

ಬೆಂಗಳೂರು ಅಜೀಂ ಪ್ರೇಮ್ ಜಿ ಪ್ರತಿಷ್ಠಾನದ ಸಹಯೋಗದಲ್ಲಿ ಶಾಲಾ ಶಿಕ್ಷಣ ಇಲಾಖೆಯು ಬುಧವಾರದಿಂದ (ಸೆ.25) ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಪೂರ್ವ ಪ್ರಾಥಮಿಕ ತರಗತಿಯಿಂದ 10ನೇ ತರಗತಿವರೆಗಿನ ಎಲ್ಲ ಮಕ್ಕಳಿಗೂ ವಾರದಲ್ಲಿ 6 ದಿನ ಮೊಟ್ಟೆ ವಿತರಣೆ ಮಾಡುತ್ತಿದೆ. ಆದರೆ, ಶಾಲೆಯ ಮುಖ್ಯ ಶಿಕ್ಷಕರಿಗೆ ಮೊಟ್ಟೆ ಬೆಲೆಯದ್ದೇ ಚಿಂತೆಯಾಗಿದೆ.
ಶಾಲಾ ಮಕ್ಕಳಲ್ಲಿರುವ ಅಪೌಷ್ಟಿಕತೆ ನಿವಾರಣೆ, ರಕ್ತ ಹೀನತೆ ತಡೆಗಟ್ಟುವುದು, ಬಹು ಪೋಷಕಾಂಶಗಳ ನ್ಯೂನ್ಯತೆ ಹೋಗಲಾಡಿಸುವುದು, ಆರೋಗ್ಯಕರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಹೆಚ್ಚಿಸಲು ಮಧ್ಯಾಹ್ನದ ಬಿಸಿಯೂಟದ ಜತೆಯಲ್ಲಿ ಪೂರಕ ಪೌಷ್ಟಿಕ ಆಹಾರಗಳಾದ ಬಿಸಿಹಾಳು, ಮೊಟ್ಟೆ, ಬಾಳೆಹಣ್ಣು/ಶೇಂಗಾ ಚಿಕ್ಕಿ ಹಾಗೂ ರಾಗಿ ಮಾಲ್ಟ್ ವಿತರಿಸಲಾಗುತ್ತಿದೆ.
ಶಿಕ್ಷಣ ಇಲಾಖೆಯು ಮೊಟ್ಟೆ ಖರೀದಿಗೆ 5.20 ರೂ., ಮೊಟ್ಟೆ ಸುಲಿಯಲು 30 ಪೈಸೆ, ಬೇಯಿಸಲು (ಗ್ಯಾಸ್ ವೆಚ್ಚ) 50 ಪೈಸೆ ಸೇರಿ 6 ರೂ. ನಿಗದಿ ಮಾಡಿದೆ. ಆದರೆ, ಮೊಟ್ಟೆ ಬೆಲೆಯು ಸಾಮಾನ್ಯವಾಗಿ ಏರಿಕೆ- ಇಳಿಕೆಯಾಗುತ್ತಿರುತ್ತದೆ. ಬೆಲೆ ಹೆಚ್ಚಳವಾದ ಸಮಯದಲ್ಲಿ ಏನು ಮಾಡಬೇಕು ಎಂಬುದು ಶಿಕ್ಷಕರ ಪ್ರಶ್ನೆಯಾಗಿದೆ.
ಶಿಕ್ಷಕರ ಸಮಸ್ಯೆ ಏನು?
