

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಹಾಗೂ ಮಹಾರಾಷ್ಟ್ರದಿಂದ ಕರ್ನಾಟಕದ ದಕ್ಷಿಣ ಒಳನಾಡಿನವರೆಗೆ ಟ್ರಫ್ ಇರುವ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 3-4 ದಿನ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.
ದಕ್ಷಿಣಕನ್ನಡ, ಉತ್ತರಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಮೈಸೂರು, ಮಂಡ್ಯ, ಚಾಮರಾಜನಗರದಲ್ಲಿ ಏ.14ರಿಂದ ಏ.16ರವರೆಗೆ ಹಾಗೂ ಬೆಳಗಾವಿ, ಧಾರವಾಡ ಮತ್ತು ಹಾವೇರಿಯಲ್ಲಿ ಏ.14ರಂದು ಗುಡುಗು ಮಿಂಚು ಸಹಿತ ಮಳೆಯಾಗಲಿದೆ.
ದೇಶಾದ್ಯಂತ ವಾಡಿಕೆಯಷ್ಟೇ ಮುಂಗಾರು ಮಳೆ ಸುರಿಯಲಿದೆ. ಒಟ್ಟಾರೆ ಶೇ.65 ವಾಡಿಕೆಯಷ್ಟು, ಶೇ.10 ವಾಡಿಕೆಗಿಂತ ಹೆಚ್ಚು ಹಾಗೂ ಶೇ.25 ವಾಡಿಕೆಗಿಂತ ಕಡಿಮೆ ಮಳೆ ಬೀಳಬಹುದು ಎಂದು ಖಾಸಗಿ ಸಂಸ್ಥೆ ಸ್ಕೈಮೇಟ್ ಅಂದಾಜಿಸಿದೆ ಎಂದು ಹವಾಮಾನ ತಜ್ಞ ಡಾ.ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಮಳೆ ವಾಡಿಕೆಯಷ್ಟೇ ಸುರಿಯಲಿದೆ. ಆದರೆ, ಉತ್ತರ ಒಳನಾಡಿನಲ್ಲಿ ಜುಲೈ ಮತ್ತು ಆಗಸ್ಟ್‌ನಲ್ಲಿ ಮಳೆ ಕೊರತೆಯಾಗಲಿದೆ. ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡು ವಾಡಿಕೆಯಷ್ಟೇ ಮಳೆ ಬೀಳಲಿದೆ. ಮುಂದಿನ ಒಂದು ವಾರದಲ್ಲಿ ಭಾರತೀಯ ಹವಾಮಾನ ಇಲಾಖೆ ಮುಂಗಾರು ಮಳೆ ಬೀಳುವ ಬಗ್ಗೆ ವರದಿ ನೀಡಲಿದೆ ಎಂದರು.