

ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪ ಹೇಳದ್ದನ್ನು ಸ್ವಯಂ ಸೃಷ್ಟಿಸಿಕೊಂಡು, ರಾಜಕೀಯ ಲಾಭಕ್ಕಾಗಿ ಸದನದ ಅಮೂಲ್ಯ ಸಮಯವನ್ನು ಪ್ರತಿಪಕ್ಷ ಹಾಳುಗೆಡವಿದೆ. ಈ ನಿಲುವು ನ್ಯಾಯವೆ? ಎಂದು ಕೇಳಲು ನೀವಷ್ಟೇ ಅಲ್ಲ, ನಾವೂ ಜನರ ಬಳಿಗೆ ಹೋಗುತ್ತೇವೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಡ್ಡು ಹೊಡೆದರು.
ವಿಧಾನ ಮಂಡಲದ ಉಭಯ ಸದನಗಳಲ್ಲಿ ಕೈಶಾಸಕರ ಮುಂದುವರಿದ ಧರಣಿ, ಗದ್ದಲದ ನಡುವೆ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ರಾಜ್ಯಪಾಲರ ಭಾಷಣದಲ್ಲಿ ಮುನ್ನೋಟವಿದೆ ಎಂಬ ಸಮರ್ಥನೆ, ಸರ್ಕಾರದ ಸಾಧನೆಯನ್ನು ಮಂಡಿಸುತ್ತಾ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದರು. ಪ್ರತಿಪಕ್ಷಗಳು ಪ್ರಸ್ತಾಪಿಸುವ ವಿಷಯಗಳು, ಜನತೆ ಆಶೋತ್ತರಗಳ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧವಿದ್ದರೂ ಕಲಾಪಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್ನ ನಡವಳಿಕೆ ಜನ ವಿರೋಧಿ ಹಾಗೂ ರಾಜಕೀಯ ದ್ವೇಷದ್ದಾಗಿದೆ ಎಂದು ಕಿಡಿಕಾರಿದರು. ಯಾವುದೇ ಪ್ರಯೋಜನವಿಲ್ಲದ ಈ ಹೋರಾಟದಿಂದ ರಾಜಕೀಯ ಲಾಭವಾಗಲಿದೆ ಎಂಬ ಕಾಂಗ್ರೆಸ್ ಪಕ್ಷದ ಲೆಕ್ಕಾಚಾರ ತಲೆಕೆಳಗಾಗಲಿದೆ. ಆಡಳಿತ ಪಕ್ಷವಾಗಿ 2018ರಲ್ಲಿ ತಿರಸ್ಕೃತವಾಗಿದ್ದ ಕಾಂಗ್ರೆಸ್ ಇದೀಗ ವಿರೋಧ ಪಕ್ಷವಾಗಲೂ ಯೋಗ್ಯವಿಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದು ಕುಟುಕಿದರು.
