ಮೆಣಸಿನಕಾಯಿಗೆ ನೀರು, ಗುಣಮಟ್ಟ ಹಾಳು

h5- Chilly 1
Published on

ಹುಬ್ಬಳ್ಳಿ: ಒಣ ಮೆಣಸಿನಕಾಯಿಗೆ ಹೆಚ್ಚು ನೀರು ಹೊಡೆಯುವುದರಿಂದ ಅದರ ಗುಣಮಟ್ಟ ಹಾಳಾಗುತ್ತದೆ. ಆದ್ದರಿಂದ ಘಾಟು ಬರದಂತೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಾತ್ರ ಚಿಮುಕಿಸಿ ಮಾರುಕಟ್ಟೆಗೆ ತರಬೇಕು ಎಂದು ಎಪಿಎಂಸಿ ದಲ್ಲಾಳಿಗಳು ರೈತರಲ್ಲಿ ಮನವಿ ಮಾಡಿದ್ದಾರೆ.

ಒಂದೊಮ್ಮೆ ಒಣಗಿದ ಮೆಣಸಿನಕಾಯಿಗೆ ಹೆಚ್ಚು ನೀರು ಹೊಡೆದರೆ ಅದರ ಕೆಂಪು ಬಣ್ಣ (ಒಲಿಯೊರಿಜಿನ್)ದ ಗುಣಮಟ್ಟ ಕಡಿಮೆಯಾಗುತ್ತದೆ. ಅಲ್ಲದೆ, ಮೆಣಸಿನಕಾಯಿಯನ್ನು ಮೂರ್ನಾಲ್ಕು ದಿನ ಹಾಗೇ ಚೀಲದಲ್ಲಿ ತುಂಬಿ ಇಟ್ಟರೆ ಕೆಟ್ಟು ಹೋಗುತ್ತದೆ.

ಈ ಎಲ್ಲ ಕಾರಣಗಳಿಗೆ ಖರೀದಿದಾರರು ನೀರು ಹೊಡೆದ ಮೆಣಸಿನಕಾಯಿಗೆ ಕಡಿಮೆ ದರ ನಿಗದಿ ಮಾಡುತ್ತಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಒಣ ಮೆಣಸಿನಕಾಯಿಗೆ ಹೆಚ್ಚು ದರ ಇದ್ದರೂ ಅದರ ಲಾಭ ರೈತರಿಗೆ ಸಿಗುವುದಿಲ್ಲ. ಒಂದು ಚೀಲ ಮೆಣಸಿನಕಾಯಿಗೆ ಹೆಚ್ಚು ನೀರು ಹೊಡೆದು ಒಂದೆರಡು ಕೆಜಿ ತೂಕ ಹೆಚ್ಚು ಮಾಡಬಹುದಷ್ಟೆ. ಆದರೆ, ದರದಲ್ಲಿ ವ್ಯತ್ಯಾಸವಾಗಿ ಹೆಚ್ಚು ಹಾನಿಯಾಗುತ್ತದೆ. ಅದೇ ಒಣಮೆಣಸಿನಕಾಯಿಗೆ ಒಂದೆರಡು ಸಾವಿರ ರೂ. ಹೆಚ್ಚು ದರ ಸಿಕ್ಕರೆ ತೂಕದ ವ್ಯತ್ಯಾಸದ ಹಣಕ್ಕಿಂತ ಹೆಚ್ಚು ಲಾಭ ಬರುತ್ತದೆ. ಈ ವಿಚಾರವನ್ನು ರೈತರು ಅರಿತುಕೊಳ್ಳಬೇಕು ಎಂದು ಕಮಿಷನ್ ಏಜೆಂಟರು ಕೋರಿದ್ದಾರೆ.

ಬಾಗಲಕೋಟೆ, ವಿಜಯಪುರ, ಬಳ್ಳಾರಿ, ಗದಗ, ಸೇರಿ ಸುತ್ತಮುತ್ತಲಿನ ಜಿಲ್ಲೆಗಳಿಂದ ಹೆಚ್ಚಿನ ಮೆಣಸಿನಕಾಯಿ ಈಗ ಹುಬ್ಬಳ್ಳಿಗೆ ಆವಕವಾಗುತ್ತಿದೆ.

ಹೆಚ್ಚು ನೀರು ಹೊಡೆದಿದ್ದರಿಂದ ಕಳೆದ ಶನಿವಾರ ಬಹುತೇಕ ಲಾಟ್​ಗಳಿಗೆ ದರ ಕಡಿಮೆಯಾಯಿತು. ಹಾಗೆಂದು ಮೆಣಸಿನಕಾಯಿ ಗುಣಮಟ್ಟ ಕಡಿಮೆ ಇರಲಿಲ್ಲ. ರೈತರು ತೂಕ ಹೆಚ್ಚಿಸಲು ಹೋಗಿ ದರ ಕಳೆದುಕೊಂಡರು. ಹೀಗಾಗಬಾರದು. ಇನ್ನು ಮುಂದಾದರೂ ರೈತರು ಹೆಚ್ಚು ನೀರು ಹೊಡೆಯದೇ ಒಣಮೆಣಸಿನಕಾಯಿ ತರಬೇಕು, ಹೆಚ್ಚು ದರ ಪಡೆಯಬೇಕು ಎಂದು ಹುಬ್ಬಳ್ಳಿ ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಬಸವರಾಜ ಯಕಲಾಸಪುರ ಮನವಿ ಮಾಡಿದ್ದಾರೆ.

* ಎಷ್ಟಿದೆ ದರ?:

ಹುಬ್ಬಳ್ಳಿ ಎಪಿಎಂಸಿಯಲ್ಲಿ ವಾರದ ಹಿಂದೆ ಕ್ವಿಂಟಾಲ್ ಒಣಮೆಣಸಿನಕಾಯಿ ದರ 40 ಸಾವಿರ ರೂ.ವರೆಗೂ ಹೋಗಿತ್ತು. ಡಬ್ಬಿ, ಕಡ್ಡಿ ಎರಡು ವಿಧದ ಮೆಣಸಿನಕಾಯಿ ಈಗ ಮಾರುಕಟ್ಟೆಗೆ ಬರುತ್ತಿದೆ. ಅದೇ ಕಳೆದ ಶನಿವಾರ (ಜ. 2) ಹಾಗೂ ಸೋಮವಾರ (ಜ.4) ಒಣಮೆಣಸಿನಕಾಯಿ 20ರಿಂದ 30 ಸಾವಿರ ರೂ.ವರೆಗೆ ಮಾತ್ರ ಮಾರಾಟವಾಗಿದೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net