

ಶಿವಾನಂದ ತಗಡೂರು ಬೆಂಗಳೂರು : ಬಹುಚರ್ಚಿತ ಮಹಾದಾಯಿ ಯೋಜನೆಗೆ ಒಂದಿಲ್ಲೊಂದು ಅಡ್ಡಿ ಆತಂಕಗಳು ಎದುರಾಗುತ್ತಲೇ ಇವೆ. ರಾಜ್ಯ ಮತ್ತು ಗೋವಾ ನಡುವೆ ಇದ್ದ ಅಂತರರಾಜ್ಯ ಜಲ ವಿವಾದ ನ್ಯಾಯಾಧಿಕರಣ ತೀರ್ಪು ನೀಡಿದ ಮೇಲೆ ಯೋಜನೆಗೆ ಶರವೇಗದ ಚಾಲನೆ ಸಿಗಲಿದೆ ಎನ್ನುವ ನಿರೀಕ್ಷೆ ಸುಳ್ಳಾಗಿದೆ. ಯೋಜನೆಗೆ 200 ಹೆಕ್ಟೇರ್ ಅರಣ್ಯ ಭೂಮಿ ಅಗತ್ಯವಿದ್ದು, ಅದಕ್ಕೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಪ್ರಸ್ತವಾನೆ ಸಲ್ಲಿಸಿದೆ. ಅಲ್ಲದೆ, ಹಲವು ಪತ್ರ ಬರೆದರೂ, ಇನ್ನೂ ಅನುಮತಿ ಮಾತ್ರ ಸಿಕ್ಕಿಲ್ಲ. ಈ ಬಗ್ಗೆ ಕೇಂದ್ರ ಸಚಿವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಪರಿಸರ ಮಂತ್ರಾಲಯದ ಅನುಮತಿ ಇಲ್ಲದೆ ಯೋಜನೆಯನ್ನು ಅನುಷ್ಠಾನಗೊಳಿಸುವುದು ಜಲಸಂಪನ್ಮೂಲ ಇಲಾಖೆಗೆ ಕಷ್ಟ ಸಾಧ್ಯವಾಗಿದೆ.
ಕಳಸಾ ಬಂಡೂರಿ ಯೋಜನೆ ಜಾರಿ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡಬೇಕು. ಈ ಯೋಜನೆಗಾಗಿ ಸರ್ಕಾರ ತನ್ನ ಬದ್ದತೆಯನ್ನು ಪ್ರದರ್ಶನ ಮಾಡಬೇಕು. -ಹೆಸರು ಬೇಡ, ಜಲಸಂಪನ್ಮೂಲ ಇಲಾಖೆ ಅಧಿಕಾರಿ.
500 ಕೋಟಿ ನೆರವು : 1500 ಕೋಟಿ ರೂ ಅಂದಾಜು ವೆಚ್ಚದ ಮಹಾದಾಯಿ ಯೋಜನೆಗೆ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ 500 ಕೋಟಿ ರೂ ಅನುದಾನವನ್ನು ಬಜೆಟ್ನಲ್ಲಿ ಒದಗಿಸಿತ್ತು. ಆದರೆ ಅದೂ ಕೂಡ ಕರೊನಾ ಕಾರಣದಿಂದ ನಿರೀಕ್ಷೆಯಷ್ಟು ಅನುದಾನ ಬಿಡುಗಡೆ ಆಗಲಿಲ್ಲ. ಹಾಗಾಗಿ ಯೋಜನೆ ಇನ್ನೂ ಕುಂಟುತ್ತಾ, ತೆವಳುತ್ತಲೇ ಸಾಗುತ್ತಿದೆ.