ವಿಧಾನಸಭೆಯಲ್ಲಿ ಧರಣಿ ಕೈಬಿಡಬೇಕೆಂದು ಪದೇ ಪದೆ ಮನವಿ ಮಾಡಿದರೂ ಕಾಂಗ್ರೆಸ್ ಸ್ಪಂದಿಸದ ಕಾರಣ ಸಿಎಂ ಬೊಮ್ಮಾಯಿ ಮಾತು ಮುಂದುವರಿಸಿ, ರಾಜ್ಯದ ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಚಿತ್ರಣವನ್ನು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ‘ಕಾಮಾಲೆ ಕಣ್ಣಿಗೆ ಲೋಕವೆಲ್ಲಾ ಹಳದಿ’ ಎನ್ನುವಂತೆ ಇದರ ಮಹತ್ವ ಗುರುತಿಸುವಲ್ಲಿ ಪ್ರತಿಪಕ್ಷದ ನಾಯಕರು ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ಹುಬ್ಬಳ್ಳಿಯಲ್ಲಿ ರಾಷ್ಟ್ರ ಧ್ವಜಾರೋಹಣಕ್ಕೆ ತಡೆಯೊಡ್ಡಲು ಮಿಲ್ಟ್ರಿ ಕರೆ ತಂದು, ಗುಂಡಿಕ್ಕಿ ಆರು ಜನರನ್ನು ಕೊಲ್ಲಿಸಿದ ಕಾಂಗ್ರೆಸ್ ಪಕ್ಷವು ಈಗ ರಾಷ್ಟ್ರಧ್ವಜದ ಗೌರವದ ಬಗ್ಗೆ ಮಾತನಾಡುತ್ತಿದೆ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
ಗೃಹ ರಕ್ಷಕರ ಭತ್ಯೆ ಹೆಚ್ಚಳಕ್ಕೆ ಪ್ರಸ್ತಾವನೆ ರಾಜ್ಯದ ಗೃಹ ರಕ್ಷಕರಿಗೆ ನೀಡುತ್ತಿರುವ ಕರ್ತವ್ಯ ಭತ್ಯೆಯನ್ನು 600 ರೂ.ಗೆ ಹೆಚ್ಚಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಜೆಡಿಎಸ್ನ ಎ.ಮಂಜುನಾಥ್ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಪ್ರಸ್ತುತ ಗೃಹ ರಕ್ಷಕರಿಗೆ ಬೆಂಗಳೂರು ನಗರದಲ್ಲಿ 455 ರೂ. ಹಾಗೂ ಇತರೆ ಸ್ಥಳಗಳಲ್ಲಿ 380 ರೂ. ಕರ್ತವ್ಯ ಭತ್ಯೆ ನೀಡಲಾಗುತ್ತಿದೆ ಎಂದರು.
ದುರುಪಯೋಗ ತಡೆಗೆ ಕ್ರಮ: ಕಾರ್ವಿುಕರ ನೋಂದಣಿ ದುರುಪಯೋಗ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದರು. ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಕೆ.ಬಿ.ಅಶೋಕ್ ನಾಯ್್ಕ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಕಾರ್ವಿುಕರ ನೋಂದಣಿ ದುರುಪಯೋಗವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈಗಾಗಲೇ ಈ ಬಗ್ಗೆ ತನಿಖೆ ನಡೆಯುತ್ತಿದೆ. ಕೆಲವು ನೋಂದಣಿ ರದ್ದುಪಡಿಸಲಾಗಿದೆ ಎಂದು ಹೇಳಿದರು.
ಫಲಿಸದ ಯತ್ನ ನಡೆಯದ ಕಲಾಪ: ‘ಧ್ವಜ’ ಪ್ರಕರಣ ಮುಂದಿಟ್ಟು, ಈಶ್ವರಪ್ಪ ರಾಜೀನಾಮೆಗೆ ಪಟ್ಟುಬಿಡದ ಕಾಂಗ್ರೆಸ್ ಧರಣಿ ಹಾಗೂ ಧಿಕ್ಕಾರ ಘೋಷಣೆ ನಡುವೆಯೂ ಮನವೊಲಿ ಸಲು ಬೊಮ್ಮಾಯಿ ಹಾಗೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಮಾಡಿದ ಪ್ರಯತ್ನ ಫಲಿಸಲಿಲ್ಲ. 7 ದಿನಗಳ ಅಧಿವೇಶನದಲ್ಲಿ ಎರಡು ದಿನ ಮಾತ್ರ ಚರ್ಚೆಯಾಗಿದೆ. ಐದು ದಿನಗಳ ಕಾಲ ಕಲಾಪ ಸರಿಯಾಗಿ ನಡೆದಿಲ್ಲ. ಪ್ರತಿಪಕ್ಷ ಜೆಡಿಎಸ್ ಚರ್ಚೆಗೆ ಸಿದ್ಧವಿದ್ದರೂ ಕಾಂಗ್ರೆಸ್ ಸಹಕರಿಸುತ್ತಿಲ್ಲ. ಉಳಿದ 3 ದಿನ ವ್ಯರ್ಥವಾಗುವುದನ್ನು ತಪ್ಪಿಸಲು ಅಧಿವೇಶನ ಮುಂ ದೂಡಿಕೆ ಅನಿವಾರ್ಯವಾಗಿದೆ ಎಂದ ಸ್ಪೀಕರ್, ಮಾ.4ಕ್ಕೆ ಸೇರುವಂತೆ ಅಧಿವೇಶನ ಮುಂದೂಡಿರುವುದಾಗಿ ಪ್ರಕಟಿಸಿದರೆ, ವಿಧಾನ ಪರಿಷತ್ನಲ್ಲೂ ಸಭಾಪತಿ ಇದೇ ನಿರ್ಧಾರ ಕೈಗೊಂಡರು.
