

CDS Anil Chauhan: ಆಧುನಿಕ ಯುದ್ಧ ತಂತ್ರಗಳು ವೇಗವಾಗಿ ವಿಕಸನಗೊಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ದೇಶಗಳು ಅಧಿಕೃತವಾಗಿ ಯುದ್ಧ ಘೋಷಿಸದೆ ರಾಜಕೀಯ ಉದ್ದೇಶಗಳನ್ನು ಸಾಧಿಸಲು ಬಲಪ್ರಯೋಗ ಮಾಡುವ ಪ್ರವೃತ್ತಿಯನ್ನು ಹೆಚ್ಚುತ್ತಿದೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆ.
ಭದ್ರತಾ ವೇದಿಕೆಯಲ್ಲಿ ಮಾತನಾಡಿದ ಚೌಹಾಣ್, ಯುದ್ಧ ಮತ್ತು ರಾಜಕೀಯವು ನಿಕಟ ಸಂಬಂಧ ಹೊಂದಿವೆ. ಯುದ್ಧಗಳು ಹೆಚ್ಚಾಗಿ ರಾಜಕೀಯ ಉದ್ದೇಶಗಳನ್ನು ಸಾಧಿಸಲು ನಡೆಯುತ್ತವೆ. ಇಂದು, ಆಪರೇಷನ್ ಸಿಂಧೂರದಂತೆ ಬಹಳ ಸಣ್ಣ ಹಾಗೂ ನಿಖರವಾದ ಯುದ್ಧಗಳನ್ನು ನಾವು ನೋಡುತ್ತಿದ್ದೇವೆ ಎಂದು ಹೇಳಿದರು.
ಅಲ್ಲದೆ, ಇನ್ನು ಮುಂದೆ ಭೌಗೋಳಿಕ ಗಡಿಗಳು ಭಯೋತ್ಪಾದಕನ್ನು ರಕ್ಷಿಸುವುದಿಲ್ಲ ಎಂದು ಸಿಡಿಎಸ್ ಪ್ರತಿಪಾದಿಸಿದರು. ಉಗ್ರರು ಎಲ್ಲಿಯೂ ಅಡಗಿಕೊಳ್ಳಲು ಸಾಧ್ಯವಿಲ್ಲ, ಪಾಕಿಸ್ತಾನದಲ್ಲಿದ್ದರು ಸಹ ಉಗ್ರರನ್ನು ಬಿಡುವುದಿಲ್ಲ. ಯಾವುದೇ ಹಿಂಸಾಚಾರದ ವಿರುದ್ಧ ಕಾರ್ಯನಿರ್ವಹಿಸಲು ನಾವು ಸಿದ್ಧರಿದ್ದೇವೆ ಎಂದು ಪರೋಕ್ಷವಾಗಿ ಪಾಕ್ಗೆ ಎಚ್ಚರಿಸಿದ್ದಾರೆ.
ಭಾರತೀಯ ಪಡೆಗಳು ಇತ್ತೀಚೆಗೆ ನಡೆಸಿದ ಆಪರೇಷನ್ ಸಿಂಧೂರ, ಅತಿ ವೇಗದ ಹಾಗೂ ನಿಖರ ದಾಳಿಯನ್ನು ಒಳಗೊಂಡಿತ್ತು. ಈ ಕಾರ್ಯಾಚರಣೆಯು ನಿರ್ದಿಷ್ಟ ಪ್ರದೇಶವನ್ನು ವಶಪಡಿಸಿಕೊಳ್ಳುವ ಉದ್ದೇಶವನ್ನು ಹೊಂದಿರಲಿಲ್ಲ. ಆದರೆ, ಬಹಳ ಕಡಿಮೆ ಸಮಯದಲ್ಲಿ ಮಿಂಚಿನ ವೇಗದ ದಾಳಿ ಮಾಡಲು ವಿನ್ಯಾಸಗೊಳಿಸಲಾಗಿತ್ತು. ಆಪರೇಷನ್ ಸಿಂಧೂರವನ್ನು ಭೂಪ್ರದೇಶವನ್ನು ವಶಪಡಿಸಿಕೊಳ್ಳಲು ಬಳಸಿಲ್ಲ ಎಂದು ಸಿಡಿಎಸ್ ಚೌಹಾಣ್ ತಿಳಿಸಿದ್ದಾರೆ.
ಸಿಂಧೂರದಂತ ಆಧುನಿಕ ಕಾರ್ಯಾಚರಣೆಗಳು ಸಾಂಪ್ರದಾಯಿಕ ಯುದ್ಧದಿಂದ ದೂರ ಸರಿಯುವುದನ್ನು ಪ್ರತಿಬಿಂಬಿಸುತ್ತದೆ. ನಾವು ಇನ್ನು ಮುಂದೆ ಕೇವಲ 500 ಕೆಜಿ ಬಾಂಬ್‌ಗಳನ್ನು ಅವಲಂಬಿಸಲು ಸಾಧ್ಯವಿಲ್ಲ. ಹೆಚ್ಚು ಪರಿಣಾಮಕಾರಿಯಾದ ಸರಕುಗಳು ಮತ್ತು ಹೆಚ್ಚು ನಿಖರವಾದ ಗುರಿಯಿಡುವ ಸಮಯ ಬಂದಿದೆ ಎಂದು ಚೌಹಾಣ್ ಹೇಳಿದರು. (ಏಜೆನ್ಸೀಸ್)