ಕೊಟ್ಟ ಮಾತಿನಂತೆ ನಡೆದಿದ್ದೇವೆ, ಜನರಿಗೆ ನಮ್ಮ ಬಗ್ಗೆ ಆಕ್ರೋಶವಿಲ್ಲ: CM ಸಿದ್ದರಾಮಯ್ಯ

CM
Published on

ವಿಜಯನಗರ: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾಗಿದೆ. ನಾವು ಜನರಿಗೆ ಕೊಟ್ಟ ಭರವಸೆ ಈಡೇರಿಸಿದ್ದು,‌ ಅದನ್ನು ಜನರಿಗೆ ತಿಳಿಸುತ್ತಿದ್ದೇವೆ. ಪ್ರಣಾಳಿಕೆಯಲ್ಲಿ 593 ಭರವಸೆ ಕೊಟ್ಟಿದ್ದೇವೆ. ಎರಡು ವರ್ಷದಲ್ಲಿ 242 ಈಡೇರಿಸಿದ್ದೇವೆ. ಬಾಕಿ ಭರವಸೆ ಮುಂದಿನ ಮೂರು ವರ್ಷದಲ್ಲಿ ಈಡೇರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಹೊಸಪೇಟೆಯಲ್ಲಿ ಮಂಗಳವಾರ (20) ನಡೆದ  ಕಾಂಗ್ರೆಸ್ ಸರ್ಕಾರದ ಸಮರ್ಪಣೆ ಸಂಕಲ್ಪ ಸಾಧನಾ ಸಮಾವೇಶದಲ್ಲಿ ಮಾತನಾಡಿ ಅವರು, ಎಲ್ಲ ಜಾತಿ, ಧರ್ಮ,‌ ಪಕ್ಷ ದವರಿಗೆ ಪಂಚ ಗ್ಯಾರಂಟಿ ಕೊಟ್ಟಿದ್ದೇವೆ. ಅಧಿಕಾರಕ್ಕೆ ಬಂದ ತಿಂಗಳೊಳಗೆ ಶಕ್ತಿ ಯೋಜನೆ ಜಾರಿ ಮಾಡಿದೆವು. ಜುಲೈನಲ್ಲಿ ಗೃಹಜ್ಯೋತಿ, ಅನ್ನಭಾಗ್ಯ ಕೊಟ್ಟೆವು‌. ಆಗಸ್ಟ್ ನಲ್ಲಿ ಗೃಹಲಕ್ಷ್ಮೀ, ಜನವರಿಯಲ್ಲಿ ಯುವನಿಧಿ ಜಾರಿ ಮಾಡಿದ್ದೇವೆ. ಕೊಟ್ಟ ಮಾತಿನಂತೆ ನಡೆಯುವುದು ನಮ್ಮ ಸರ್ಕಾರ ಎಂದು ಪುನರುಚ್ಛರಿಸಿದರು.

2013-18ರ ಅವಧಿಯಲ್ಲೂ ಕೊಟ್ಟ ಎಲ್ಲ ಭರವಸೆ ಈಡೇರಿಸಿದ್ದೇವೆ‌. ಬಿಜೆಪಿ 600 ಭರವಸೆ ಕೊಟ್ಟು ಶೇ.10ರಷ್ಟು ಈಡೇರಿಸಿಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವೆಲ್ಲ ನೂರಕ್ಕೆ ನೂರು ಸುಳ್ಳು. ನಾವೇನು ಮಾಡಿದ್ದೇವೆ, ಅವರೇನು ಮಾಡಿದ್ದಾರೆಂಬ ಬಗ್ಗೆ ಬಹಿರಂಗ ಚರ್ಚೆಗೆ ಅವರು ಸಿದ್ಧರಿಲ್ಲ.‌ ಶಾಂತಿ ಹದಗೆಡಿಸಿ, ದ್ವೇಷ ಹುಟ್ಟುಹಾಕುವ ಕೆಲಸ ಮಾಡುತ್ತಿದ್ದಾರೆ. ನಾವು ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುತ್ತೇವೆ. ಹಿಂದು, ಮುಸ್ಲಿಂ, ಕ್ರೈಸ್ತ ಎಲ್ಲರೂ ಒಂದೇ, ನಾವೆಲ್ಲ ಮನುಷ್ಯರು. ಅಂಬೇಡ್ಕರ್ ಅವರ ಕೊಟ್ಟ ಸಂವಿಧಾನದಂತೆ ಬದುಕುತ್ತಿದ್ದೇವೆ. ಎಲ್ಲರೂ ಸಮಾನರಾಗಿ ಬಾಳಬೇಕು. ಸ್ವಾತಂತ್ರ್ಯ, ಸಮಾನತೆ,‌ ಭ್ರಾತೃತ್ವ ಸಂವಿಧಾನದ ಆಶಯ. ವಿವಿಧೆತೆಯಲ್ಲಿ ಏಕತೆ ನಮ್ಮ ಪಕ್ಷದ ಧ್ಯೇಯ ಎಂದು ತಿಳಿಸಿದರು.

