

ಶಿವಮೊಗ್ಗ: ಶಿಕ್ಷಣದ ಪ್ರತಿ ಹಂತದಲ್ಲೂ ಕನ್ನಡ ಕಲಿಕೆಗೆ ಆದ್ಯತೆ ನೀಡುವ ಮೂಲಕ ನಿಜವಾದ ಕಲಿಕೆಯ ಪರಿಪೂರ್ಣತೆಯೆಡೆಗೆ ನಾವೆಲ್ಲರೂ ಸಾಗಬೇಕಿದೆ ಎಂದು ಶಿವಮೊಗ್ಗ ತಾಲೂಕು 11ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ, ಶ್ರೀ ರಾಮಕೃಷ್ಣ ವಿದ್ಯಾನಿಕೇತನದ ವಿದ್ಯಾರ್ಥಿನಿ ನೇಹಾ ಹೊಸಮನೆ ಅಭಿಪ್ರಾಯಪಟ್ಟರು.
ನಗರದ ಸ್ಯಾನ್ ಜೋಸ್ ಪ್ರೌಢಶಾಲೆಯಲ್ಲಿ ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಶಿವಮೊಗ್ಗ ತಾಲೂಕು 11ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡಕ್ಕೆ ಕೈ ಎತ್ತು ಕನ್ನಡದ ಕಂದ ಎಂಬ ಕವಿ ಸಾಲುಗಳನ್ನು ಮೆಲುಕು ಹಾಕುವಾಗ, ಕನ್ನಡಿಗರಿಂದ ಕನ್ನಡವ ಕಾಪಾಡು ಎಂದು ಹೇಳುವ ಸನ್ನಿವೇಶ ಸೃಷ್ಟಿಯಾಗುತ್ತಿರುವುದು ದುರಂತ ಎಂದರು.
ಮಕ್ಕಳಾದ ನಾವು ಕನ್ನಡವನ್ನು ಬೆಳೆಸುವ ಬಳಸುವ ಕನ್ನಡದ ಪ್ರಜ್ಞೆಯನ್ನು ಜಾಗೃತಗೊಳಿಸಿಕೊಳ್ಳಬೇಕಿದೆ. ಯಾವುದೇ ಭಾಷೆಯನ್ನು ಕಲಿಯಲು ಪ್ರಯತ್ನಿಸಿದರೂ ಆಂತರ್ಯದಲ್ಲಿ ಗ್ರಹಿಕೆಯಾಗುವುದು ನಮ್ಮ ಮಾತೃಭಾಷೆ ಕನ್ನಡದಿಂದಲೇ ಎಂಬ ಸತ್ಯ ಮರೆಯಬಾರದು. ನಲಿಯಲು, ಕಲಿಯಲು, ಬಾಳಲು, ಬೆಳೆಯಲು, ಕಲಿಸುವ ಪ್ರತಿ ಹಂತಗಳಲ್ಲಿಯೂ ಕನ್ನಡ ಎಂಬುದು ರಾರಾಜಿಸುತ್ತಿರಲಿ ಎಂದು ಹೇಳಿದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಗಾಜನೂರು ಕೆಪಿಎಸ್ ವಿದ್ಯಾರ್ಥಿನಿ ತಾರಾ, ನುಡಿಯ ಬಗ್ಗೆ ಅಭಿಮಾನ ಮೂಡಿದರೆ ನಾಡಿನ ಬಗ್ಗೆ ತಾನಾಗಿಯೇ ಅಭಿಮಾನ ಮೂಡುತ್ತದೆ. ಭಾಷೆಯ ಜತೆಗೆ ಪ್ರಾದೇಶಿಕ ಸಂಸ್ಕೃತಿ, ಸಂಸ್ಕಾರಗಳನ್ನು ಮಕ್ಕಳಾದ ನಾವು ರೂಡಿಸಿಕೊಳ್ಳಬೇಕಿದೆ. ಅನೇಕ ಕನ್ನಡದ ಸಾಹಿತಿಗಳು ಕನ್ನಡ ಸಾಹಿತ್ಯ ಸಾಂಸ್ಕೃತಿಕ ನೆಲೆಯನ್ನು ಗಟ್ಟಿಗೊಳಿಸಿದ್ದು, ಅಂತಹ ನೆಲೆಗಟ್ಟುಗಳು ನಮ್ಮಂತಹ ಮಕ್ಕಳಿಗೆ ದಾರಿ ದೀಪವಾಗಲಿದೆ. ಈ ಹಿನ್ನಲೆಯಲ್ಲಿ ಆಧುನಿಕತೆಯ ಅಂಧತ್ವದಿಂದ ಹೊರಬಂದು, ಅಧ್ಯಯನ ಜತೆಯಲ್ಲಿ ಸಾಂಸ್ಕೃತಿಕವಾಗಿ ಬೆಳೆಯಬೇಕಿದೆ ಎಂದು ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷೆ ಮಹಾದೇವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ಯಾನ್ ಜೋಸ್ ಪ್ರೌಢಶಾಲೆ ಮುಖ್ಯ ಶಿಕ್ಷಕ ರೆ. ಫಾದರ್ ಕೆ.ಟಿ.ಸಾಜನ್, ಸಹ ಶಿಕ್ಷಕ ಭದ್ರಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಪದಾಧಿಕಾರಿಗಳಾದ ಡಿ.ಗಣೇಶ್, ಅನುರಾಧಾ, ಸುಶೀಲಾ ಷಣ್ಮುಗಂ, ನಳೀನಾಕ್ಷಿ, ಮೇರಿ ಡಿಸೋಜಾ, ವಿವಿಧ ಗೋಷ್ಟಿಗಳ ಅಧ್ಯಕ್ಷತೆ ವಹಿಸಿದ್ದ ಕಸ್ತೂರಬಾ ಬಾಲಿಕ ಪ್ರೌಢಶಾಲೆಯ ವಿದ್ಯಾರ್ಥಿನಿ ಜಾಹ್ನವಿ, ಮಂಡಘಟ್ಟ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಕಾರ್ತಿಕ್, ಸ್ಯಾನ್ ಜೋಸ್ ಪ್ರೌಢಶಾಲೆಯ ವಿದ್ಯಾರ್ಥಿ ವರುಣ್ ಉಪಸ್ಥಿತರಿದ್ದರು.
ಮಾತೃಭಾಷೆಯ ಶಿಕ್ಷಣ ಕಲಿಕೆಯಲ್ಲಿ ಪರಿಣಾಮಕಾರಿ
ಮಾತೃಭಾಷೆಯ ಶಿಕ್ಷಣ ಕಲಿಕೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಕನ್ನಡ ಭಾಷೆಯನ್ನು ಸುಂದರವಾಗಿ ಬರೆಯಲು ಅಭ್ಯಾಸಿಸಬೇಕು. ಅಂತಹ ಅಭ್ಯಾಸದ ಜತೆಗೆ ಸಾಹಿತ್ಯದಲ್ಲಿ ಆಸಕ್ತಿ ಮೂಡಿಸಲು ಕನ್ನಡ ಶಿಕ್ಷಕರ ಪಾತ್ರ ಮಹತ್ವದಾಗಿದೆ ಎಂದು ಡಿಡಿಪಿಯು ಎಸ್.ಆರ್.ಮಂಜುನಾಥ ಹೇಳಿದರು. ಸಮ್ಮೇಳನದಲ್ಲಿ ಮಾತನಾಡಿದ ಅವರು, ಕವಿಗಳ ಸಾಧನೆಗಳನ್ನು ಮಕ್ಕಳಿಗೆ ಪರಿಚಯಿಸಿ, ಅನೇಕ ಸಾಧಕರ ಜೀವನ ಚರಿತ್ರೆ ಮೆಲಕು ಹಾಕಿದಾಗ, ಅವರೆಲ್ಲ ಕನ್ನಡ ಮಾಧ್ಯಮದಲ್ಲಿ ಓದಿದವರು ಎಂಬುದು ಪ್ರೇರಣೀಯ ಸಂಗತಿ. ಕನ್ನಡ ಮಾಧ್ಯಮದಲ್ಲಿನ ಓದು, ಬದುಕಿನಲ್ಲಿ ಹಿಂದೆ ಬೀಳುವಂತೆ ಮಾಡುತ್ತದೆ ಎಂಬ ಅಂಧತ್ವ ಬೇಡ. ಇಷ್ಟದ ಓದು ನಿಮ್ಮದಾಗಲಿ ಎಂದು ಆಶಿಸಿದರು.