

ಪಾಟ್ನಾ: ಪ್ರತಿಭಟನೆಯನ್ನು ಯಾವ ಯಾವ ವಿಚಾರಕ್ಕೆ ನಡೆಸುತ್ತಾರೆ. ಯಾವುದಾದರೂ ಮುಖ್ಯ ವಿಚಾರಗಳು ನಡೆಯದಿದ್ದಾಗ ಅಥವಾ ದೇಶದ ನಾಗರಿಕರಿಗೆ ವ್ಯತಿರಿಕ್ತವಾಗಿ ಏನಾದರೂ ನಡೆದರೆ ಅಂತಹ ಸಂದರ್ಭದಲ್ಲಿ ಪ್ರೊಟೆಸ್ಟ್ ಮಾಡುವುದು ಸಹಜ. ಇತ್ತೀಚೆಗೆ ರಾಜಕೀಯ ಪಕ್ಷಗಳು ತಮ್ಮದೆ ಆದ ಕಾರಣಗಳಿಗೆ ಪ್ರತಿಭಟನೆ ನಡೆಸುವುದಾಗಿ ಕರೆ ನೀಡುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಯುವಕರ ಗುಂಪೊಂದು ಪ್ರತಿಭಟನೆ ಕೂಗುತ್ತಾ ಸಾಗುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ವಿಚಿತ್ರ ಎಂದರೆ ಇದರಲ್ಲಿ ಬ್ಯೂಟಿ ಪಾರ್ಲರ್ ಮುಚ್ಚಬೇಕು ಎಂದು ಕೂಗುತ್ತಾ ಪ್ರತಿಭಟಿಸುತ್ತಿದ್ದಾರೆ.
ಈ ಪ್ರತಿಭಟನೆ ಬಿಹಾರದ ಸಸಾರಾಮ್ನಲ್ಲಿ ನಡೆದಿದೆ ಎನ್ನಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಬ್ಯೂಟಿ ಪಾರ್ಲರ್ ವಿರುದ್ಧ ಯುವಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಬ್ಯೂಟಿ ಪಾರ್ಲರ್ ಬಂದ್ ಮಾಡಿ ಎಂದು ಎಲ್ಲರೂ ಜೋರಾಗಿ ಘೋಷಣೆ ಕೂಗುತ್ತಿರುವುದು ಸ್ಪಷ್ಟವಾಗಿ ಕೇಳುತ್ತಿದೆ. ಅಲ್ಲದೆ ಈ ಪ್ರತಿಭಟನೆಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ಸಾಗುತ್ತಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು ಜನರಲ್ಲಿ ಹಲವು ಪ್ರಶ್ನೆಗಳು ಮೂಡುತ್ತಿವೆ.
ಈ ಆಂದೋಲನವನ್ನು ಗಂಭೀರ ವಿಚಾರಕ್ಕಾಗಿ ನಡೆಸಲಾಗಿದೆಯೇ ಅಥವಾ ಮನರಂಜನೆಗಾಗಿ ಮಾಡಿರುವ ಚೇಷ್ಟೆಯ ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ. ಈ ಪ್ರತಿಭಟನೆಯ ಹಿಂದಿನ ನಿಜವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹಲವರು ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದರೆ, ಮತ್ತೆ ಕೆಲವರು ಗಂಭೀರವಾಗಿ ಪರಿಗಣಿಸಿ ಇಂತಹ ಪ್ರತಿಭಟನೆಯಲ್ಲಿ ತ್ರಿವರ್ಣ ಧ್ವಜ ಏಕೆ ಬಳಸಿದ್ದಾರೆ?, ಈ ರೀತಿ ಮಾಡುವುದು ರಾಷ್ಟ್ರಧ್ವಜವನ್ನು ಅವಮಾನಿಸಿದಂತೆ ಎಂದು ಆಕ್ರೋಶ ಹೊರಹಾಕಿದ್ದಾರೆ.(ಏಜೆನ್ಸೀಸ್)