ಹಸಿರುಮಕ್ಕಿ ಸೇತುವೆ ವಿಳಂಬಕ್ಕೆ ಕಾರಣ ನಾವಲ್ಲ

halappa (5)
ಹರತಾಳು ಹಾಲಪ್ಪ
Published on

ಸಾಗರ: ಹಸಿರುಮಕ್ಕಿ ಸೇತುವೆ ಕಾಮಗಾರಿ ವಿಳಂಬವಾಗಲೂ ನಾನಾಗಲೀ ಅಥವಾ ಸಂಸದ ಬಿ.ವೈ.ರಾಘವೇಂದ್ರ ಅವರಾಗಲೀ ಕಾರಣರಲ್ಲ. ಯೋಜನೆ ರೂಪಿಸುವಾಗ ನೀರಿನ ಆಳ ಅಂದಾಜಿಸದಿರುವುದು ಕಾಮಗಾರಿ ವಿಳಂಬವಾಗಲು ಕಾರಣ. ಶಾಸಕ ಗೋಪಾಲಕೃಷ್ಣ ಬೇಳೂರು ಅಪ್ರಬುದ್ಧರಂತೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ತಿರುಗೇಟು ನೀಡಿದರು.

ಶುಕ್ರವಾರ ಸಾಗರದಿಂದ ಆಯೋಜಿಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು ಹಸಿರುಮಕ್ಕಿ ಸೇತುವೆ ವೀಕ್ಷಣೆಗೆ ಹೋದಾಗ ಅನಗತ್ಯ ಪ್ರಲಾಪ ಮಾಡಿ ವಿಳಂಬಕ್ಕೆ ನಾವೇ ಕಾರಣ ಎಂದು ಹೇಳಿರುವುದು ಅವಿವೇಕತನ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದರು.

2018ರಲ್ಲಿ ಕಾಗೋಡು ತಿಮ್ಮಪ್ಪ ಅವರು ಹಸಿರುಮಕ್ಕಿ ಸೇತುವೆಗೆ 115 ಕೋಟಿ ರೂ. ಬಿಡುಗಡೆ ಮಾಡಿಸಿದ್ದರು. ಯೋಜನೆ ರೂಪಿಸುವಾಗ 22 ಅಡಿ ನೀರು ನಿಲ್ಲುತ್ತದೆ ಎಂದು ತೋರಿಸಲಾಗಿತ್ತು. ಆದರೆ ಹಸಿರುಮಕ್ಕಿಯಲ್ಲಿ 62ರಿಂದ 72 ಅಡಿ ನೀರು ನಿಲ್ಲುತ್ತದೆ. ಕೆಆರ್‌ಐಡಿಎಲ್ ಯೋಜನೆ ಉಸ್ತುವಾರಿ ವಹಿಸಲಾಗಿದೆ. ನೀರು ಹೆಚ್ಚು ನಿಲ್ಲುವುದರಿಂದ 115 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಅಸಾಧ್ಯ ಎಂದು ಗುತ್ತಿಗೆದಾರ ವಿಳಂಬ ಮಾಡಿದ್ದಾನೆ ಎಂದು ಸ್ಪಷ್ಟನೆ ನೀಡಿದರು.

ನಾನು ಶಾಸಕನಾದ ಆರಂಭದಲ್ಲಿ ಹಣ ಒದಗಿಸಲು ಸಾಧ್ಯವಾಗಲಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆದ ನಂತರ 10.07 ಕೋಟಿ ರೂ. ಮಂಜೂರು ಮಾಡಿಸಿದ್ದೇನೆ. ಆದರೆ ಗುತ್ತಿಗೆ ಹಿಡಿದ ಕಂಪನಿ ತಾಂತ್ರಿಕವಾಗಿ ಅಷ್ಟೊಂದು ಗಟ್ಟಿಯಾಗಿಲ್ಲ. ಇದರಿಂದ ಕಾಮಗಾರಿ ವಿಳಂಬವಾಗಿದೆ. ಮೂರು ಬಾರಿ ಶಾಸಕರಾದವರು ಸ್ವಲ್ಪ ವಿವೇಚನೆ ಇರಿಸಿಕೊಂಡು ಮಾತನಾಡುವುದು ಸೂಕ್ತ ಎಂದರು.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ನಾನು ವಿರೋಧಿಸಿಕೊಂಡೇ ಬಂದಿದ್ದೇನೆ. ಈಗಲೂ ಯೋಜನೆ ಕೈಬಿಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಯೋಜನೆ ಪರವಾಗಿದೆ. ಸುಮಾರು 89 ಸಾವಿರ ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಯೋಜನೆಯಿಂದ ಫಲವತ್ತಾದ ಕಾಡು ನಾಶವಾಗುವುದಂತೂ ಸತ್ಯ. ಹಾಗಾಗಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವೈಯಕ್ತಿಕವಾಗಿ ನನ್ನ ವಿರೋಧವಿದೆ ಎಂದರು.

ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ನಿರ್ಮಾಣಕ್ಕೆ ಹಾಲಿ ಶಾಸಕರ ಕೊಡುಗೆ ಏನೂ ಇಲ್ಲ. ಸೇತುವೆ ನಿರ್ಮಾಣಕ್ಕಾಗಿ ನದಿಯಿಂದ ನೀರನ್ನು ಹೊರಗೆ ಬಿಟ್ಟಿದ್ದಾರೆ ಎಂದು ಇದೇ ಶಾಸಕರು ಅಪಪ್ರಚಾರ ಮಾಡಿದ್ದರು. ಸೇತುವೆ ನಿರ್ಮಾಣ ವೇಗವಾಗಿ ನಡೆಯುತ್ತಿರುವುದನ್ನು ಅವರು ಸಹಿಸಿರಲಿಲ್ಲ. ಈಗ ಹಸಿರುಮಕ್ಕಿ ಸೇತುವೆ ವಿಳಂಬಕ್ಕೆ ನಾವೇ ಕಾರಣ ಎಂದು ಸುಳ್ಳು ಹೇಳುತ್ತಿದ್ದಾರೆ. ಕಾಗೋಡು ತಿಮ್ಮಪ್ಪ ಹಸಿರುಮಕ್ಕಿ, ಯಡಿಯೂರಪ್ಪ ಅಂಬಾರಗೋಡ್ಲು-ಕಳಸವಳ್ಳಿ, ನಾನು ಪಟಗುಪ್ಪೆ ಸೇತುವೆ, ಬಿ.ವೈ.ರಾಘವೇಂದ್ರ ಅವರು ಸುತ್ತಾ ಸೇರಿ ಅನೇಕ ಸೇತುವೆ ನಿರ್ಮಾಣ ಮಾಡಿದ್ದಾರೆ. ಹಾಗಿದ್ದರೆ ಹಾಲಿ ಶಾಸಕರ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಮೈತ್ರಿ ಪಾಟೀಲ್, ಸವಿತಾ ವಾಸು, ಮಲ್ಲಿಕಾರ್ಜುನ ಹಕ್ರೆ, ಟಿ.ಡಿ.ಮೇಘರಾಜ್, ದೇವೇಂದ್ರಪ್ಪ, ಗಣೇಶಪ್ರಸಾದ್, ರಾಜಶೇಖರ ಗಾಳಿಪುರ, ಸುವರ್ಣ ಟೀಕಪ್ಪ, ಹು.ಬಾ.ಅಶೋಕ್, ಮುರಳಿ, ರೋಹಿತ್, ಆನಂದ್ ಜನ್ನೆಹಕ್ಲು, ಬಿ.ಟಿ.ರವೀಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net