

| ಕಿರಣ್ ಮಾದರಹಳ್ಳಿ ಚಾಮರಾಜನಗರ
ಸಸ್ಯ ಸಂಪತ್ತು, ವನ್ಯಜೀವಿಗಳ ಸಂರಕ್ಷಣೆಯ ಜವಾಬ್ದಾರಿ ಹೊತ್ತಿರುವ ಅರಣ್ಯ ಇಲಾಖೆಯನ್ನು ಕಾಡುತ್ತಿರುವ ಸಿಬ್ಬಂದಿ ಕೊರತೆಗೆ ಉಪವಲಯ ಅರಣ್ಯಾಧಿಕಾರಿ ಮತ್ತು ಮೋಜಣಿದಾರರ ನೇಮಕಾತಿ (ಡಿವೈಆರ್ಎಫ್ಒ) ಟಾನಿಕ್ ನೀಡಿದೆ.
ಅರಣ್ಯ ಇಲಾಖೆ 273 ಡಿವೈಆರ್ಎಫ್ಒಗಳನ್ನು ನೇಮಕಾತಿ ಮಾಡಿಕೊಂಡು ಇತ್ತೀಚೆಗಷ್ಟೆ ವೃತ್ತಿ ಬುನಾದಿ ತರಬೇತಿ ನೀಡಿ ಕರ್ತವ್ಯಕ್ಕಿಳಿಸಿದೆ. ಇಲಾಖೆಯಲ್ಲಿ ಸುಮಾರು 2,734 ಹುದ್ದೆಗಳಲ್ಲಿದ್ದ ಹಲವರು ನಿವೃತ್ತಿ ಹೊಂದಿದ ಪರಿಣಾಮ ಉಂಟಾಗಿದ್ದ ಸಿಬ್ಬಂದಿ ಕೊರತೆಯನ್ನು ಈ ನೇಮಕಾತಿ ಪ್ರಕ್ರಿಯೆ ನೀಗಿಸಿದೆ.
2019ರ ಜೂ.7ರಂದು 210 ಡಿವೈಆರ್ಎಫ್ಒಗಳು ನೇರ ನೇಮಕಾತಿಯಾಗಿ ವೃತ್ತಗಳಿಗೆ ಹಾಜರಾಗಿದ್ದರು. ಇವರಿಗೆ ಜೂ.10ರಿಂದ 2020ರ ಅ.15ರವರೆಗೆ ಧಾರವಾಡದ ಗುಂಗರಗಟ್ಟಿಯ ರಾಜ್ಯ ಅರಣ್ಯ ಅಕಾಡೆಮಿ ಮತ್ತು ಇಲವಾಲದಲ್ಲಿರುವ ಅರಣ್ಯ ತರಬೇತಿ ಕೇಂದ್ರದಲ್ಲಿ ವೃತ್ತಿ ಬುನಾದಿ ತರಬೇತಿ ನೀಡಲಾಗಿದೆ. ಎರಡನೇ ಸುತ್ತಿನಲ್ಲಿ ಆಯ್ಕೆಯಾಗಿರುವ 63 ಡಿವೈಆರ್ಎಫ್ಒಗಳಿಗೆ ಮಡಿಕೇರಿಯ ಅರಣ್ಯ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತಿದೆ.
ನೂತನವಾಗಿ ಆಯ್ಕೆಯಾಗಿರುವವರು ಬೆಳಗಾವಿ-13, ಬಳ್ಳಾರಿ-1, ಬೆಂಗಳೂರು-18, ಕೆನರಾ(ಶಿರಸಿ)-75, ಚಾಮರಾಜನಗರ-30, ಚಿಕ್ಕಮಗಳೂರು-14, ಧಾರವಾಡ-8, ಹಾಸನ-12, ಕಲಬುರುಗಿ-1, ಕೊಡಗು- 28, ಮಂಗಳೂರು-15, ಮೈಸೂರು- 23, ಶಿವಮೊಗ್ಗ-35 ಅಭ್ಯರ್ಥಿಗಳು ಜಿಲ್ಲೆಗಳ ವಲಯ ಅರಣ್ಯಗಳಿಗೆ ಕರ್ತವ್ಯಕ್ಕೆ ನಿಯುಕ್ತಿಗೊಂಡಿದ್ದಾರೆ. ಅರಣ್ಯ ರಕ್ಷಣೆ, ಅಭಿವೃದ್ಧಿಯ ಜವಾಬ್ದಾರಿಯನ್ನು ನಿರ್ವಹಿಸಲು ಶುರು ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿರುವ ಕಳ್ಳಬೇಟೆ ಪ್ರಕರಣಗಳನ್ನು ಮಟ್ಟ ಹಾಕಲು ಡಿವೈಆರ್ಎಫ್ಒ ನೇಮಕಾತಿ ಬಲ ತುಂಬಿದೆ. ಚಾಮರಾಜನಗರಕ್ಕೆ ನೇಮಕವಾಗಿರುವ 30 ಅಧಿಕಾರಿಗಳನ್ನು ಬಳಸಿಕೊಂಡು ಅಪರಾಧ ಪ್ರಕರಣಗಳನ್ನು ತಡೆಯಲು ಅರಣ್ಯ ಕ್ಷಿಪ್ರ ಕಾರ್ಯಪಡೆಯನ್ನು ರಚಿಸಲಾಗಿದೆ.
ಡಿವೈಆರ್ಎಫ್ಒಗಳ ನೇರ ನೇಮಕಾತಿ ವಿರುದ್ಧ ಅಪಸ್ವರ ಎದ್ದಿದೆ. ನೇಮಕಾತಿ ನಿಯಮ ಪ್ರಕಾರ ಖಾಲಿ ಹುದ್ದೆಗಳನ್ನು 50:50 ನೇರ ಮತ್ತು ಬಡ್ತಿ ಆಧಾರದ ಮೇಲೆ ತುಂಬೇಕಾಗಿದೆ. ಆದರೆ ಈ ಬಾರಿ ಡಿವೈಆರ್ಎಫ್ಒಗಳ ನೇಮಕಾತಿಯಲ್ಲಿ ಈ ನಿಯಮವನ್ನು ಪಾಲನೆ ಮಾಡಿಲ್ಲ. ಹಿರಿತನದ ಆಧಾರದ ಮೇಲೆ ಮುಂಬಡ್ತಿ ಪಡೆದು ಡಿವೈಆರ್ಎಫ್ಒಗಳಾಗಬೇಕಾಗಿದ್ದ ಅರಣ್ಯ ರಕ್ಷಕರಿಗೆ ಅನ್ಯಾಯವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಡಿವೈಆರ್ಎಫ್ಒಗಳ ಹೊಸ ನೇಮಕಾತಿ ಅರಣ್ಯ ಇಲಾಖೆಯ ಉತ್ಸಾಹ ಹೆಚ್ಚಿಸಿದೆ. ಅರಣ್ಯ ರಕ್ಷಣೆಗೆ ಸಿಬ್ಬಂದಿ ನೇಮಕ ಉತ್ತಮವಾಗಿ ನೆರವಾಗಲಿದೆ. ಮಾನವ ಮತ್ತು ಪ್ರಾಣಿ ಸಂಘರ್ಷ, ಕಳ್ಳಬೇಟೆ ಅಪರಾಧ ಪ್ರಕರಣಗಳನ್ನು ಸಮರ್ಥವಾಗಿ ತಡೆಗಟ್ಟಬಹುದು.| ಸಂಜಯ್ ಮೋಹನ್ ಪಿಸಿಸಿಎಫ್, ಅರಣ್ಯ ಇಲಾಖೆ