

11ನೇ ತಾರೀಖಿನಿಂದ ಚಂದ್ರೋದಯ ಆರಂಭವಾಗಿ ಸೂರ್ಯನು 16ರ ಬೆಳಗ್ಗೆ ಕಟಕ ರಾಶಿ ಸೇರುತ್ತಾನೆ. ಚತುರ್ಥದಲ್ಲಿ ಸೂರ್ಯನ ಪ್ರವೇಶವು ಒಳ್ಳೆಯ ಫಲ ನೀಡಬೇಕಾದರೆ ಅವನ ಪ್ರಾರ್ಥನೆ ಹಾಗೂ ಪಿತೃದೇವತೆಗಳ ಆಶೀರ್ವಾದ ಬೇಕು. ಮನುಷ್ಯನ ಸಂರಕ್ಷಣೆ ಮಾಡುವ ಗುರು 11ನೇ ಮನೆಯಲ್ಲಿ ಇರುವುದರಿಂದ ದೇವರ ಚಿಂತನೆ, ಅನುಷ್ಠಾನ, ದಾನಧರ್ಮ ಒಳ್ಳೆಯ ಫಲ ನೀಡುತ್ತದೆ.
ಈ ರಾಶಿಯಲ್ಲಿ ರಾಹುವಿದ್ದು, ರಾಶ್ಯಾಧಿಪತಿಯಾದ ಶುಕ್ರನು ಕಟಕ ರಾಶಿ-ಗುರುವಿನ ಉಚ್ಚ ಮನೆಯಲ್ಲಿದ್ದಾನೆ. ಸಮಾಧಾನಕರವಾಗಿ ನಿಮ್ಮ ಕೆಲಸಗಳು ಸಾಗುವುದರಲ್ಲಿ ಸಂದೇಹಬೇಡ. ನಿಮ್ಮ ಉದ್ವೇಗವನ್ನು ದೈವಚಿಂತನೆಯಿಂದ ಕಡಿಮೆಮಾಡಿ, ವಿವೇಕದಿಂದ ಕಾರ್ಯೋನ್ಮುಖರಾಗಿ, ನೀವು ಪ್ರಯತ್ನಿಸಿರುವ ಇಷ್ಟಕಾಮ್ಯಗಳು ಪರಿಪೂರ್ಣಗೊಳ್ಳುತ್ತದೆ. ದುರ್ಗಾ ಪ್ರಾರ್ಥನೆ ಇರಲಿ, ನೀಲಾಂಬದೇವಿ ದರ್ಶನ ಮಾಡಿ, ಪೂಜಿಸಿ.
ಆರೋಗ್ಯವೇ ಮಹಾಭಾಗ್ಯವೆಂದು ಮರೆಯದಿರಿ. ಅಷ್ಟಮ ಶನಿ ಎಲ್ಲವೂ ಸರಿಯಿದೆ ಎಂದುಕೊಂಡಾಗ ಅಲ್ಪ ಏರುಪೇರು ಶರೀರ ಹಾಗೂ ಕೆಲಸದಲ್ಲಿ ತೊಡಕನ್ನು ತರಬಲ್ಲದು. ಅಷ್ಟಮ ಶನಿ ಸ್ಥಾನಪಲ್ಲಟವಾಗುವವರೆಗೂ ಪ್ರತಿ ಸೋಮವಾರ ಈಶ್ವರನನ್ನು ಪೂಜಿಸಿದರೆ ಜೀವನವು ಸುಖದ ಹಾದಿಗೆ ಸಾಗಬಹುದು.
ನಿಮ್ಮ ಅತಿಯಾದ ವೇಗವನ್ನು ಕಡಿಮೆಮಾಡಿ. ಚಂದ್ರಾಷ್ಟೋತ್ತರ ಪಾರಾಯಣ ಮಾಡಿ. ಎದ್ದುನಿಂತವನು ಬೀಳಬಾರದೆಂಬ ಮಾತಿದೆ. ನಡೆಯುವವನು ಎಡವುತ್ತಾನೆ. ಅಲ್ಲಿಗೆ ಗ್ರಹಸಂಚಾರದಲ್ಲಿ ಶನಿ ನಿಮ್ಮ ನಡಿಗೆ, ಆರೋಗ್ಯದಲ್ಲಿ ಎಚ್ಚರವಹಿಸುವ ಕಾಲ. ಹೆದರಿಕೆ ಬೇಡ.
