ಕಬಿನಿ ಜಲಾಶಯದಿಂದ ಡ್ಯಾಂ, ಕಾಲುವೆಗಳಿಗೆ ನೀರು ಹರಿಸಿ

07 HANUR 2
ಕಬಿನಿ ಜಲಾಶಯದಿಂದ ಕೆಂಪಯ್ಯನಹಟ್ಟಿ ಭಾಗದ ಹಳ್ಳ, ಡ್ಯಾಂ ಹಾಗೂ ಕಾಲುವೆಗಳಿಗೆ ನೀರು ಹರಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರವನ್ನು ವರ್ಣಿಕಾ ಓದುತ್ತಿದ್ದು, ಸಹಪಾಠಿಗಳು ಕೈ ಮುಗಿಯುತ್ತಿರುವುದು.
Published on

ಹನೂರು: ಕಬಿನಿ ಜಲಾಶಯದಿಂದ ಗ್ರಾಮದ ಹಳ್ಳ, ಡ್ಯಾಂ ಹಾಗೂ ಕಾಲುವೆಗಳಿಗೆ ನೀರು ಹರಿಸಿ ಜನರ ಸಂಕಷ್ಟ ಹಾಗೂ ಪ್ರಾಣಿ ಪಕ್ಷಿಗಳ ಸಾವನ್ನು ತಡೆಗಟ್ಟುವಂತೆ ತಾಲೂಕಿನ ಕೆಂಪಯ್ಯನಹಟ್ಟಿ ಗ್ರಾಮದ ವಿದ್ಯಾರ್ಥಿನಿಯೊಬ್ಬಳು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ವಿಡಿಯೋ ಮೂಲಕ ಗ್ರಾಮದ ವಾಸ್ತವ ಸ್ಥಿತಿಯನ್ನು ವಿವರಿಸಿದ್ದಾಳೆ.

ತಾಲೂಕಿನ ರಾಮಾಪುರ ಹೋಬಳಿಯ ಕೆಂಪಯ್ಯನಹಟ್ಟಿ ಗ್ರಾಮದ ವರ್ಣಿಕಾ ಸಿಎಂಗೆ ಪತ್ರ ಬರೆದಿರುವ ವಿದ್ಯಾರ್ಥಿನಿ. ಬರೆದಿರುವ ಪತ್ರದಲ್ಲಿನ ಅಂಶವನ್ನು ವಿದ್ಯಾರ್ಥಿನಿ ವಿಡಿಯೋ ಮೂಲಕ ವಿವರಿಸಿದ್ದು, ನಮ್ಮ ಊರಿನಲ್ಲಿ ನೀರಿನ ಸಮಸ್ಯೆ ಇದ್ದು ಜನರು ಕೂಲಿ ಕೆಲಸಕ್ಕೆ ಬೇರೆಡೆಗೆ ಹೋಗಿದ್ದಾರೆ. ಪ್ರಾಣಿ-ಪಕ್ಷಿಗಳು ಸಾಯುತ್ತಿವೆ. ಇದನ್ನು ತಿಳಿದು ಬೇಸರದಿಂದ ಪತ್ರ ಬರೆದಿದ್ದೇನೆ. ನೀವು ಸಹಾಯ ಮಾಡಿದರೆ ಜನರು ಹಾಗೂ ಪ್ರಾಣಿ-ಪಕ್ಷಿಗಳು ನೆಮ್ಮದಿಯಿಂದ ಬಾಳುತ್ತವೆ. ಆದ್ದರಿಂದ ವಿಡಿಯೋ ವೀಕ್ಷಿಸಿ ಸಹಾಯ ಮಾಡಿದರೆ ನಮಗೆ ನೀವು ದೇವರಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾಳೆ.

ಸಿದ್ದರಾಮಯ್ಯ ಸರ್ ನೀವು ದೇವರಂತೆ ಕಾಣಿಸುತ್ತೀರಿ. ಹಾಗಾಗಿ ಕಬಿನಿ ಜಲಾಶಯದಿಂದ ಹಳ್ಳ, ಡ್ಯಾಂ ಹಾಗೂ ಕಾಲುವೆಗಳಿಗೆ ನೀರು ಹರಿಸಬೇಕು. ಇದರಿಂದ ಸಂತೋಷವಾಗಿ ಬಾಳುತ್ತೇವೆ. ನಮ್ಮ ಜೀವನವನ್ನು ಕಾಪಾಡಬೇಕು. ಸಿದ್ದರಾಮಯ್ಯ ಸರ್ ಪ್ಲೀಸ್ ನಮಗೆ ಈ ಕೆಲಸ ಮಾಡಿಕೊಡಿ ಎಂದು ಗ್ರಾಮದ ಹೊರವಲಯದಲ್ಲಿ ನೀರಿಲ್ಲದೆ ಬರಿದಾಗಿರುವ ದೃಶ್ಯವನ್ನು ತನ್ನ ನಾಲ್ವರು ಸಹಪಾಠಿಗಳ ಜತೆ ತೋರಿಸುವುದರ ಮೂಲಕ ವಾಸ್ತವ ಪರಿಸ್ಥಿತಿಯನ್ನು ಕೈ ಮುಗಿಯುವುದರ ಮೂಲಕ ವಿವರಿಸಿರುವುದು ಮನಕಲಕುವಂತಿದೆ.

ವಿಡಿಯೋ ವೀಕ್ಷಿಸಿದವರ ಮನ ಸ್ಪಂದಿಸುವಂತಿದೆ. ವಿದ್ಯಾರ್ಥಿನಿ ಸಿಎಂಗೆ ಪತ್ರ ಬರೆದಿರುವ ಬಗ್ಗೆ ತಾಲೂಕಿನ ಜನರಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಬಾಲಕಿ ಬರೆದಿರುವ ಪತ್ರಕ್ಕೆ ಸ್ಪಂದಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net