

| ಎಸ್.ಲಿಂಗರಾಜು ಮಂಗಲ ಹನೂರು
ವಿಷ ಪ್ರಸಾದ ಪ್ರಕರಣದಿಂದಾಗಿ ಬಂದ್ ಆಗಿದ್ದ ತಾಲೂಕಿನ ಸುಳವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇಗುಲ ಅ.21ರಿಂದ ಬಾಗಿಲು ತೆರೆಯಲಿರುವ ಹಿನ್ನೆಲೆಯಲ್ಲಿ ನವೀಕರಣ ಕಾರ್ಯ ಭರದಿಂದ ಸಾಗಿದೆ.
2018 ಡಿಸೆಂಬರ್ 14ರಂದು ದೇವಾಲಯದಲ್ಲಿ ವಿಷ ಪ್ರಸಾದ ಸೇವನೆಯಿಂದ 17 ಜನರು ಮೃತಪಟ್ಟರಲ್ಲದೆ, 125ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ದೇಗುಲವನ್ನು ವಶಕ್ಕೆ ಪಡೆದು, ಬಾಗಿಲನ್ನು ಬಂದ್ ಮಾಡಿ ಭಕ್ತರಿಗೆ ಪ್ರವೇಶ ನಿಷೇಧಿಸಿತ್ತು. ಆದಾಗ್ಯೂ ಕೆಲವು ಭಕ್ತರು ದೇಗುಲಕ್ಕೆ ಆಗಮಿಸಿ ಆವರಣದಲ್ಲಿ ಪೂಜೆ ಸಲ್ಲಿಸಿ ಹಿಂದಿರುಗುತ್ತಿದ್ದರು.
ದೇಗುಲದ ಬಾಗಿಲು ತೆರೆಯುವಂತೆ ಸ್ಥಳೀಯರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಳೆದ ವರ್ಷ ಮನವಿ ಮಾಡಿದ್ದರು. ಈ ದಿಸೆಯಲ್ಲಿ ಹಿರಿಯ ಆಗಮಿಕರೊಬ್ಬರು ಆಗಮಿಸಿ, ಪರಿಶೀಲನೆ ನಡೆಸಿ ದೇಗುಲದ ಬಾಗಿಲು ತೆರೆಯುವ ಸಂಬಂಧ ಸರ್ಕಾರಕ್ಕೆ ಮಾಹಿತಿ ನೀಡಿದ್ದರು. ಆದರೆ ಯಾವುದೇ ಕ್ರಮವಾಗಿರಲಿಲ್ಲ. ಇತ್ತೀಚೆಗೆ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಶಾಸಕ ಆರ್.ನರೇಂದ್ರ ಅವರ ಪ್ರಶ್ನೆಗೆ ಉತ್ತರಿಸಿದ್ದ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಅ. 20ರಿಂದ ದೇಗುಲದ ಬಾಗಿಲು ತೆರೆಯಲಾಗುವುದೆಂದು ಭರವಸೆ ನೀಡಿದ್ದರು. ಆದರೆ ಆ ದಿನ ಧಾರ್ವಿುಕ ಕಾರ್ಯಗಳಿಗೆ ಸರಿಹೊಂದದ ಕಾರಣ 21ಕ್ಕೆ ನಿಗದಿಪಡಿಸಲಾಗಿದೆ. ಇದನ್ನೂ ಓದಿ: Web Exclusive: ಬಿಳಿ ‘ಸೋನಾ’ಕ್ಕಿಲ್ಲ ಯೋಗ್ಯ ಬೆಲೆ; ಕರೊನಾದಿಂದಾಗಿ ಭತ್ತದ ಧಾರಣೆ ಕುಸಿತ
ಮೂರ್ನಾಲ್ಕು ದಿನಗಳಿಂದ ದೇಗುಲದ ನವೀಕರಣ ಕಾರ್ಯ ಭರದಿಂದ ಸಾಗುತ್ತಿದ್ದು, ಈಗಾಗಲೇ ಬಣ್ಣ ಬಳಿಯಲಾಗಿದೆ. ಅಲ್ಲದೆ, ಸಿಸಿ ಕ್ಯಾಮರಾ, ಯುಪಿಎಸ್ ಅಳವಡಿಸಲಾಗಿದ್ದು, ಸುತ್ತಮುತ್ತಲಿನ ಆವರಣ ಹಾಗೂ ಕುಡಿಯುವ ನೀರಿನ ತೊಂಬೆಗಳ ಸ್ವಚ್ಛತಾ ಕಾರ್ಯ ನಡೆಯá-ತ್ತಿದೆ. ಅ.21ರಂದು ಸಂಪ್ರದಾಯದಂತೆ ಪ್ರಾಯಶ್ಚಿತ್ತಾದಿ ಹೋಮ, ಹವನ ಹಾಗೂ ಇತರ ಧಾರ್ವಿುಕ ಕಾರ್ಯಗಳನ್ನು ನಡೆಸಿ ಭಕ್ತರಿಗೆ ದೇವಿಯ ದರ್ಶನ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ.
ಪಂಕ್ತಿ ಸೇವೆಗೆ ಬ್ರೇಕ್: ದೇಗುಲ ತೆರೆದ ಬಳಿಕವೂ ಯಾವುದೇ ಕಾರಣಕ್ಕೂ ಪಂಕ್ತಿ ಸೇವೆಗೆ ಅವಕಾಶ ನೀಡಲಾಗುವುದಿಲ್ಲ ಎನ್ನಲಾಗಿದೆ.
ಸರ್ಕಾರದ ಸೂಚನೆಯಂತೆ ಅ.21ರಿಂದ ದೇಗುಲದ ಬಾಗಿಲು ತೆರೆಯಬೇಕಾದ ಹಿನ್ನೆಲೆಯಲ್ಲಿ ನವೀಕರಣ ಕಾರ್ಯ ಕೈಗೊಳ್ಳಲಾಗಿದೆ. ಈಗಾಗಲೇ ದೇಗುಲಕ್ಕೆ ಬಣ್ಣ ಬಳಿಯಲಾಗಿದ್ದು, ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಮೂರು ದಿನಗಳ ಕಾಲ ನಡೆಯುವ ಧಾರ್ವಿುಕ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.| ಜಿ.ಎಚ್.ನಾಗರಾಜು ತಹಸೀಲ್ದಾರ್, ಹನೂರು
ವಿಷ ಪ್ರಸಾದ ದುರಂತ ಘಟನೆ ಬಳಿಕ ದೇಗುಲವನ್ನು ಬಂದ್ ಮಾಡಲಾಗಿತ್ತು. ಇದರಿಂದ ಭಕ್ತರು ದೇವಿಯ ದರ್ಶನದಿಂದ ವಂಚಿತವಾಗಿದ್ದರು. ಈ ಭಾಗದಲ್ಲಿ ಮಳೆ-ಬೆಳೆಯೂ ಚೆನ್ನಾಗಿ ಆಗುತ್ತಿರಲಿಲ್ಲ. ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಇದೀಗ ಸರ್ಕಾರ ದೇಗುಲವನ್ನು ತೆರೆಯುತ್ತಿರುವುದು ಸಂತಸದ ಸಂಗತಿ.
| ದೊಡ್ಡಭದ್ರಯ್ಯ ನಾಲ್ರೋಡ್ ನಿವಾಸಿ