ಕರೊನಾಗೆ ವಿನಾಯಿತಿ: ಹಿರಿಯರ ಮನೆಯಲ್ಲಿ ಸಲಹೆ-ಸೂಚನೆ ನಿರೀಕ್ಷಿಸಿದ್ದೆ. ರಾಜ್ಯಪಾಲರ ಭಾಷಣದ ಮೇಲೆ ಪೂರ್ಣ ಪ್ರಮಾಣದ ಚರ್ಚೆಯಾಗದಿರುವುದು ಕಪು್ಪ ಚುಕ್ಕೆಯಾಗಿದೆ. ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಸರ್ಕಾರದ ಸಾಧನೆ ಹೇಳಿಕೊಂಡಾಗ ಅದರ ನ್ಯೂನ್ಯತೆ ಹೇಳಲು ಅವಕಾಶವಿದೆ. ಆ ಕರ್ತವ್ಯವನ್ನಾದರೂ ಮಾಡಿ ಎಂಬ ಸಿಎಂ ಬೊಮ್ಮಾಯಿ ಮನವಿ, ಸಭಾಪತಿ ಸಲಹೆಗೆ ಪ್ರತಿಪಕ್ಷ ಕಾಂಗ್ರೆಸ್ ಸ್ಪಂದಿಸಿ, ಕರೊನಾ ನಿಯಂತ್ರಣ ಹಾಗೂ ನಿರ್ವಹಣೆ ಕುರಿತು ಬೊಮ್ಮಾಯಿ ವಿವರಿಸುವ ವೇಳೆ ಘೋಷಣೆಯಿಂದ ವಿನಾಯಿತಿ ನೀಡಿದರು. ಕರೊನಾ ನಿರ್ವಹಣೆಯಲ್ಲಿ ಅವ್ಯವಹಾರವಾಗಿದೆ ಎಂದು ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಆರೋಪಿಸಿದರೆ, ಸಿಎಂ ಮಾತನಾಡುತ್ತಿರಬೇಕಾದರೆ ಅಡ್ಡಿಪಡಿಸುವದು ಸರಿಯಲ್ಲವೆಂದು ಬಿಜೆಪಿ ಸದಸ್ಯರು ಆಕ್ಷೇಪಿಸಿದರು. ನಂತರ ಸಿಎಂ ಮಾತು ಮುಂದುವರಿಸಿದರೆ ಧರಣಿ ನಿರಂತರ ಗದ್ದಲ, ಕಲಾಪ ಮುಂದೂಡುವ ತನಕ ಘೋಷಣೆಗಳು ಮೊಳಗುತ್ತಲೇ ಇದ್ದವು.
ಮಾ.4ಕ್ಕೆ ಬಜೆಟ್: ವಿಧಾನಸಭೆ ಅಧಿವೇಶನದಲ್ಲಿ ಮಾ.4ರಂದು ರಾಜ್ಯದ 2002-23ನೇ ಸಾಲಿನ ಬಜೆಟ್ ಮಂಡಿಸಲು ತೀರ್ವನಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ಅಧಿವೇಶನ ಮುಂದೂಡಿಕೆಯಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪ್ರಗತಿಗೆ ಪೂರಕ, ನ್ಯಾಯಯುತ ಮುಂಗಡಪತ್ರವನ್ನು ರಾಜ್ಯದ ಜನರ ಮುಂದಿಡುವೆ ಎಂದರು.
