WEB EXCLUSIVE |ಅರಣ್ಯ ಅಧಿಕಾರಿ ದಂಪತಿ ಕೈಯಲ್ಲಿ ಅರಳಿದೆ ಕಪ್ಪತ್ತಗುಡ್ಡ ಔಷಧ ಸಸ್ಯಗಳ ವಿಶೇಷ ಹೊತ್ತಿಗೆ

kappadagudda book
Published on

|ವಿಕ್ರಮ ನಾಡಿಗೇರ ಧಾರವಾಡ

ಈ ದಂಪತಿ ಅರಣ್ಯ ಇಲಾಖೆಯಲ್ಲಿ ಅಧಿಕಾರಿಗಳು. ಸರ್ಕಾರ ನೀಡಿರುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಇದರೊಟ್ಟಿಗೆ ಸಸ್ಯ ಸಂಪತ್ತಿನ ಬಗ್ಗೆ ಜನರಿಗೆ ಮಾಹಿತಿ ನೀಡುವ ಇವರ ವಿಶೇಷ ಕಾರ್ಯ ಜನಮನ್ನಣೆಗೆ ಪಾತ್ರವಾಗಿದೆ.

ಅವರೇ ಯಶಪಾಲ್ ಕ್ಷೀರಸಾಗರ ಮತ್ತು ಸೋನಲ್ ವೃಷ್ಣಿ. ಯಶಪಾಲ್ ಕ್ಷೀರಸಾಗರ ಅವರು ಧಾರವಾಡ ಅರಣ್ಯ ಉಪ ಸಂರಕ್ಷಣಾಧಿಕಾರಿ. ಇವರ ಪತ್ನಿ ಸೋನಲ್ ವೃಷ್ಣಿ ಅವರು ಗುಂಗರಗಟ್ಟಿ ಅರಣ್ಯ ಅಕಾಡೆಮಿ ಜಂಟಿ ನಿರ್ದೇಶಕಿ ಹಾಗೂ ಅರಣ್ಯ ಉಪ ಸಂರಕ್ಷಣಾಧಿಕಾರಿ. ಅರಣ್ಯಕ್ಕೆ ಕಾವಲಾದರೆ ಸಾಲದು, ಅರಣ್ಯವನ್ನು ಏಕೆ ಉಳಿಸಬೇಕು ಎಂಬ ಧ್ಯೇಯದೊಂದಿಗೆ ಗದಗ ಜಿಲ್ಲೆ ಕಪ್ಪತ್ತ ಗುಡ್ಡದಲ್ಲಿನ ಔಷಧೀಯ ಸಸ್ಯಗಳ ದಾಖಲೀಕರಣಗೊಳಿಸಿದ್ದಾರೆ.

ಬರೋಬ್ಬರಿ 375 ಸಸ್ಯಗಳ ಸಮಗ್ರ ಮಾಹಿತಿ ಸಂಗ್ರಹಿಸಿ ‘ಕಪ್ಪತ್ತಗುಡ್ಡ’ (ಗದಗ ಔಷಧೀಯ ಸಸ್ಯಗಳ ಒಂದು ಸಂಗ್ರಹ) ಎಂಬ ಪುಸ್ತಕವನ್ನು ಈ ದಂಪತಿ ಸಿದ್ಧಪಡಿಸಿದೆ. ಸಣ್ಣ ಬೆಂಡೆ, ಗುಲಗಂಜಿ, ಕೆಂಪು ಜಾಲಿ, ಕಾಡು ಸೀಗೆ, ಕುಪ್ಪಿ ಗಿಡ, ಉತ್ತರಾಣಿ ಸೇರಿದಂತೆ 375 ಔಷಧೀಯ ಸಸ್ಯಗಳ ಸಂತತಿ ಸೇರಿ ಅವುಗಳ ಸಮಗ್ರ ಮಾಹಿತಿ ಈ ಪುಸ್ತಕದಲ್ಲಿದೆ. ಜತೆಗೆ ಎಲ್ಲ ಸಸ್ಯಗಳ ಭಾವಚಿತ್ರಗಳನ್ನು ಸ್ವತಃ ಅವರೇ ಸೆರೆಹಿಡಿದಿರುವುದು ಮತ್ತೊಂದು ವಿಶೇಷ.

ಯಶಪಾಲ್ ಕ್ಷೀರಸಾಗರ ಮತ್ತು ಸೋನಲ್ ವೃಷ್ಣಿ ದಂಪತಿ.
ಯಶಪಾಲ್ ಕ್ಷೀರಸಾಗರ ಮತ್ತು ಸೋನಲ್ ವೃಷ್ಣಿ ದಂಪತಿ.

ಐಎಫ್​ಎಸ್​ನ 2011ನೇ ಬ್ಯಾಚ್​ನ ಈ ದಂಪತಿ 2015ರಿಂದ 3 ವರ್ಷ ಗದಗ ಜಿಲ್ಲೆಯ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಆಗ ಕಪ್ಪತ್ತಗುಡ್ಡ ಉಳಿಸುವ ಬೃಹತ್ ಆಂದೋಲನ ನಡೆದಿತ್ತು. ಇದರಿಂದ ಮತ್ತಷ್ಟು ಪ್ರೇರಣೆ ಪಡೆದು, ಔಷಧೀಯ ಸಸ್ಯಗಳ ಅಧ್ಯಯನ ನಡೆಸಿದ್ದಾರೆ.