ಸಿಂಹವಾಹಿನಿಯನ್ನು ಪೂಜಿಸಿ. ಬೇಕಾದ್ದನ್ನು ಪಡೆಯಲು, ಧನದ ಕೊರತೆಯನ್ನು ನೀಗಲು ಏಕಕಾಲದಲ್ಲಿ ದುರ್ಗಾ-ಸರಸ್ವತಿ-ಮಹಾಲಕ್ಷ್ಮೀಯನ್ನು ಪ್ರಾರ್ಥಿಸಿ. ಇಷ್ಟಾರ್ಥ ನೆರವೇರುವುದು. ಆದರೆ ಶನಿ, ಏಳರಲ್ಲಿ ಗುರುವಿರುವಾಗ ಯಾವುದೇ ಅಡಚಣೆ ಬರುವ ಪ್ರಶ್ನೆಯಿಲ್ಲ.
ಹೊತ್ತಿಗೆ ಮುಂಚೆ ಎದ್ದು ಆದಿತ್ಯ ಹೃದಯ ಪಾರಾಯಣ ಮಾಡಿದರೆ, ಪಂಚಮ ಶನಿ-ಷಷ್ಠ ಗುರುವಿಗೂ ಪ್ರಾರ್ಥನೆ ಸಂದಾಯವಾಗಿ ನಿಮ್ಮ ಸಮಯವು ದೈವಭಕ್ತಿ ಎಂಬ ಬಲದಿಂದ ದೇವರೇ ಕೈಹಿಡಿದು ನಡೆಸುತ್ತಾನೆ. ಉಪಕಾರ ಮಾಡಿದರೆ ದೇವರೇ ನಿಮಗೆ ಸಹಾಯ ಮಾಡುತ್ತಾನೆ. ಆರೋಗ್ಯಕ್ಕಾಗಿ ಚಂದ್ರಲಾದೇವಿಯನ್ನು ಸ್ತುತಿಸಿ-ಪ್ರಾರ್ಥಿಸಿ. ಸುಜ್ಞಾನಕ್ಕೆ ದತ್ತಾತ್ರೇಯನನ್ನು ಪ್ರಾರ್ಥಿಸಿ.
ಆರೋಗ್ಯದ ಬಗ್ಗೆ ಭಯಬೇಡ. ರಾಶಿಯ ಅಧಿಪತಿ ಶುಕ್ರನಿಗೆ ಪ್ರಾರ್ಥಿಸಿದಲ್ಲಿ ಇಷ್ಟಾರ್ಥ ಸಿದ್ಧಿ. ಅತ್ಯುತ್ತಮ ಆರೋಗ್ಯಕ್ಕೆ ಧನ್ವಂತರಿ ಅಷ್ಟೋತ್ತರ ಪಠಿಸಿ. ಸೂರ್ಯಪ್ರಾರ್ಥನೆ ಮರೆಯದಿರಿ. ಮುಂದೆ ಸಾಗುವವನು ಹಿಂದಿರುಗಿ ನೋಡುವುದಿಲ್ಲ. ಕಾರಣ ಭಗವದ್ಕೃಪೆ ಇರುತ್ತದೆ.
ತೃತೀಯ ಶನಿ ನಿಮ್ಮನ್ನು ಗುರಿಯತ್ತ ಕೊಂಡೊಯ್ದು ನಿಮ್ಮ ದುಡ್ಡಿನ ಅವಶ್ಯಕತೆಯನ್ನು ತೀರಿಸುತ್ತಾನೆ. ಚತುರ್ಥ ಗುರುವಿನಿಂದ ಬರುವ ಹಣ ಮಂದಗತಿಯಲ್ಲಿ ಕೈ ಸೇರುತ್ತದೆ. ರಾಶಿಯಲ್ಲಿ ಕೇತುವಿರುವುದರಿಂದ ಹೊಟ್ಟೆ ಹಸಿವಾದಾಗ ಮನಸ್ಸು ಆನ್ನ ನೀಡುವ ತಾಯಿಯ ಕಡೆ ಹೋಗುತ್ತದೆ. ಹಾಗೆಯೇ ನಿಮ್ಮ ಮನಸ್ಸು ಗಣಪತಿಯ ಕಡೆ ಸಾಗಲಿ.