ಮಹತ್ವದ ಮಹಾದಾಯಿ : ಉತ್ತರ ಕರ್ನಾಟಕ ಭಾಗದ ರಾಜಕಾರಣದಲ್ಲಿ ಮಹತ್ವದ ಪಾತ್ರ ಪಡೆದುಕೊಂಡ ಮಹಾದಾಯಿ ಯೋಜನೆ ಬಗ್ಗೆ ನಿರಂತರ ಚಳವಳಿಗಳು ನಡೆದಿದ್ದು ಇತಿಹಾಸ. ಯೋಜನೆಗೆ ನ್ಯಾಯಾಧಿಕರಣ ನೀರು ಹಂಚಿಕೆ ಮಾಡಿದ ಸಂತಸಕ್ಕೆ ಚಳವಳಿಗಳು ತೀವ್ರತೆ ಕಳೆದುಕೊಂಡಿರುವುದು ಸುಳ್ಳೇನಲ್ಲ.
ಯೋಜನೆ ಏನು ಎತ್ತ? : ಮಹಾದಾಯಿಗೆ ಜಲಾಶಯ ನಿರ್ಮಾಣ ಮಾಡಿ ಅಲ್ಲಿಂದ ಕಳಸಾ ಮತ್ತು ಬಂಡೂರಿ ನಾಲೆಗಳ ಮೂಲಕ ಕುಡಿಯುವ ನೀರು ಯೋಜನೆ ರೂಪಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಕಳಸಾ ನಾಲೆಗೆ 1.72 ಟಿಎಂಸಿ, ಬಂಡೂರಿ ನಾಲೆಗೆ 2.18 ಟಿಎಂಸಿ ನೀರು ಹಂಚಿಕೆಯನ್ನು ಮಾಡಲಾಗಿದೆ. ಈ ನಿಟ್ಟಿನಲ್ಲಿ ಕೆಲ ಕಾಮಗಾರಿಗಳು ನಡೆದಿದ್ದರೂ, ಈಗ ಎಲ್ಲವೂ ಅರ್ಧಕ್ಕೆ ನಿಂತಿವೆ.
ನದಿ ಬಗ್ಗೆ ವಿವರ : 81 ಕಿ.ಮೀ. ಉದ್ದವಿರುವ ಈ ನದಿ ಕರ್ನಾಟಕದಲ್ಲಿ 35 ಕಿಲೋಮೀಟರ್ , ಗೋವಾದಲ್ಲಿ 45 ಕಿ.ಮೀ, ಮಹಾರಾಷ್ಟ್ರದಲ್ಲಿ 1 ಕಿ.ಮೀ. ಹರಿಯುತ್ತದೆ. ದೂಧ್ಸಾಗರ ಜಲಪಾತ ಮತ್ತು ವರಪೋಹಾ ಜಲಪಾತ ಈ ನದಿಯ ಹೆಗ್ಗಳಿಕೆ ಮತ್ತು ಪ್ರಮುಖ ಆಕರ್ಷಣೆ.
ನೀರು ಹಂಚಿಕೆ : ಕಳಸಾ -ಬಂಡೂರಿ ನಾಲಾ ಯೋಜನೆಯ ಭಾಗವಾಗಿ ಮಹಾದಾಯಿ ನದಿಯಿಂದ ಸ್ವಲ್ಪ ನೀರನ್ನು ಮಲಪ್ರಭಾ ನದಿ ಜಲಾನಯನ ಪ್ರದೇಶಕ್ಕೆ ತಿರುಗಿಸಲು ಕರ್ನಾಟಕ ಸರ್ಕಾರ ಪ್ರಸ್ತಾಪಿಸಿದೆ. ಮಹಾದಾಯಿ ನೀರು ನ್ಯಾಯಾಧಿಕರಣ, ಗೋವಾಕ್ಕೆ 24 ಟಿಎಂಸಿ (9.395 ಟಿಎಂಸಿ ಚಾಲ್ತಿಯಲ್ಲಿರುವ ಬಳಕೆಗಳನ್ನು ಹೊರತುಪಡಿಸಿ), ಕರ್ನಾಟಕಕ್ಕೆ 13.42 ಟಿಎಂಸಿ ಬಳಸಲು ಅನುಮತಿಸಿ ತೀರ್ಪು ನೀಡಿದೆ.