ಟೀಕೆ ಮಾಡುವವರಿಗೆ ಜಗ್ಗಲ್ಲ.. ಬಗ್ಗಲ್ಲ; ನಮ್ಮ ಕೆಲಸಗಳೇ ಅವರಿಗೆ ಉತ್ತರ | D.K Shivakumar

Untitled-design-51
Published on

ಮಳವಳ್ಳಿ: ಕೆಲಸ ಮಾಡಿರುವವರನ್ನು ಕಂಡರೆ ಟೀಕೆ ಮಾಡುವುದು, ಮರದಲ್ಲಿ ಹಣ್ಣು ಕಂಡರೆ ಕಲ್ಲು ಹೊಡೆಯುವುದು ಸಹಜ. ಟೀಕೆ ಮಾಡುವವರಿಗೆ ನಾವು ಜಗ್ಗುವುದು ಇಲ್ಲ.. ಬಗ್ಗುವುದು ಇಲ್ಲ. ನಮ್ಮ ಕೆಲಸಗಳೇ ಅವರಿಗೆ ಉತ್ತರ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್(D.K Shivakumar) ಹೇಳಿದರು.

ಬೆಂಗಳೂರಿನ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಕಾವೇರಿ ಐದನೇ ಹಂತದ ಯೋಜನೆಯನ್ನು ಬುಧವಾರ(ಅಕ್ಟೋಬರ್​​ 16) ಸಿಎಂ ಸಿದ್ದರಾಮಯ್ಯ ಅವರ ಜತೆಗೂಡಿ ಡಿಸಿಎಂ ಡಿ.ಕೆ ಶಿವಕುಮಾರ್ ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದರು. ಕಾವೇರಿ ಐದನೇ ಹಂತದ ಯೋಜನೆ ಕೇವಲ 110 ಹಳ್ಳಿಗಳಿಗೆ ಮಾತ್ರ ಸೀಮಿತವಾದ ಯೋಜನೆಯಲ್ಲ. ಕರ್ನಾಟಕ ರಾಜ್ಯದ ಜನಸಂಖ್ಯೆಯ ನಾಲ್ಕನೇ ಒಂದು ಭಾಗ ಅಂದರೆ 1.50 ಕೋಟಿ ಜನರಿಗೆ ಸಂಬಂಧಿಸಿದ ಯೋಜನೆಯಾಗಿದೆ. ಸಿದ್ದರಾಮಯ್ಯ ಅವರೇ ಆರಂಭಿಸಿದ ಈ ಯೋಜನೆ ಅವರ ಕಾಲದಲ್ಲಿ ಉದ್ಘಾಟನೆ ಆಗುತ್ತಿರುವುದು ಅವರಿಗೆ ಸಿಕ್ಕಿರುವ ಭಾಗ್ಯ ಎಂದು ಹೇಳಿದರು.

ಎತ್ತಿನಹೊಳೆ ಯೋಜನೆ ಜಾರಿ ಆಗುವುದಿಲ್ಲ ಎಂದು ಈ ಭಾಗದ ಸಂಸದರು ಟೀಕೆ ಮಾಡಿದ್ದರು. ಇನ್ನು ತುಂಗಾಭದ್ರ ಅಣೆಕಟ್ಟಿನ 19ನೇ ಕ್ರೆಸ್ಟ್​​ ಗೇಟ್​ ಹಾಳಾಗಿದ್ದಾಗಲೂ ನಮ್ಮ ಸರ್ಕಾರದ ವಿರುದ್ಧ ಸಾಕಷ್ಟು ಟೀಕೆ ಮಾಡಿದರು. ಅವರ ಟೀಕೆಗಳು ಸಾಯುತ್ತವೆ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ ಎಂದು ಆಗ ಹೇಳಿದ್ದೆ. ಅದೇ ರೀತಿ ಅವರ ಟೀಕೆಗಳು ಸತ್ತಿವೆ ನಮ್ಮ ಕೆಲಸಗಳು ಉಳಿದಿವೆ. ಇದಕ್ಕೆ 1.50 ಕೋಟಿ ಜನರ ಉಪಯೋಗಕ್ಕೆ ಕೊಟ್ಟಿರುವ ಕುಡಿಯುವ ನೀರಿನ ಯೋಜನೆಯೇ ಸಾಕ್ಷಿ ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್ ಆದೇಶದಂತೆ ಈ ವರ್ಷ ತಮಿಳುನಾಡಿಗೆ 132 ಟಿಎಂಸಿ ನೀರು ಹರಿಸಬೇಕಾಗಿತ್ತು. ಆದರೆ ಈವರೆಗೂ 213 ಟಿಎಂಸಿ ನೀರನ್ನು ಹರಿಸಲಾಗಿದೆ. ನಮ್ಮ ನೀರು ನಮ್ಮ ಹಕ್ಕು ಎಂಬ ಉದ್ದೇಶದಿಂದ ಮೇಕೆದಾಟು ಪಾದಯಾತ್ರೆ ಮಾಡುದೆವು. ಬೆಂಗಳೂರಿನ ನೀರಿನ ಸಮಸ್ಯೆ ಬಗೆಹರಿಸಲು ನಮ್ಮ ಸರ್ಕಾರ ಜವಾಬ್ದಾರಿ ವಹಿಸಿಕೊಂಡಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net