ದೈವಾಧೀನಂ ಜಗತ್ಸರ್ವಂ ತಂ ದೈವಂ ಮಂತ್ರಾಧೀನಂ. ದೇವರು ಒಲಿಯಬೇಕಾದಲ್ಲಿ ಮಂತ್ರ, ಜಪ, ಶುದ್ಧವಾದ ಮನಸ್ಸು ಎಲ್ಲವೂ ಬೇಕು. ಯಾರೇ ಸಾಸಿವೆಯಷ್ಟು ಉಪಕಾರ ಮಾಡಿದ್ದರೂ, ಸ್ಮರಣೆ ಇಲ್ಲದಿದ್ದರೆ ಮುಂದೆ ಕಷ್ಟ ಕಾಡುತ್ತದೆ. ತೇಜೋವಧೆ ಮಾಡದೆ ಮುಂದೆ ಸಾಗಬೇಕು. ಶ್ರೀರಾಮನನ್ನು ಅನನ್ಯವಾಗಿ ಪ್ರಾರ್ಥಿಸಿ. ರಾಜಮಾರ್ಗದಲ್ಲಿ ಕೊಂಡೊಯ್ದು ಕೀರ್ತಿ, ಲಾಭ ತರುತ್ತಾನೆ. ದತ್ತಕ್ಷೇತ್ರ ಸಂದರ್ಶಿಸಿ.
ಮಕರ-ಕುಂಭ ಶನಿ ಸಂಚಾರ ಮುಂದುವರಿದಿರುವುದರಿಂದ ಎಲ್ಲವೂ ಬಯಸಿದಂತೆ ಆಗುವುದಿಲ್ಲ. ದೈವಕೃಪೆ ಇದ್ದರೆ ಯಶಸ್ಸಿನ ಹಾದಿಗೆ ದೈವವೇ ಕೊಂಡೊಯ್ಯುತ್ತಾನೆ. ಆರೋಗ್ಯಕ್ಕಿಂತ ಐಶ್ವರ್ಯವು ಮತ್ತೊಂದಿಲ್ಲ. ಸೂರ್ಯನಾರಾಯಣನನ್ನು ಪ್ರಾರ್ಥಿಸಿ. ನಿಮ್ಮ ಕಷ್ಟವನ್ನು ಸುಖವನ್ನಾಗಿ ಪರಿವರ್ತನೆ ಮಾಡಿಕೊಳ್ಳಿ.
ಈ ರಾಶಿಯವರು ದ್ವಂದ್ವ ಮನಸ್ಸನ್ನು ಬಿಟ್ಟು, ಸ್ಥಿರವಾದ ಬುದ್ಧಿಯಿಂದ ಸಾಗಬೇಕು. ಸುದರ್ಶನವನ್ನು ಪ್ರಾರ್ಥಿಸಿ, ಕಷ್ಟವನ್ನು ಪರಿಹರಿಸಿಕೊಳ್ಳಬಹುದು. ಹಿಡಿದಿಟ್ಟ ನೀರು ಬಾಯಾರಿಕೆಯನ್ನು ನಿವಾರಿಸುತ್ತದೆ. ಹಾಗೆಯೇ ದೈವವೆಂಬ ಅಮೃತ ಬಿಂದಿಗೆಯಲ್ಲಿ ಇಟ್ಟು ಅಮೃತ ಮೃತ್ಯುಂಜಯನನ್ನು ಪ್ರಾರ್ಥಿಸಿ.
ದ್ವಾದಶಾಂಶದಲ್ಲಿ ಗುರುವು ಇದ್ದು, ಕೆಲವೊಂದು ವಿಷಯಗಳಿಗಾಗಿ ಸಾಲವನ್ನು ತೀರಿಸಲಾರದೆ ಬಡ್ಡಿಯನ್ನು ಕೊಟ್ಟು ಹಿಂಸೆ ಪಡುವ ಸಮಯ. ದುಡ್ಡು ಕೈಯಲ್ಲಿ ನಿಲ್ಲಬೇಕಾದರೆ ಪೂರ್ವಪುಣ್ಯ ಬೇಕು. ಆರೋಗ್ಯವಿರಬೇಕಾದರೆ ತಂದೆ-ತಾಯಿ ಆಶೀರ್ವಾದ ಬೇಕು. ಮಾತಾ-ಪಿತೃವನ್ನು ಪೂಜಿಸಿ ಬೇಕಾದ ವರವನ್ನು ಪಡೆದುಕೊಳ್ಳಿ. ಶಿವಧ್ಯಾನ ಮಾಡಿ, ಮಂಗಳ ಪ್ರದಾಯಿನಿ ಪಾರ್ವತಿಯನ್ನು ಪೂಜಿಸಿ. ಪಾರ್ವತಿ ಅಷ್ಟೋತ್ತರ ಪಠಿಸಿ.