

ಬೆಂಗಳೂರು:
ಯಾವುದನ್ನು ಯಾವಾಗ ಹೇಳಬೇಕೋ ಅವಾಗ ಹೇಳ್ತೀವಿ. ಹೇಳೋ ಕಾಲ ಬಂದಾಗ ಖಂಡಿತವಾಗಿ ಹೇಳ್ತೀವಿ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೆಹಲಿಗೆ ಹೋಗುವ ಬಗ್ಗೆ ಇಲ್ಲಿಯವರೆಗೆ ಕರೆ ಬಂದಿಲ್ಲ, ನಾನು ಕಾಯ್ತ ಇದ್ದೀನಿ. ಮೆಸೇಜ್ ಬಂದ್ರೆ ನಾಳೆ ಹೋಗ್ತೀನಿ ಎಂದರು.
ನಾನು ಗೃಹ ಸಚಿವ ಅಮಿತ್ ಷಾ ಜೊತೆ ಚೆನ್ನಾಗಿದ್ದೀನಿ ಅಂತ ಟಾರ್ಗೆಟ್ ಏನೂ ಇಲ್ಲ. ಅವರು ಸಹಕಾರ ಮಂತ್ರಿ, ನಾನು ಸಹಕಾರ ಮಂತ್ರಿ ಆಗಿದ್ದೆ ಅಷ್ಟೇ ಎಂದರು.
ನಾನು ಲೋಕಸಭೆಗೆ ನೂರಕ್ಕೆ ನೂರು ಹೋಗುವುದಿಲ್ಲ. ಹಾಗೆಯೇ ನನ್ನ ಮಗನೂ ನೂರಕ್ಕೆ ನೂರು ರಾಜಕೀಯಕ್ಕೆ ಬರಲ್ಲ. ಒಂದು ವೇಳೆ ನಾನು ಹಾಗೆ ಮಾಡಿದ ದಿನವೇ ನನ್ನ ಕೇಳಿ ಎಂದರು.
ಮುನಿರತ್ನ ಕ್ಷೇತ್ರದಲ್ಲಿ ಹೋಗಿದ್ದಾರೆ, ಕೆ.ಆರ್.ಪುರಂನಲ್ಲೂ ಹೋಗಿದ್ದಾರೆ, ಹಾಗೆ ನನ್ನ ಕ್ಷೇತ್ರದಲ್ಲೂ ಹೋಗಿದ್ದಾರೆ ಅಷ್ಟೇ. ಆದರೆ ನನ್ನ ಮೇಲೆ ಏಕೆ ಇಷ್ಟು ಸಂಶಯ ಎಂದು ಕೇಳಿದರು.
ನಕಲಿ ಬಿಲ್ ಮಾಡಿದವರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ತಿದ್ದಾರೆ ಎಂಬ ಹೆಚ್‌ಡಿಕೆ ಆರೋಪಕ್ಕೆ ಪ್ರತಿಕ್ರಿಯಿಸಿ, ಕ್ಷೇತ್ರದ ಜನತೆ ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ಅವರು ಹೇಳಿದಂತೆ ಇದ್ರೆ, ನಮ್ಮನ್ನು ಯಾಕೆ ಗೆಲ್ಲಿಸುತ್ತಿದ್ದರು? ಎಂದು ಪ್ರಶ್ನಿಸಿದರು. ಜೆಡಿಎಸ್ ಅಭ್ಯರ್ಥಿ ನಾಲ್ಕು ಬಾರಿ ಸೋತಿದ್ದಾರೆ. ಅದಕ್ಕೆ ಆ ರೀತಿಯಲ್ಲಿ ಹೇಳಿರಬಹುದು ಎಂದರು.
ಉಪಮುಖ್ಯಮಂತ್ರಿ ಎಸ್‌ಟಿಐ ಆದೇಶ ಮಾಡಿದ್ದಾರೆ. ನಮ್ಮ ಕ್ಷೇತ್ರದಲ್ಲೂ ತನಿಖೆ ನಡೀತಾ ಇದೆ. ಯಾವುದೇ ಸಣ್ಣ ಪುಟ್ಟದ್ದು ನಕಲಿ ಅಂತ ಗೊತ್ತಾದರೆ ಕ್ರಮ ವಹಿಸಲಿ ಎಂದರು.
*ನಾವು ಕಾಂಗ್ರೆಸ್‌ಗೆ ಹೋಗ್ತೀವಿ ಅನ್ನೋ ವಿಚಾರ ಯಾಕೆ ಬಂತೋ ಗೊತ್ತಿಲ್ಲ. ಅದನ್ನು ನಾವೂ ಆಲೋಚನೆ ಮಾಡ್ತೀವಿ. ಬೆಂಬಲಿಗರು ಅವರದ್ದೇ ಆದ ರೀತಿ ಮಾತಾಡ್ತಾರೆ. ನಾವು ಆ ರೀತಿ ನಿರ್ಧಾರ ಮಾಡಿಲ್ಲ. ನಾವು ಇಲ್ಲೇ ಇರ್ತೀವಿ.
-ಶಿವರಾಂ ಹೆಬ್ಬಾರ್, ಶಾಸಕರು