ನೀರಿನ ಟ್ಯಾಂಕರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ, ಒರ್ವ ಸಾವು

accident-15
Published on

ಬೆಂಗಳೂರು: ಮಾಗಡಿ ಮುಖ್ಯರಸ್ತೆಯಲ್ಲಿ ನೀರಿನ ಟ್ಯಾಂಕರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಮೃತಪಟ್ಟಿದ್ದಾನೆ.

ಅಂದ್ರಹಳ್ಳಿ ನಿವಾಸಿ ಆರ್.ಹರೀಶ್(೩೨) ಮೃತಪಟ್ಟವರು. ಘಟನೆ ಸಂಬಂಧ ಹರೀಶ್ ಪತ್ನಿ ನವ್ಯಾ ಎಂಬುವರು ನೀಡಿದ ದೂರಿನ ಮೇರೆಗೆ ನೀರಿನ ಟ್ಯಾಂಕರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿ ಚಾಲಕನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಹರೀಶ್ ಹಿಂಬದಿ ಸವಾರನಾಗಿ ಭಾನುವಾರ ಮಧ್ಯರಾತ್ರಿ ೨ ಗಂಟೆ ಸುಮಾರಿಗೆ ಸ್ನೇಹಿತ ಸುಚೀತ್ ಎಂಬುವರ ಜತೆ ಮಾಗಡಿ ಮುಖ್ಯರಸ್ತೆ ಕಡೆಯಿಂದ ಹೊಸಳ್ಳಿ ಕಡೆಗೆ ಹೋಗುತ್ತಿದ್ದರು. ಮಾರ್ಗ ಮಧ್ಯೆ ಕಾವೇರಿ ಪ್ಯಾಷನ್ ಬಳಿ ಎದುರು ದಿಕ್ಕಿನಿಂದ ಹೊಸಳ್ಳಿ ಕಡೆಯಿಂದ ಮಾಗಡಿ ಮುಖ್ಯರಸ್ತೆ ಕಡೆ ಬರುತ್ತಿದ್ದ ಶ್ರೀಕೃಷ್ಣ ಹೆಸರಿನ ನೀರಿನ ಟ್ಯಾಂಕರ್ ಚಾಲಕ ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಇಬ್ಬರು ಬೈಕ್ ಸವಾರರು ಕೆಳಗೆ ಬಿದ್ದು, ಗಾಯಗೊಂಡಿದ್ದರು. ಆಗ ಹರೀಶ್ ನೀರಿನ ಟ್ಯಾಂಕರ್‌ನ ಮುಂಭಾಗ ಸಿಲುಕಿಕೊಂಡಿದ್ದರಿಂದ ಸುಮಾರು ೨೦೦ ಮೀಟರ್ ದೂರ ಟ್ಯಾಂಕರ್ ಉಜ್ಜಿಕೊಂಡು ಹೋಗಿದೆ. ಪರಿಣಾಮ ತೀವ್ರ ರಕ್ತಸ್ರಾವವಾಗಿತ್ತು. ಕೂಡಲೇ ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾಗೆ ದಾಖಲಿಸಲಾಗಿತ್ತು. ಆದರೆ, ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ. ಇನ್ನು ಬೈಕ್ ಚಾಲಕ ಸುಚೀತ್ ಕೂಡ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೃತ್ಯ ಎಸಗಿದ ನೀರಿನ ಟ್ಯಾಂಕರ್ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಮಾಲೀಕರನ್ನು ಸಂಪರ್ಕಿಸಲಾಗಿದೆ. ಸದ್ಯದಲ್ಲೇ ಆರೋಪಿ ಚಾಲಕನನ್ನು ಬಂಧಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net