

| ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ
ಮೊಬೈಲ್ ನಂಬರ್, ಬ್ಯಾಂಕ್ ಅಕೌಂಟ್ ನಂಬರ್, ಒಟಿಪಿ ಮತ್ತಿತರ ಮಾಹಿತಿ ಪಡೆದು ವಂಚಿಸುತ್ತಿದ್ದ ಸೈಬರ್ ಕಳ್ಳರು ಇದೀಗ ಇ-ಮೇಲ್ಗಳನ್ನು ಹ್ಯಾಕ್ ಮಾಡಿ, ಅದೇ ಹೆಸರಲ್ಲಿ ನಕಲಿ ಮೇಲ್ ಸೃಷ್ಟಿಸುವ ಮೂಲಕ ವಂಚಿಸುವ ಹೊಸ ಕುತಂತ್ರಕ್ಕೆ ಮುಂದಾಗಿದ್ದಾರೆ.
ಸೈಬರ್ ಅಪರಾಧ ಲೋಕ ದಿನದಿಂದ ದಿನಕ್ಕೆ ವಿಸ್ತರಣೆಯಾಗುತ್ತಿದ್ದು, ಸೈಬರ್ ಕಳ್ಳರು ಹೊಸ ಬಗೆಯ ವಂಚನೆಯ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಶ್ರೀಮಂತರು, ದೊಡ್ಡ ಕಂಪನಿಗಳ ವ್ಯಾಪಾರ- ವಹಿವಾಟಿನ ಮೇಲೆ ಕಳ್ಳನೋಟ ಇಟ್ಟಿರುವ ವಂಚಕರು, ಇ-ಮೇಲ್ಗಳನ್ನು ಹ್ಯಾಕ್ ಮಾಡಿ ಅದರಲ್ಲಿನ ಮಾಹಿತಿ ಕದ್ದು, ಅದೇ ಹೆಸರಿನ ಮತ್ತೊಂದು ಮೇಲ್ ಸೃಷ್ಟಿಸಿ ವಂಚಿಸುತ್ತಿದ್ದಾರೆ.
ಇಂಥಹದ್ದೇ ಒಂದು ಘಟನೆ ಧಾರವಾಡದ ರಾಯಾಪುರದಲ್ಲಿ ನಡೆದಿದೆ. ಸರ್ಕಾರಿ ಸ್ವಾಮ್ಯಕ್ಕೆ ಒಳಪಟ್ಟಿರುವ ಇಂಡಕ್ಷನ್ ಮೋಟಾರ್ ಮತ್ತು ಎಲೆಕ್ಟ್ರಿಕಲ್ ಟ್ರಾನ್ಸ್ಫಾರ್ಮರ್ ಉತ್ಪಾದಿಸುವ ನ್ಯೂ ಗವರ್ನಮೆಂಟ್ ಎಲೆಕ್ಟ್ರಿಕಲ್ ಫ್ಯಾಕ್ಟರಿ (ಎನ್ಜಿಇಎಫ್) ಆನ್ಲೈನ್ ಮೂಲಕ ವ್ಯವಹಾರ ನಡೆಸುತ್ತಿತ್ತು. ಇದನ್ನೂ ಓದಿ: Web Exclusive: ಹಾಸನಾಂಬೆ ದರ್ಶನ ಈ ಬಾರಿ ಅನುಮಾನ; ಸಂಭ್ರಮ ಕಸಿದ ಕರೊನಾ
ಉತ್ಪಾದನೆಗೆ ಬೇಕಾಗುವ ಕಚ್ಚಾ ವಸ್ತುಗಳನ್ನು ಬೆಂಗಳೂರಿನ ಹೈಟೆಕ್ ಬೇರಿಂಗ್ ಪ್ರೖೆವೇಟ್ ಲಿಮಿಟೆಡ್ನಿಂದ ಆನ್ಲೈನ್ ಮೂಲಕ ಖರೀದಿಸುತ್ತಿತ್ತು. ಕಚ್ಚಾ ವಸ್ತು ಕಳುಹಿಸುವಂತೆ ಎನ್ಜಿಇಎಫ್ ಸೆ.12ರಂದು ಹೈಟೆಕ್ ಬೇರಿಂಗ್ ಕಂಪನಿಯ ಮೇಲ್ ಕಳುಹಿಸಿತ್ತು. ಎನ್ಜಿಇಎಫ್ ಮೇಲ್ ಹ್ಯಾಕ್ ಮಾಡಿದ್ದ ವಂಚಕರು ಹೈಟೆಕ್ ಬೇರಿಂಗ್ ಕಂಪನಿಯ ಹೆಸರಲ್ಲಿ ನಕಲಿ ಮೇಲ್ ಸೃಷ್ಟಿಸಿದ್ದರು. ‘ಎಚ್ಟಿಬಿಎಲ್’ ಬದಲು ‘ಎಬಿಟಿಎಲ್’ ಎಂದು ಬದಲಿಸಿ ಹೊಸ ಮೇಲ್ ಸೃಷ್ಟಿಸಿದ್ದರು.
