Web Exclusive | ಯುವ ಸಮುದಾಯವನ್ನು ಕಾಡುತ್ತಿರುವ ಪಾರ್ಕಿನ್ಸನ್ಸ್; ಇಂದು ವಿಶ್ವ ಪಾರ್ಕಿನ್ಸನ್ಸ್ ಜಾಗೃತಿ ದಿನ

Web Ex
Published on

| ಪಂಕಜ ಕೆ.ಎಂ. ಬೆಂಗಳೂರು

ಪಾರ್ಕಿನ್ಸನ್ಸ್​ ಅಂಗವೈಕಲ್ಯ ಉಂಟುಮಾಡುವ ಹಾಗೂ ಮಿದುಳಿನ ಮೇಲೆ ದುಷ್ಪರಿಣಾಮ ಬೀರುವ ಕಾಯಿಲೆಯಾಗಿದ್ದು, ಈ ಹಿಂದೆ 60 ವರ್ಷ ಮೇಲ್ಪಟ್ಟವರಲ್ಲಿ ಕಂಡು ಬರುತ್ತಿದ್ದ ಈ ಸಮಸ್ಯೆ ಈಗ ಯುವಜನಾಂಗವನ್ನೂ (40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಹೆಚ್ಚು ಬಾಧಿಸುತ್ತಿದೆ.

ಭಾರತದಲ್ಲಿ ಪಾರ್ಕಿನ್ಸನ್ಸ್​ ಕಾಯಿಲೆ ವ್ಯಾಪಕವಾಗಿದ್ದು, ಪ್ರತಿ ಲಕ್ಷ ಜನಸಂಖ್ಯೆಯಲ್ಲಿ 300-350 ಮಂದಿ ಈ ಸಮಸ್ಯೆಗೆ ಒಳಗಾಗುತ್ತಿದ್ದಾರೆ. 2005ರಲ್ಲಿ ಜಗತ್ತಿನಾದ್ಯಂತ 50 ವರ್ಷ ಮೇಲ್ಪಟ್ಟ 46 ಲಕ್ಷ ಮಂದಿ ಪಾರ್ಕಿನ್ಸನ್ಸ್​​ಗೆ ಬಲಿಯಾಗಿದ್ದರು. ಈ ಪ್ರಮಾಣ 2030ರ ವೇಳೆಗೆ 93 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ಕೆಲ ಅಧ್ಯಯನಗಳಿಂದ ಅಂದಾಜಿಲಾಗಿದೆ. ಹಾಗಾಗಿ ಈ ಬಗ್ಗೆ ಜನರಲ್ಲಿ ಹೆಚ್ಚನ ಜಾಗೃತಿಯ ಅಗತ್ಯವಿದೆ ಎನ್ನುತ್ತಾರೆ ನರರೋಗ ತಜ್ಞರು.

ಕೋವಿಡ್​ನಿಂದ ಹೆಚ್ಚಿದ ಸಮಸ್ಯೆ: ಕೋವಿಡ್ ಮತ್ತು ಲಾಕ್​ಡೌನ್​ನಿಂದಾಗಿ ಪಾರ್ಕಿನ್ಸನ್ಸ್​ ರೋಗಿಗಳ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. ರೋಗಲಕ್ಷಣಗಳಾದ ಖಿನ್ನತೆ, ಆತಂಕ ಮತ್ತು ಭ್ರಮೆಗಳ ರೋಗಿಯ ವರ್ತನೆಯಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದಿದೆ. ಸಕಾಲದಲ್ಲಿ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಕಾರಣ ಸಮಸ್ಯೆ ಉಲ್ಬಣಿಸಿದ ನಂತರ ರೋಗಿಗಳು ಚಿಕಿತ್ಸೆ ಬರುತ್ತಿದ್ದಾರೆ ಎಂದು ವಿಕ್ರಂ ಆಸ್ಪತ್ರೆಯ ನರರೋಗ ತಜ್ಞ ಡಾ. ಕಿರಣ್ ಎಸ್. ಖಾನಾಪುರ ತಿಳಿಸಿದ್ದಾರೆ.

