾಗದಲ್ಲಿ ಶನಿಸಂಚಾರ ವಿದೆ. ಇನ್ನು ಯಾವ ಆತಂಕವೂ ಬೇಡ. ನಿಮಗೆ ಸಂತೃಪ್ತಿಯಾಗಿ ಮಾಡುವ ಕೆಲಸದಲ್ಲಿ ಜಯವೂ ಸಿಕ್ಕೇ ಸಿಗುತ್ತದೆ. ‘ವೈಭವಂ ಆನಂದಂ ಸದಾ ಕಾರ್ಯಸಿದ್ದಿಂ’ ಎಂಬಂತೆ ನೀವು ಅನಂತ ಕೈಗಳಿಂದ ಕೊಡುವ ಅನಂತಪದ್ಮನಾಭವ್ರತ ಕಥೆಯನ್ನು ಓದಿರಿ.

ಮೀನ: ಮೀನರಾಶಿಯವರು ವಿಶೇಷವಾದ ವ್ಯಕ್ತಿಗಳು. ಯಾರ ಹಂಗಿಗೂ ಸಿಲುಕುವುದಿಲ್ಲ. ಯಮನಿಗೆ ಯಾವುದಾದರೂ ಗ್ರಹಭಾಧೆ ಇದೆಯೇ ಎಂಬ ಚರ್ಚೆ ಬಂದಾಗ ಅವನು ಯಾರ ಹಂಗಲ್ಲೂ ಇರುವುದಿಲ್ಲ. ನೀರಿನಲ್ಲಿದ್ದರೆ ಮೀನು ಸಂತೋಷ ಪಡುತ್ತದೆ. ಆಚೆ ಬಂದರೆ ಆಹಾರವಾಗುತ್ತದೆ. ನಿಮ್ಮ ಆತ್ಮಬಲವನ್ನು ವೃದ್ಧಿಸಿಕೊಂಡರೆ ಏನನ್ನು ಬೇಕಾದರೂ ಪಡೆಯಬಹುದು. ಪಾರ್ವತಿ-ಪರಮೇಶ್ವರರನ್ನು ಪೂಜಿಸಿ, ಸಂತೋಷ ಪಡೆಯಿರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net