

| ವಿ.ಕೆ. ರವೀಂದ್ರ ಕೊಪ್ಪಳ
ಪ್ರಸಕ್ತ ಸಾಲಿನ ಜವಾಹರ್ ನವೋದಯ ವಿದ್ಯಾಲಯ ಶಾಲೆ ಆರನೇ ತರಗತಿ ಪ್ರವೇಶಕ್ಕೆ ಕೇಂದ್ರದ ನೂತನ ಮೀಸಲು ಪಟ್ಟಿ ಅನ್ವಯಿಸಿದ್ದು, ಆಯ್ಕೆಯಾದ 1,600ಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.
ಕೇಂದ್ರದ ಅಧೀನದ ಈ ವಿದ್ಯಾಲಯಕ್ಕೆ ಪ್ರತಿಸಲದಂತೆ ಈ ವರ್ಷವೂ ಆರನೇ ತರಗತಿ ಪ್ರವೇಶಕ್ಕೆ 2019ರ ನವೆಂಬರ್ನಲ್ಲಿ ಅರ್ಜಿ ಆಹ್ವಾನಿಸಿ, ಈ ವರ್ಷದ ಜನವರಿಯಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈ ವರ್ಷ ಸಾಮಾನ್ಯ, ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಮೀಸಲಿನಡಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಿತ್ತು. ಅರ್ಜಿ ಸಲ್ಲಿಕೆ ವೇಳೆ ಕಡ್ಡಾಯವಾಗಿ ಕೇಂದ್ರ ಪಟ್ಟಿಯಲ್ಲಿರುವಂತೆ ಮೀಸಲು ಅನ್ವಯವಾಗಲಿದೆ ಎಂದು ತಿಳಿಸಿಲ್ಲ. ವಿದ್ಯಾರ್ಥಿಗಳು ಸಂಪ್ರದಾಯದಂತೆ ರಾಜ್ಯ ಮೀಸಲು ಪಟ್ಟಿಯಂತೆ ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಜತೆಗೆ ಪರೀಕ್ಷೆಯನ್ನೂ ಬರೆದು ಅದೇ ಮೀಸಲಿನಡಿ ಆಯ್ಕೆಯಾಗಿದ್ದಾರೆ. ಆದರೆ, ಶಾಲೆಯಲ್ಲಿ ದಾಖಲಾತಿ ಮಾಡಿಸುವಾಗ ಮೀಸಲಿನಡಿ ಆಯ್ಕೆಯಾದವರು ಕಡ್ಡಾಯವಾಗಿ ಕೇಂದ್ರ ಮೀಸಲು ಪಟ್ಟಿಯಲ್ಲಿರುವ ಜಾತಿಯವರಾಗಿರಬೇಕು. ಅದಕ್ಕೆ ಸಂಬಂಧಿತ ಪ್ರಮಾಣಪತ್ರ ತಂದರೆ ಮಾತ್ರ ಪ್ರವೇಶ ಎನ್ನುತ್ತಿದ್ದಾರೆ ಪ್ರಾಚಾರ್ಯರು.
ವೀರಶೈವ ಲಿಂಗಾಯತ ಸೇರಿ ಇತರ ಕೆಲ ಜಾತಿಗಳು ಕೇಂದ್ರ ಹೊರಡಿಸಿದ ಮೀಸಲು ಪಟ್ಟಿಯಲ್ಲಿ ಇರದ ಕಾರಣ ಆಯ್ಕೆಯಾದ 1,600ಕ್ಕೂ ಅಧಿಕ ವಿದ್ಯಾರ್ಥಿಗಳು ಮುಂದೇನು ಎಂದು ಚಿಂತೆ ಮಾಡುತ್ತಿದ್ದಾರೆ. ಹಿಂದಿನ ವರ್ಷದವರೆಗೂ ರ್ಯಾಂಕ್ ಆಧರಿಸಿ ದಾಖಲಾತಿ ಮಾಡಿಕೊಳ್ಳಲಾಗಿದೆ. ಈ ವರ್ಷ ಕೇಂದ್ರ ಮೀಸಲು ಪಟ್ಟಿ ಕಡ್ಡಾಯಗೊಳಿಸಿದ್ದು, ಗೊಂದಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: Web Exclusive: ಮಕ್ಕಳನ್ನು ಬೆಳೆಸುವಾಗ ಹೆತ್ತವರು ಪಾಲಿಸಲೇಬೇಕಾದ ಸೂತ್ರಗಳಿವು…
ಸಮಸ್ಯೆ ಸಂಬಂಧ ಅಧಿಕಾರಿಗಳಿಗೆ ಪಾಲಕರು ಮನವಿ ಮಾಡಿದ್ದಾರೆ. ಅಲ್ಲದೆ ಅಧಿಕಾರಿಗಳ ನಡೆ ಪ್ರಶ್ನಿಸಿ ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ದಾರೆ. ಅರ್ಜಿ ಪರಿಶೀಲಿಸಿದ ನ್ಯಾಯಾಲಯವು ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಂತೆ ಸೂಚಿಸಿದೆ. ಮತ್ತೊಂದೆಡೆ ಆಯಾ ಶಾಲೆ ಪ್ರಾಚಾರ್ಯರು ಪ್ರಾದೇಶಿಕ ಕಚೇರಿಗೆ ಪತ್ರ ಬರೆದಿದ್ದು, ಅಲ್ಲಿಂದ ನೂತನ ಆದೇಶ ಬರುವುದನ್ನು ಕಾಯುತ್ತಿದ್ದಾರೆ.
