ಮೊದಲು ಸಂಸತ್​ ಅಧಿವೇಶನ ಆರಂಭಿಸಿ, ನಂತರ ಶಾಲೆಗಳ ಪುನರಾರಂಭದ ಬಗ್ಗೆ ಚಿಂತಿಸಿ...

school
Published on

ನವದೆಹಲಿ: ಕೋವಿಡ್​-19 ಲಾಕ್​ಡೌನ್​ನಿಂದ ರಾಷ್ಟ್ರಾದ್ಯಂತ ಅನಿರ್ದಿಷ್ಟಾವಧಿವರೆಗೆ ಮುಚ್ಚಲ್ಪಟ್ಟಿರುವ ಶಾಲೆ-ಕಾಲೇಜುಗಳನ್ನು ಆಗಸ್ಟ್​ 15ರ ನಂತರದಲ್ಲಿ ಪುನರಾರಂಭಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ಮಕ್ಕಳ ಪಾಲಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಕೋವಿಡ್​-19 ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಅಥವಾ ಸೂಕ್ತ ಲಸಿಕೆ ಕಂಡುಹಿಡಿಯುವವರೆಗೆ ಶಾಲೆ-ಕಾಲೇಜುಗಳನ್ನು ಪುನರಾರಂಭಿಸಬೇಡಿ. ಕನಿಷ್ಠಪಕ್ಷ ಅಕ್ಟೋಬರ್​ವರೆಗೆ ಈ ನಿರ್ಧಾರವನ್ನು ಮುಂದೂಡಿ ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಟ್ವಿಟರ್​ನಲ್ಲಿ ತಮ್ಮೆಲ್ಲ ಆಕ್ರೋಶ, ಆತಂಕವನ್ನು ಹಂಚಿಕೊಂಡಿರುವ ಪಾಲಕರು, ನಿಮಗೆ ಅಷ್ಟೊಂದು ಧೈರ್ಯ ಇರುವುದಾದರೆ ಮೊದಲಿಗೆ ಸಂಸತ್​ನ ಮುಂಗಾರು ಅಧಿವೇಶನ ಆರಂಭಿಸಿ. ಆಮೇಲೆ ಬೇಕಾದರೆ ಶಾಲೆಗಳ ಪುನರಾರಂಭದ ಬಗ್ಗೆ ಆಲೋಚಿಸಿ ಎಂದು ಹೇಳಿದ್ದಾರೆ.

ಕಳೆದ 24 ಗಂಟೆಗಳಲ್ಲಿ ದಾಖಲೆಯ 9,971 ಕೋವಿಡ್​-19 ಪ್ರಕರಣಗಳು ದೇಶದಲ್ಲಿ ವರದಿಯಾಗುವ ಮೂಲಕ ಒಟ್ಟಾರೆ ಸೋಂಕಿತರ ಲೆಕ್ಕದಲ್ಲಿ ಭಾರತ ವಿಶ್ವದಲ್ಲೇ 5ನೇ ಸ್ಥಾನಕ್ಕೇರಿದೆ. ಸೋಂಕಿತರ ಪೈಕಿ 287 ಮಂದಿ ಮೃತಪಟ್ಟಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ದೇಶಾದ್ಯಂತ ಶಾಲೆ-ಕಾಲೇಜು ಆರಂಭಿಸುವ ಮೂಲಕ ಒಟ್ಟು 33 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳ ಜೀವವನ್ನು ಕರೊನಾ ಸೋಂಕಿನ ಅಪಾಯಕ್ಕೆ ಒಡ್ಡುವುದು ಸೂಕ್ತವಲ್ಲ ಎಂದು ಪಾಲಕರು ಪ್ರತಿಪಾದಿಸಿದ್ದಾರೆ.

ನಾವು ಕಳುಹಿಸುವುದಿಲ್ಲ: ಸರ್ಕಾರ ಬೇಕಾದರೆ ಆಗಸ್ಟ್​ 15ರ ನಂತರ ಶಾಲೆ-ಕಾಲೇಜುಗಳನ್ನು ಆರಂಭಿಸಲಿ. ಆದರೆ, ನಾವು ಮಾತ್ರ ಯಾವುದೇ ಕಾರಣಕ್ಕೂ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಕಳುಹಿಸಿದರೆ ಅದೊಂದು ರೀತಿ ಬೆಂಕಿಯೊಡನೆ ಸರಸವಾಡಿದಂತೆ ಎಂದು ಪಾಲಕರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net