ಒಗ್ಗಟ್ಟಿನಿಂದ ಮುನ್ನಡೆದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ; ಸೋಮಶೇಖರ

28-RNR-01
Published on

ರಾಣೆಬೆನ್ನೂರ: ನೇಕಾರರ ಎಲ್ಲ ಪಂಗಡಗಳು ಒಗ್ಗಟ್ಟಿನಿಂದ ಮುನ್ನಡೆದಾಗ ಮಾತ್ರ ನೇಕಾರ ಸಮುದಾಯ ರಾಜಕೀಯ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಸೋಮಶೇಖರ ಹೇಳಿದರು.
ನಗರದ ದೇವರಗುಡ್ಡ ರಸ್ತೆಯ ತುಳಜಾಭವಾನಿ ದೇವಸ್ಥಾನದ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ನೇಕಾರ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ರಾಜಕೀಯವಾಗಿ ಬೆಳೆಯಲು ಸಾಧ್ಯವಾಗಿಲ್ಲ. ಇದರಿಂದಾಗಿ ಸರ್ಕಾರದ ಸವಲತ್ತು ಸೌಲಭ್ಯ ಪಡೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ. ನೇಕಾರರಿಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದರೂ ಅವುಗಳನ್ನು ಸರಿಯಾಗಿ ನಮ್ಮ ಜನರಿಗೆ ಮುಟ್ಟಿತ್ತಿಲ್ಲ. ಈ ನಿಟ್ಟಿನಲ್ಲಿ ಒಕ್ಕೂಟದ ನೂತನ ಪದಾಧಿಕಾರಿಗಳು ಸರ್ಕಾರದ ಸವಲತ್ತುಗಳನ್ನು ನೇಕಾರರಿಗೆ ಮುಟ್ಟಿಸಲು ಶ್ರಮವಹಿಸಬೇಕು ಎಂದರು.
ನಿಕಟಪೂರ್ವ ಜಿಲ್ಲಾಧ್ಯಕ್ಷ ಶಂಕ್ರಣ್ಣ ನ್ಯಾಮತಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನೇಕಾರ ಸಮುದಾಯಗಳ ನೂತನ ಅಧ್ಯಕ್ಷರಾಗಿ ಹನುಮಂತಪ್ಪ ಮುಕ್ತೇನಹಳ್ಳಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಪ್ರಮುಖರಾದ ನವೀನ ಚಿಲ್ಲಾಳ, ದಯಾನಂದ ಶೆಟ್ಟಿ, ಡಾ. ಬಸವರಾಜ ಕೇಲಗಾರ, ಬಸವರಾಜ ಲಕ್ಷ್ಮೇಶ್ವರ, ಶಿವಾನಂದ ಬಗಾದಿ, ಕರಬಸಪ್ಪ ನೀಲಗುಂದ, ನಾಗರಾಜ ಅಗಡಿ, ಆರ್.ಟಿ. ತಾಂಬೆ, ಬಸವರಾಜ ಮೈಲಾರ, ಗಣೇಶ ಹಾವನೂರು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net