2015ರಿಂದ ಸಸ್ಯಗಳ ಮಾಹಿತಿ ಕಲೆ ಹಾಕುವ ಕಾರ್ಯ ಆರಂಭಿಸಿದ ಅವರು, 6 ವರ್ಷ ಅಧ್ಯಯನ ನಡೆಸಿ 428 ಪುಟಗಳ ಪುಸ್ತಕ ಸಿದ್ಧಪಡಿಸಿದ್ದಾರೆ. ಹಣಕ್ಕಾಗಿ ಪುಸ್ತಕ ಮಾರಾಟ ಮಾಡದೆ, ಜನರಿಗೆ ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ಉಚಿತವಾಗಿ ನೀಡಲು ತೀರ್ಮಾನಿಸಿದ್ದಾರೆ.

ಪುಸ್ತಕದಲ್ಲಿ ಏನಿದೆ?: ಕಪ್ಪತ್ತಗುಡ್ಡದಲ್ಲಿ 500ಕ್ಕೂ ಹೆಚ್ಚು ಔಷಧೀಯ ಸಸ್ಯಗಳಿವೆ. ಅವುಗಳಲ್ಲಿ 375 ಜಾತಿಯ ಸಸ್ಯಗಳ ಮಾಹಿತಿ ಸಂಗ್ರಹಿಸಿ ಈ ಪುಸ್ತಕದಲ್ಲಿ ದಾಖಲೀಕರಣ ಮಾಡಲಾಗಿದೆ. ಪ್ರತಿ ಸಸ್ಯಗಳ ಪಟ್ಟಿ ಮಾಡಿ, ಆ ಸಸ್ಯದ ಜಾತಿ, ಫ್ಯಾಮಿಲಿ, ವೈಜ್ಞಾನಿಕ ಹೆಸರು, ಸಾಮಾನ್ಯ ಹೆಸರು (ಪರಿಚಿತ ಹೆಸರು), ಕನ್ನಡದ ಹೆಸರು, ಹೂವು, ಕಾಯಿ ಬಿಡುವ ಸಮಯ, ಸಸಿಯ ಎತ್ತರ, ಎಲೆಯ ಅಳತೆ, ವಿನ್ಯಾಸ ಹೀಗೆ ಸಸ್ಯದ ಸಂಪೂರ್ಣ ವೈಶಿಷ್ಟ್ಯ ಅದರಿಂದಾಗುವ ಆಯುರ್ವೇದ ಉಪಯೋಗದ ಮಾಹಿತಿ ಸಹ ನೀಡಿದ್ದಾರೆ.

24ರಂದು ಪುಸ್ತಕ ಬಿಡುಗಡೆ: ಜ.24ರಂದು ಗದಗ ರಿಂಗ್ ರಸ್ತೆಯಲ್ಲಿನ ಡಾ. ಅಂಬೇಡ್ಕರ್​ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಕಪ್ಪತ್ತಗುಡ್ಡ ಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ, ಅರಣ್ಯ ಇಲಾಖೆ ಸಚಿವ ಆನಂದ ಸಿಂಗ್, ಅರಣ್ಯ ಪಡೆ ಮುಖ್ಯಸ್ಥ ಸಂಜಯ ಮೋಹನ, ಅಜಯ ಮಿಶ್ರಾ ಪಾಲ್ಗೊಳ್ಳಲಿದ್ದಾರೆ.

ಕಪ್ಪತ್ತಗುಡ್ಡ ಉಳಿವಿಗೆ ಗದಗನ ಶ್ರೀ ತೋಂಟದ ಸಿದ್ಧಲಿಂಗ ಸ್ವಾಮೀಜಿ ಪ್ರಯತ್ನಿಸಿದ್ದರು. ಆಗ ಗುಡ್ಡದ ಮಾಹಿತಿ ತಿಳಿದಾಗ ಔಷಧೀಯ ಸಸ್ಯಗಳ ಬಗ್ಗೆ ಗೊತ್ತಾಗಿದೆ. ಆದರೆ ದಾಖಲೀಕರಣ ಇಲ್ಲದ್ದನ್ನು ಸ್ಫೂರ್ತಿಯಾಗಿ ಪಡೆದು ಪುಸ್ತಕ ರಚಿಸಲು ನಿರ್ಧರಿಸಿದೆ. ಕಚೇರಿ ಕೆಲಸದ ಬಳಿಕ ಈ ಕಾರ್ಯದಲ್ಲಿ ತೊಡಗುತ್ತಿದ್ದರಿಂದ ಪುಸ್ತಕ ಸಿದ್ಧವಾಗಲು 6 ವರ್ಷ ಬೇಕಾಯಿತು.

| ಯಶಪಾಲ್ ಕ್ಷೀರಸಾಗರ ಅರಣ್ಯ ಉಪಸಂರಕ್ಷಣಾಧಿಕಾರಿ, ಧಾರವಾಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net