ಬೇಡಿಕೆ ಈಡೇರಿಸದಿದ್ದಲ್ಲಿ ಶಾಲೆ ಬಂದ್ ; ಖಾಸಗಿ ಶಾಲೆಗಳ ನಿರ್ಣಯ

School
Published on

ಬೆಂಗಳೂರು; ಶಿಕ್ಷಕರಿಗೆ, ಶಾಲಾ ಸಿಬ್ಬಂದಿಗೆ ಲಸಿಕೆ ನೀಡುವುದು ಮತ್ತು ವಿದ್ಯಾರ್ಥಿಗಳ ಪ್ರವೇಶಕ್ಕೆ ಆದೇಶ ಹೊರಡಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲಿಲ್ಲವಾದಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳನ್ನು ಬಂದ್ ಮಾಡಿ ಪ್ರತಿಭಟಿಸಲು ಖಾಸಗಿ ಶಾಲೆಗಳು ನಿರ್ಧರಿಸಿವೆ.

ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕ್ಯಾಮ್ಸ್, ರುಪ್ಸಾ ಕರ್ನಾಟಕ, ಕುಸ್ಮಾ, ಅಲ್ಪಸಂಖ್ಯಾತ ಶಾಲೆಗಳ ಒಕ್ಕೂಟ ಸೇರಿದಂತೆ ರಾಜ್ಯದಲ್ಲಿರುವ ಪ್ರಮುಖ ಖಾಸಗಿ ಶಾಲೆಗಳ ಮಾಲೀಕರು ಸೋಮವಾರ ಖಾಸಗಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.

ಆನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಯಾಮ್ಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್, ಸದ್ಯ ಸರ್ಕಾರ ತಿಳಿಸಿರುವಂತೆ ಜೂ.15ರಿಂದ 2021-22ನೇ ಶೈಕ್ಷಣಿಕ ಸಾಲು ಆರಂಭವಾಗಲಿದೆ. ನಾವು ಆನ್‌ಲೈನ್‌ನಲ್ಲಿ ತರಗತಿಗಳನ್ನು ನಡೆಸಲು ಸಿದ್ಧರಿದ್ದೇವೆ. ಆದರೆ, ಇದಕ್ಕೂ ಮುನ್ನ ಶಿಕ್ಷಕರಿಗೆ ಮತ್ತು ಸಿಬ್ಬಂದಿಗೆ ಕರೊನಾ ಲಸಿಕೆ ಹಾಕಿಸಲು ಸರ್ಕಾರ ಮುಂದಾಗಬೇಕು. 1ರಿಂದ 10ನೇ ತರಗತಿಯವರೆಗೂ ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಶಾಲೆಗೆ ಪ್ರವೇಶ ಪಡೆಯಬೇಕೆಂದು ಸರ್ಕಾರ ಆದೇಶ ಹೊರಡಿಸಬೇಕು. ಅಲ್ಲದೆ, ಭೌತಿಕ ಅಥವಾ ಆನ್‌ಲೈನ್ ಎರಡರಲ್ಲಿ ಒಂದು ಕಡ್ಡಾಯವಾಗಿ ಹಾಜರಾತಿ ಇರಬೇಕು. ಇದ್ಯಾವುದರ ಬಗ್ಗೆ ಸ್ಪಷ್ಟ ಆದೇಶ ಹೊರಡಿಸದ ಹೊರತು ನಾವು ಶಾಲೆಯನ್ನು ಆರಂಭಿಸುವುದಿಲ್ಲ. ಶಾಲೆಗಳನ್ನು ಬಂದ್ ಮಾಡಿ ನಮ್ಮ ಪ್ರತಿಭಟನೆ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಬಹುತೇಕ ಪಾಲಕರು ಕಳೆದ ವರ್ಷ ಶುಲ್ಕವನ್ನೇ ಇನ್ನು ಪಾವತಿಸಿಲ್ಲ. ಶುಲ್ಕ ಪಾವತಿಸಲು ಶಿಕ್ಷಣ ಇಲಖೆಗೆ ಪಾಲಕರಿಗೆ ಸೂಚನೆ ನೀಡಬೇಕು. 1ರಿಂದ 9ನೇ ತರಗತಿ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದರೂ, ಅಧಿಕಾರಿಗಳು ಪಾಸ್ ಮಾಡುವಂತೆ ಪಟ್ಟು ಹಿಡಿದಿರುವುದು ಸರಿಯಲ್ಲ. ಕಡಿಮೆ ಪ್ರಗತಿ ಸಾಧಿಸಿರುವ ಮತ್ತು ಶುಲ್ಕ ಕಟ್ಟದ, ಶಾಲೆಗೆ ಪ್ರವೇಶ ಪಡೆಯದ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿವೆ.

ಶುಲ್ಕ ಹೆಚ್ಚಳ: ಕರೊನಾದಿಂದ ಎಲ್ಲರ ಆರ್ಥಿಕ ಪರಿಸ್ಥಿತಿ ಕೂಡ ಹದಗೆಟ್ಟಿದೆ. ಸರ್ಕಾರಿ ನೌಕರರ ಮಕ್ಕಳಿಗೂ, ಅಟೋ ಚಾಲಕರ ಮಕ್ಕಳಿಗೂ ಒಂದೇ ರೀತಿಯಲ್ಲಿ ಶುಲ್ಕ ಪಡೆಯುವುದು ಬೇಡ. ಅವರ ಪರಿಸ್ಥಿತಿ ಅನುಗುಣವಾಗಿ ರಿಯಾಯಿತಿ ನೀಡಬೇಕು ಎಂಬ ನಿರ್ಣಯವನ್ನು ಎಲ್ಲ ಶಾಲೆಗಳು ಒಪ್ಪಿಕೊಂಡಿವೆ. ಶಿಕ್ಷಕರನ್ನು ಸಹ ಆರ್ಥಿಕ ಪ್ಯಾಕೇಜ್‌ನಲ್ಲಿ ಸೇರ್ಪಡೆ ಮಾಡಬೇಕೆಂದು ಎಲ್ಲ ವಿಧಾನ ಪರಿಷತ್ತಿನ ಸದಸ್ಯರು ಪಕ್ಷಾತೀತವಾಗಿ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಮನವಿ ಮಾಡಿದರು.

* ಪ್ರಮುಖ ಬೇಡಿಕೆಗಳು

- ಶಾಲೆ ಆರಂಭಕ್ಕೆ ಸ್ಪಷ್ಟ ಸೂಚನೆ ನೀಡಬೇಕು

- ಶುಲ್ಕ ಪಾವತಿ ಮತ್ತು ದಾಖಲಾತಿಗೆ ಆದೇಶ ನೀಡಬೇಕು

- ಶುಲ್ಕ ಬಿಕ್ಕಟ್ಟು ಪರಿಹಾರ ಕಲ್ಪಿಸಬೇಕು

- ಯುಡೈಸ್ ಮಾಹಿತಿ ಸೋರಿಕೆ ಸರಿಪಡಿಸಬೇಕು

- ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net