ಕಾಯಿಲೆಗೆ ಕಾರಣಗಳು: ಪಾರ್ಕಿನ್ಸನ್ಸ್ ಕಾಯಿಲೆಗೆ ನಿಖರ ಕಾರಣ ತಿಳಿದಿಲ್ಲ. ಆದಾಗಿಯೂ ಕೆಲ ಕಾರಣಗಳನ್ನು ಗುರುತಿಸಲಾಗಿದೆ. ಯಾವುದೇ ವ್ಯಕ್ತಿಯ ದೇಹಕ್ಕೆ ಕ್ರಿಮಿನಾಶಕಗಳು (ಎಂಡೋಟಾಕ್ಸಿನ್) ಮತ್ತು ಅಧಿಕ ಭಾರದ ಲೋಹಗಳು ಸೇರುವುದರಿಂದ. ಚಯಾಪಚನ ಪ್ರಭಾವಿಸುವ ಹಲವಾರು ವಂಶವಾಹಿ ಅಸಹಜತೆಗಳು ಅನುವಂಶೀಯ ಅಥವಾ ಕೌಟುಂಬಿಕ ಪಾರ್ಕಿನ್ಸನ್ಸ್​ ರೋಗಕ್ಕೆ ಕಾರಣವಾಗುತ್ತದೆ. ಗಡ್ಡೆಗಳು, ರಕ್ತನಾಳದ ಕೋಶಗಳ ನಶಿಸುವಿಕೆ, ಔಷಧಗಳು, ಚಯಾಪಚನ ರೋಗಗಳು ಕಾರಣ ಎಂದು ಗುರುತಿಸಲಾಗಿದೆ.

ಕಾಯಿಲೆಯ ಲಕ್ಷಣಗಳು: ವಿಶ್ರಾಂತ ಸ್ಥಿತಿಯಲ್ಲಿರುವಾಗ ಕೈ ಅಥವಾ ಕಾಲುಗಳ ಕಂಪನ, ಮಂದಗತಿಯ ಚಲನೆ, ಅವಯವಗಳು ಮತ್ತು ಶರೀರ ಸೆಟೆದುಕೊಳ್ಳುವಿಕೆ, ಕೀಲುನೋವು, ಕಾಲುನೋವು, ಬೆನ್ನುನೋವು ಉಲ್ಬಣಗೊಳ್ಳುವುದು, ದೇಹ ಸಮತೋಲನ ಕಳೆದುಕೊಂಡು ಬಾಗುವುದು. ಗ್ರಹಿಕೆಯಲ್ಲಿ ಸಮಸ್ಯೆ, ಅಸಂಬದ್ಧ ವರ್ತನೆ, ಜಡತ್ವ, ಚಡಪಡಿಸುವಿಕೆ, ಖಿನ್ನತೆ, ಆತಂಕ, ನಿದ್ರೆಯ ಕೊರತೆ, ಮಲಬದ್ಧತೆ, ಜೊಲ್ಲು ಸೋರುವಿಕೆ, ಮಾತನಾಡಲು ಹಾಗೂ ಆಹಾರ ಸೇವಿಸಲು ತೊಂದರೆ ಇತ್ಯಾದಿ ಕಾಯಿಲೆಯ ಲಕ್ಷಣಗಳು.

ಕಾಯಿಲೆ ಪತ್ತೆ ಹಾಗೂ ಚಿಕಿತ್ಸೆ: ವ್ಯಕ್ತಿಯ ಹಿನ್ನೆಲೆಯ ಜತೆಗೆ ಈ ಮೇಲಿನ ಲಕ್ಷಣಗಳನ್ನು ಆಧರಿಸಿ ಸಿಟಿ ಸ್ಕ್ಯಾನ್​, ಎಂಆರ್​ಐ ಸ್ಕ್ಯಾನ್​ ಸೇರಿ ಕೆಲ ವೈದ್ಯಕೀಯ ಪರೀಕ್ಷೆಗಳ ಮೂಲಕ ಕಾಯಿಲೆ ಏನು ಎಂಬುದನ್ನು ಪತ್ತೆ ಮಾಡಲಾಗುವುದು. ಆರಂಭದಲ್ಲಿ ಕೆಲ ಥೆರಪಿಗಳ ಮೂಲಕ ಕಾಯಿಲೆ ಉಲ್ಬಣಗೊಳ್ಳುವುದನ್ನು ನಿಯಂತ್ರಿಸಬಹುದಾಗಿದೆ. ಗಂಭೀರ ಹಂತ ತಲುಪಿದ್ದಲ್ಲಿ ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ ಎನ್ನುತ್ತಾರೆ ತಜ್ಞರು.