ಕಳೆದೆರಡು ವರ್ಷದಲ್ಲಿ ಕೇಂದ್ರ ರಾಜ್ಯಕ್ಕೆ ಅನೇಕ ಅನ್ಯಾಯ ಮಾಡಿದೆ. 14ನೇ ಹಣಕಾಸಿನಲ್ಲಿ ಪ್ರತಿ ವರ್ಷ 14 ಸಾವಿರ ಕೋಟಿ ರೂ. ನಷ್ಟ ಆಗಿದೆ. ನಾವು ಕಟ್ಟುವ 4.5 ಲಕ್ಷ‌ ಕೋಟಿ ತೆರಿಗೆಯಲ್ಲಿ ಕೇವಲ 65 ಸಾವಿರ‌ ಕೋಟಿ ರೂ.‌ ಕೊಡುತ್ತಿದ್ದಾರೆ. ಅನ್ಯಾಯ ಸರಿಪಡಿಸಬೇಕು,  ನಮ್ಮ ಪಾಲು ನಮಗೆ ಕೊಡಬೇಕು. ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕಳೆದ ವರ್ಷ 46 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. 22 ಸಾವಿರ ಕೋಟಿ ಕೇಂದ್ರ ಪಾಲಿನಲ್ಲಿ 18 ಸಾವಿರ‌ಕೋಟಿ ಬಂದಿದೆ, ನಾಲ್ಕು ಸಾವಿರ ಕೋಟಿ ಬರಲಿಲ್ಲ ಎಂದು  ಹೇಳಿದರು.

5425 ಕೋಟಿ‌ರೂ.‌ಕೊಡುವಂತೆ ಹಣಕಾಸು ಆಯೋಗ ಶಿಫಾರಸ್ಸು ಮಾಡಿದೆ. ಆ ಹಣವೂ ಬರಲಿಲ್ಲ. ಬೆಂಗಳೂರು ಅಭಿವೃದ್ಧಿಗೂ ಅನುದಾನ ನೀಡಲಿಲ್ಲ. ಒಟ್ಟು 11925 ಕೋಟಿ ರೂ. ನಮ್ಮ ಪಾಲಿನ ಅನುದಾನ ಕೊಟ್ಟಿಲ್ಲ. ಹಣಕಾಸು ಸಚಿವೆ ನಿರ್ಮಲಾ‌ಸೀತಾರಾಮನ್ ಗೆ ಎರಡು ಬಾರಿ ಮನವಿ ಮಾಡಿರುವೆ. ನಾಡಿನ‌ ಜನ ಇದನ್ನು ಪ್ರತಿಭಟಿಸಬೇಕು. ಬಿಜೆಪಿ, ಜೆಡಿಎಸ್ ಈ ಬಗ್ಗೆ ಒಂದು ಮಾತೂ ಆಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕಮಲ-ದಳ‌ ವಿರುದ್ಧ ವಾಗ್ದಾಳಿ

ಜೆಡಿಎಸ್-ಬಿಜೆಪಿ ಪೂರ್ಣ ಬೆಂಬಲದೊಂದಿಗೆ ಅಧಿಕಾರಕ್ಕೆ ಬರಲಿಲ್ಲ. ಆಪರೇಷನ್ ಕಮಲ ಮೂಲಕ‌ ಅಧಿಕಾರ ನಡೆಸಿದರು. ಗುತ್ತಿಗೆದಾರರು 40 ಪರ್ಸೆಂಟ್ ಎಂದು ಆರೋಪಿಸಿದರು. ನಾನು ಆಯೋಗ ರಚಿಸಿ ತನಿಖೆ ಮಾಡಿಸಿದೆ. ಅವರೆಲ್ಲ‌ ಭ್ರಷ್ಟರು ಎಂದು ಬಯಲಾಗಿದೆ ಎಂದು ಒತ್ತಿ ಹೇಳಿದರು.

ನಮ್ಮ ಬಗ್ಗೆ ಜನಾಕ್ರೊಶ ಇಲ್ಲ

650 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. 1.62 ಕೋಟಿ ಕುಟುಂಬಕ್ಕೆ ಗೃಹ ಜ್ಯೋತಿ, 4 ಕೋಟಿ ಕುಟುಂಬಗಳಿಗೆ ಅನ್ನಭಾಗ್ಯ ಸಿಕ್ಕಿದೆ. ಯುವಕರಿಗೆ ಯುವನಿಧಿ ಸಿಗುತ್ತಿದೆ. ನಾವು ನುಡಿದಂತೆ ನಡೆದಿದ್ದೇವೆ. 3-4 ಲಕ್ಷ ಜನ ಸೇರಿದ್ದಾರೆ. ಬಿಜೆಪಿ ಹೇಳುವ ಜನಾಕ್ರೋಶ ಇದ್ದಿದ್ದರೆ ಇಷ್ಟು ಜನ ಬರುತ್ತಿರಲಿಲ್ಲ. ಬೆಲೆ ಏರಿಕೆಗೆ ಕೇಂದ್ರ ಕಾರಣ. ರಾಜ್ಯದಲ್ಲಿರುವ ಮೋದಿ ಚೇಲಾಗಳು 50 ರೂ.ಗೆ ಲೀಟರ್ ಪೆಟ್ರೋಲ್ ಸಿಗುತ್ತೆ ಎಂದು ಬೊಬ್ಬೆ ಹೊಡೆದರು. ಆದರೆ ಇಂದು ದುಪ್ಪಟ್ಟಾಗಿದೆ. ನಮ್ಮ‌ರಾಜ್ಯದಲ್ಲಿ ಪಕ್ಕದ ರಾಜ್ಯಕ್ಕಿಂತ ಕಡಿಮೆ ದರವಿದೆ. ಜನಾಕ್ರೋಶ ಸುಳ್ಳು ಕಾರ್ಯಕ್ರಮ. ನಮ್ಮ ಬಗ್ಗೆ ಜನರಲ್ಲಿ ಯಾವುದೇ ಆಕ್ರೋಶ ಇಲ್ಲ. 1,11,111ಹಕ್ಕು ಪತ್ರ ವಿತರಿಸಿದ್ದೇವೆ ಎಂದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net