ನಕಲಿ ಮೇಲ್ನಿಂದ ಟ್ಯಾಕ್ಸ್ ಇನ್ವೈಸ್, ಅಕೌಂಟ್ ನಂಬರ್ ಕಳುಹಿಸಿ ಹಣ ವರ್ಗಾಯಿಸುವಂತೆ ಸಂದೇಶ ರವಾನಿಸಿದ್ದರು. ಎಂದಿನಂತೆ ಮೇಲ್ ಮೂಲಕ ಆನ್ಲೈನ್ನಲ್ಲಿ ಹಣ ವರ್ಗಾವಣೆ ಮಾಡುತ್ತಿದ್ದ ಎನ್ಜಿಇಎಫ್ 94,788 ರೂ. ಹಣ ವರ್ಗಾಯಿಸಿತ್ತು. ಮತ್ತೊಂದು ಕಂಪನಿಗೆ ಮೇಲ್ ಕಳುಹಿಸಿದಾಗ 1,35,464 ರೂ. ಕಳುಹಿಸುವಂತೆ ನಕಲಿ ಮೇಲ್ನಿಂದ ಉತ್ತರ ಬಂದಾಗ ಎಚ್ಚೆತ್ತುಕೊಂಡ ಕಂಪನಿ ಹುಬ್ಬಳ್ಳಿ- ಧಾರವಾಡ ಸೈಬರ್ ಕ್ರೖೆಂ ಪೊಲೀಸ್ ಠಾಣೆಗೆ ದೂರು ನೀಡಿದೆ.
ಇಂತಹ ಸೈಬರ್ ವಂಚನೆಯಿಂದ ಬಚಾವಾಗಲು ಜಾಗೃತಿ ಮತ್ತು ಎಚ್ಚರಿಕೆಯೊಂದೇ ಸದ್ಯಕ್ಕಿರುವ ಮಾರ್ಗ. ಒಂದು ವೇಳೆ ವಂಚನೆಯಾದಲ್ಲಿ ಕೂಡಲೇ ಪೊಲೀಸರ ಗಮನಕ್ಕೆ ತಂದರೆ ಅವರು ಆ ಮೇಲ್ಗಳನ್ನು ಬ್ಲಾಕ್ ಮಾಡುವ ಮೂಲಕ ಹೆಚ್ಚಿನ ಹಾನಿ ತಪ್ಪಿಸುತ್ತಾರೆ. ಇದನ್ನೂ ಓದಿ: Web Exclusive: ಪೊಲೀಸರಿಗೆ ಸಿಗುತ್ತಿಲ್ಲ ‘ಆರೋಗ್ಯ ಭಾಗ್ಯ’; ಚಿಕಿತ್ಸೆ ಸಿಗಲ್ಲವೆಂದು ಭಿತ್ತಿಪತ್ರ ಅಂಟಿಸಿದ ಆಸ್ಪತ್ರೆಗಳು
ದೊಡ್ಡ ದೊಡ್ಡ ಕಂಪನಿಗಳ ಆನ್ಲೈನ್ ವ್ಯವಹಾರದ ಮೇಲೆ ಕಣ್ಣಿಟ್ಟಿರುವ ವಂಚಕರು ನಕಲಿ ಮೇಲ್ ಸೃಷ್ಟಿಸಿ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕು. ವಂಚನೆಗೀಡಾದಲ್ಲಿ ತಕ್ಷಣ ಸೈಬರ್ ಕ್ರೖೆಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು. | ಎಸ್.ಬಿ. ಮಾಳಗೊಂಡ, ಇನ್ಸ್ಪೆಕ್ಟರ್, ಹು-ಧಾ ಸೈಬರ್ ಕ್ರೖೆಂ ಪೊಲೀಸ್ ಠಾಣೆ