ಕೇಂದ್ರ ಮೀಸಲು ಪಟ್ಟಿ ಅನ್ವಯ ಪ್ರವೇಶ ನೀಡಲು ಕೇಂದ್ರ ಕಚೇರಿಯಿಂದ ನಿರ್ದೇಶನ ಬಂದಿದೆ. ಹೀಗಾಗಿ ಆಯ್ಕೆಯಾದ ವಿದ್ಯಾರ್ಥಿಗಳ ಪೈಕಿ ಕೆಲವರಿಗೆ ಪ್ರವೇಶ ಪಡೆಯಲು ತೊಂದರೆಯಾಗಿದೆ. ಈ ಬಗ್ಗೆ ಕೇಂದ್ರ ಕಚೇರಿಗೆ ಪತ್ರ ಬರೆದು ಸ್ಪಷ್ಟನೆ ಕೇಳಿದ್ದೇವೆ. ಅಲ್ಲಿಯವರೆಗೆ ಪ್ರವೇಶ ಪ್ರಕ್ರಿಯೆ ಇಲ್ಲ, ಬೇರೆಯವರಿಗೂ ಸೀಟು ಹಂಚಿಕೆ ಇಲ್ಲ. | ಜಿ.ಅನಸೂಯ ಡೆಪ್ಯೂಟಿ ಕಮಿಷನರ್, ನವೋದಯ ವಿದ್ಯಾಲಯ ಸಮಿತಿ, ಹೈದರಾಬಾದ್. ಪರೀಕ್ಷೆಗೆ ಅರ್ಜಿ ಕರೆದು, ಆಯ್ಕೆಪಟ್ಟಿ ಪ್ರಕಟಿಸುವಾಗಲೂ ನಮಗೆ ಕೇಂದ್ರ ಮೀಸಲು ಪಟ್ಟಿ ಅನ್ವಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿಲ್ಲ. ನೋಟಿಫಿಕೇಷನ್ನಲ್ಲೂ ಈ ಬಗ್ಗೆ ಉಲ್ಲೇಖವಿಲ್ಲ. ದಾಖಲಾತಿ ಮಾಡಿಸುವಾಗ ಗಮನಕ್ಕೆ ಬಂದಿದೆ. ಮೊದಲೇ ತಿಳಿಸಿದ್ದರೆ ಸಾಮಾನ್ಯ ವರ್ಗದಡಿ ಅರ್ಜಿ ಸಲ್ಲಿಸುತ್ತಿದ್ದೆವು. ನನ್ನ ಇಬ್ಬರು ಮಕ್ಕಳು ಈ ಹಿಂದೆ ರಾಜ್ಯ ಮೀಸಲು ಪ್ರಮಾಣಪತ್ರ ಸಲ್ಲಿಸಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಿದ್ದು, ದಾಖಲಾತಿ ನೀಡುವಂತೆ ಆದೇಶಿಸಿದರೂ ಅಧಿಕಾರಿಗಳು ಒಪ್ಪುತ್ತಿಲ್ಲ. | ಪುರುಷೋತ್ತಮಯ್ಯ ಸಾರಂಗಮಠ ಮುಧೋಳ.