ಚೌತಿ ಹಬ್ಬಕ್ಕೆ ಕಳೆಗಟ್ಟಿದ ಮಲೆನಾಡು

Crowded in Gandhibazar market
ಗಾಂಧಿಬಜಾರ್ ಮಾರುಕಟ್ಟೆಯಲ್ಲಿ ಹಬ್ಬಕ್ಕೂ ಮುನ್ನ ದಿನ ಹೆಚ್ಚಿದ್ದ ಜನಜಂಗುಳಿ.
Published on

ಶಿವಮೊಗ್ಗ: ಮುಂಗಾರಿನ ಮುನಿಸಿನ ಮಧ್ಯೆ ಗೌರಿ-ಗಣೇಶ ಹಬ್ಬಕ್ಕೆ ಮಲೆನಾಡು ಸಜ್ಜಾಗಿದೆ. ನಾನಾ ವಿನ್ಯಾಸದ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಹಬ್ಬಕ್ಕೂ ಮುನ್ನ ದಿನ ಭಾನುವಾರ ಗೌರಿ-ಗಣೇಶ ಮೂರ್ತಿಗಳ ಜತೆಗೆ ಹಬ್ಬ ಆಚರಣೆಗೆ ಅಗತ್ಯವಿರುವ ವಸ್ತುಗಳ ಖರೀದಿ ಭರಾಟೆಯೂ ಜೋರಾಗಿತ್ತು.

ಶಿವಮೊಗ್ಗ ನಗರ ಸೇರಿ ಜಿಲ್ಲಾದ್ಯಂತ ಗಣೇಶೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು ಪೆಂಡಾಲ್, ಮೂರ್ತಿಗಳ ನಿರ್ಮಾಣ ಒಳಗೊಂಡಂತೆ ಕಳೆದೊಂದು ವಾರದಿಂದಲೇ ಎಲ್ಲೆಡೆ ಹಬ್ಬದ ಸಡಗರ ಕಳೆಕಟ್ಟಿದೆ. ಸೆ.18ರಂದು ಸರ್ಕಾರ ಸಾರ್ವತ್ರಿಕ ರಜೆ ಘೋಷಣೆ ಮಾಡಿದ್ದು ಶನಿವಾರದಿಂದಲೇ ಮಾರುಕಟ್ಟೆಗಳಿಗೆ ಗಣೇಶ ಮೂರ್ತಿಗಳ ಪ್ರವೇಶ ಆಗಿದ್ದು ಜನರು ಪರಿಸರ ಸ್ನೇಹಿ, ಮಣ್ಣಿಗೆ ಗಣಪತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಶಿವಮೊಗ್ಗದ ಪ್ರಮುಖ ವಾಣಿಜ್ಯ ಕೇಂದ್ರಗಳಾದ ಬಿ.ಎಚ್.ರಸ್ತೆ, ಗಾಂಧಿಬಜಾರ್, ನೆಹರು ರಸ್ತೆ, ದುರ್ಗಿಗುಡಿ, ಸವಳಂಗ ರಸ್ತೆ ಮುಂತಾದ ಕಡೆ ವ್ಯಾಪಾರ ವಹಿವಾಟು ಭರ್ಜರಿಯಾಗಿತ್ತು. ಅದರಲ್ಲೂ ಗಾಂಧಿಬಜಾರ್ ಮಾರುಕಟ್ಟೆಯಲ್ಲಿ ಜನಸಾಗರವೇ ಕಂಡುಬಂದಿತ್ತು. ಹಬ್ಬಕ್ಕೆ ಬೇಕಾದ ದಿನಸಿ ಸಾಮಗ್ರಿ, ಪೂಜೆಗೆ ಸಾಮಗ್ರಿ, ಹೊಸ ಬಟ್ಟೆ ಒಳಗೊಂಡಂತೆ ವಿವಿಧ ವಸ್ತುಗಳ ಖರೀದಿಯಲ್ಲಿ ಜನ ತೊಡಗಿದ್ದರು. ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ಭರ್ಜರಿಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net