ಪಿಎಸ್ಐ ಮುಂಬಡ್ತಿ ಅನುಪಾತ ಬದಲಿಲ್ಲ: ಪಿಎಸ್ಐ ಹುದ್ದೆಗೆ ಮುಂಬಡ್ತಿ ಅನುಪಾತ 70:30 ಅನ್ನು 50: 50ಕ್ಕೆ ನಿಗದಿಪಡಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು. ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಬಿಜೆಪಿಯ ಪಿ.ರಾಜೀವ್(ಕುಡಚಿ) ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು. ಪಿಎಸ್ಐ(ಸಿವಿಲ್) ಹುದ್ದೆಯ ಮುಂಬಡ್ತಿಗೆ 70:30ರ ಅನುಪಾತವನ್ನು ನಿಗದಿಪಡಿಸಲಾಗಿದೆ. ಪಿಎಸ್ಐ ಹುದ್ದೆಯು ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಹುದ್ದೆಯಾಗಿದ್ದು ಕರ್ತವ್ಯ ನಿರ್ವಹಿಸಲು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಬೇಕು. ಅಲ್ಲದೆ, ತಾಂತ್ರಿಕ ನೈಪುಣ್ಯತೆಯುಳ್ಳ ಯುವ ಅಧಿಕಾರಿಗಳ ಅವಶ್ಯಕತೆ ಇರುವುದರಿಂದ ಶೇ.70:30ರಷ್ಟು ಅನುಪಾತವನ್ನು ನಿಗದಿಪಡಿಸಲಾಗಿದೆ. ಇತರೆ ಇಲಾಖೆಗಳಲ್ಲಿ ಇರುವಂತೆ 50:50ಕ್ಕೆ ಮಾರ್ಪಡಿಸುವ ಪ್ರಸ್ತಾವನೆ ಇರುವುದಿಲ್ಲ ಎಂದು ಹೇಳಿದರು. ಎಎಸ್ಐ ಹುದ್ದೆಯಿಂದ ಪಿಎಸ್ಐ ಹುದ್ದೆಗೆ ಮುಂಬಡ್ತಿ ಹೊಂದಲು ಹಾಲಿ ಇರುವ ನಾಲ್ಕು ವರ್ಷ ಅರ್ಹತಾದಾಯಕ ಸೇವೆಯನ್ನು ಮೂರು ವರ್ಷಕ್ಕೆ ಇಳಿಸುವ ಪ್ರಸ್ತಾವನೆಯೂ ಸರ್ಕಾರದ ಮುಂದಿಲ್ಲ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.
ಅನುದಾನ ಹೆಚ್ಚಳಕ್ಕೆ ಕ್ರಮ: ಪುರಸಭೆ, ಪಟ್ಟಣ ಪಂಚಾಯಿಗಳಿಗೆ ಅನುದಾನ ಹೆಚ್ಚಳ ಮಾಡಲು ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.ಜೆಡಿಎಸ್ನ ಸಿ.ಎನ್.ಮಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿ, ಪುರಸಭೆಗಳಿಗೆ 10 ಕೋಟಿ ರೂ., ಪ.ಪಂ.ಗಳಿಗೆ ಹೆಚ್ಚುವರಿಯಾಗಿ 2 ಕೋಟಿ ರೂ. ಅನುದಾನ ಹಂಚಿಕೆ ಮಾಡಲು ಮತ್ತು ಗ್ರೇಡ್-1 ನಗರಸಭೆಗಳ ಅನುದಾನ ವನ್ನು 5 ಕೋಟಿ ರೂ. ಕಡಿತ ಮಾಡುವಂತೆ ಸಿಎಂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.