ಪಾರ್ಕಿನ್ಸನ್ಸ್​ ಕಾಯಿಲೆ ಇತಿಹಾಸ: ಪಾರ್ಕಿನ್ಸನ್ಸ್​ ಕಾಯಿಲೆ ಮುಖ್ಯವಾಗಿ ದೇಹದ ಚಲನೆಗಳ ಮೇಲೆ ದುಷ್ಪರಿಣಾಮ ಬೀರುವ ಮೂಲಕ ವ್ಯಕ್ತಿಯ ಎಲ್ಲ ಚಟುವಟಿಕೆಗಳು ಮಂದಗತಿಯಲ್ಲಿ ಸಾಗುವಂತೆ ಮಾಡುತ್ತದೆ. ಜತೆಗೆ ದೇಹ ನಡುಗಲು ಪ್ರಾರಂಭವಾಗುತ್ತದೆ. ಇದನ್ನು 1817ರಲ್ಲಿ ಜೇಮ್ಸ್​ ಪಾರ್ಕಿನ್ಸನ್ಸ್​ ಎಂಬುವವರು ಬರೆದ ಪ್ರಬಂಧದದಲ್ಲಿ ‘ಶೇಕಿಂಗ್ ಪಾಲ್ಸಿ’ ಎಂದು ಕರೆದರು. 1983ರಲ್ಲಿ ಜೆನ್ ಮಾರ್ಟಿನ್ ಚಾಕೋಟ್ ಇದರ ಕುರಿತು ವಿಸõತವಾಗಿ ವಿವರಿಸಿದರು. ನಂತರ ಈ ಕಾಯಿಲೆಗೆ ರ್ಪಾನ್ಸನ್ಸ್ ಎಂದು ಕರೆಯಲಾಯಿತು. ಜೇಮ್ಸ್​ ಪಾರ್ಕಿನ್ಸನ್ಸ್​ ಹುಟ್ಟಿದ ದಿನ ಏ. 11ರಂದು ‘ವಿಶ್ವ ರ್ಪಾನ್ಸನ್ಸ್ ಜಾಗೃತಿ ದಿನ’ವನ್ನಾಗಿ ಅಚರಿಸಲಾಗುತ್ತದೆ. ನಂತರದಲ್ಲಿ ಕಾಯಿಲೆ ಗುರುತಿಸುವಿಕೆ ಹಾಗೂ ಚಿಕಿತ್ಸೆ ಕುರಿತು ಹಲವರು ಸಂಶೋಧನೆ ನಡೆಸುವ ಮೂಲಕ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಬದಲಾದ ಜೀವನಶೈಲಿ, ಒತ್ತಡ ಇತ್ಯಾದಿ ಕಾರಣಗಳಿಂದಾಗಿ ಇತ್ತೀಚೆಗೆ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಪಾರ್ಕಿನ್ಸನ್ಸ್​ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ಆದರೆ ಈ ಕಾಯಿಲೆಗೆ ನಿಖರ ಕಾರಣ ತಿಳಿದಿಲ್ಲ. ಹಾಗಾಗಿ ಈ ಬಗ್ಗೆ ಜಗತ್ತಿನಾದ್ಯಂತ ಸಂಶೋಧನೆಗಳ ನಡೆಯುತ್ತಿದೆ. ಇದರಲ್ಲಿ ವಿಕ್ರಂ ಆಸ್ಪತ್ರೆ ಸಹ ತೊಡಗಿಕೊಂಡಿದ್ದು, ಸದ್ಯ ವಿಕ್ರಂ ಆಸ್ಪತ್ರೆಯಲ್ಲಿ ಅಪೊಮಾರ್ಫಿನ್ ಪಂಪ್ ಚಿಕಿತ್ಸೆಯನ್ನು ಆರಂಭಿಸಲಾಗಿದೆ.

| ಡಾ.ಎಲ್. ಕೆ. ಪ್ರಶಾಂತ್ ನರರೋಗ ತಜ್ಞ, ವಿಕ್ರಂ ಆಸ್ಪತ್ರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net