ಈ ಮೊದಲು ವಾರದಲ್ಲಿ ಎರಡು ದಿನಗಳ ಕಾಲವಷ್ಟೇ ಮೊಟ್ಟೆ, ಬಾಳೇಹಣ್ಣು/ಶೇಂಗಾ ಚಿಕ್ಕಿ ವಿತರಣೆ ಮಾಡಲಾಗುತ್ತಿತ್ತು. ಆದರೆ, ಈಗ ಶಾಲೆ ನಡೆಯುವ ಎಲ್ಲ ದಿನವೂ ಮೊಟ್ಟೆ ವಿತರಣೆ ಮಾಡಬೇಕಿದೆ. ಈ ಮೊದಲು ಶಾಲೆ ಸಮೀಪದ ಕೋಳಿ ಾರಂಗಳಲ್ಲಿಯೇ ಮೊಟ್ಟೆ ಖರೀದಿ ಮಾಡಬಹುದಿತ್ತು. ಈಗ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯು (ಎಸ್‌ಡಿಎಂಸಿ) ಕನಿಷ್ಠ ಮೂವರು ಪೂರೈಕೆದಾರರು ಸಲ್ಲಿಸಿದ ಬೆಲೆ ಪಟ್ಟಿಯನ್ನು ಹೋಲಿಕೆ ಮಾಡಿ ಮತ್ತು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಮೊಟ್ಟೆ ಖರೀದಿಸುವಂತೆ ಸೂಚಿಸಿದೆ. ಒಂದು ವೇಳೆ ಸರ್ಕಾರ ನಿಗದಿ ಮಾಡಿರುವ ಬೆಲೆಯಲ್ಲಿ ಸ್ಥಳೀಯವಾಗಿ ಮೊಟ್ಟೆ ಲಭ್ಯವಾಗದಿದ್ದಲ್ಲಿ ಏನು ಮಾಡಬೇಕು ಎಂಬುದು ತಿಳಿಯದಾಗಿದೆ ಎನ್ನುತ್ತಾರೆ ಶಿಕ್ಷಕರು.
ಪರಿಹಾರ ನೀಡದ ಅಧಿಕಾರಿಗಳು:
ಮೊಟ್ಟೆ ಯೋಜನೆ ಆರಂಭವಾದ ಬಳಿಕ ಸಾಕಷ್ಟು ಸಮಯದಲ್ಲಿ ಸಮಸ್ಯೆಯಾಗಿದೆ. ಅಂತಿಮವಾಗಿ ಶಿಕ್ಷಕರನ್ನೇ ಹೊಣೆಗಾರರನ್ನಾಗಿಸುತ್ತಾರೆಯೇ ಹೊರತು ಇದಕ್ಕೆ ಅಧಿಕಾರಿಗಳು ಪರಿಹಾರ ನೀಡುತ್ತಿಲ್ಲ. ಈಗಲೂ ಬೆಲೆ ಹೆಚ್ಚಾದರೆ ಏನು ಮಾಡಬೇಕೆಂಬ ಪ್ರಶ್ನೆಗೆ ‘ಸರ್ಕಾರ ಎಲ್ಲ ಯೋಚಿಸಿಯೇ ಬೆಲೆ ನಿಗದಿ ಮಾಡಿರುತ್ತದೆ. ಅದರಲ್ಲಿಯೇ ನಿರ್ವಹಣೆ ಮಾಡಬೇಕು’ ಎಂಬ ಉತ್ತರಗಳನ್ನು ಇಲಾಖೆ ಅಧಿಕಾರಿಗಳು ನೀಡುತ್ತಾರೆ. ಮುಂದಿನ ದಿನಗಳಲ್ಲಿ ಯಾವ ರೀತಿಯ ಸಮಸ್ಯೆಗಳು ಎದುರಾಗಲಿವೆಯೋ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಯಾದಗಿರಿಯಲ್ಲಿ ಚಾಲನೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಬುಧವಾರ ಯಾದಗಿರಿ ಜಿಲ್ಲೆಯ ಅರಕೇರಾ ಕೆ. ಗ್ರಾಮದ ಪ್ರೌಢಶಾಲೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. 6 ದಿನ ಮೊಟ್ಟೆ ವಿತರಣೆ ಕಾರ್ಯಕ್ರಮವನ್ನು ಜು.20ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಈಗ ಅಧಿಕೃತವಾಗಿ ಅನುಷ್ಠಾನ ಮಾಡಲಾಗುತ್ತಿದೆ.
ಕರೆ ಸ್ವೀಕರಿಸದ ಸಚಿವರು, ಅಧಿಕಾರಿಗಳು
ಮೊಟ್ಟೆ ಬೆಲೆ ಸಂಬಂಧ ಪ್ರತಿಕ್ರಿಯೆ ಪಡೆಯುವುದಕ್ಕಾಗಿ ಇಲಾಖೆ ಸಚಿವರು, ಆಯುಕ್ತರು ಮತ್ತು ಪಿಎಂ ಪೋಷಣ್ ನಿರ್ದೇಶಕರಿಗೆ ‘ವಿಜಯವಾಣಿ’ ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ.