ಸಮರ್ಪಕ ನೀರು ಪೂರೈಕೆಗೆ ಪಟ್ಟು : ಬೆಳಗುಂಬ ಗ್ರಾಮಸ್ಥರಿಂದ ಖಾಲಿ ಬಿಂದಿಗೆ ಪ್ರದರ್ಶನ

16 Magadi belgumba protest 2
Published on

ಮಾಗಡಿ : ತಾಲೂಕಿನ ಬೆಳಗುಂಬ ಗ್ರಾಮದ ದಲಿತ ಕಾಲನಿಗೆ ಕುಡಿಯುವ ನೀರು ಒದಗಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಶುಕ್ರವಾರ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ, ಖಾಲಿ ಬಿಂದಿಗೆ ಹಿಡಿದು ಪ್ರತಿಭಟಿಸಿದರು.

ಈ ವೇಳೆ ಮಾತನಾಡಿದ ನರಸಿಂಹಮೂರ್ತಿ, ದಲಿತ ಕಾಲನಿ ಹೊರತುಪಡಿಸಿ ಗ್ರಾಮದ ಎಲ್ಲ ಕಡೆ ಸಮರ್ಪಕ ನೀರು ಪೂರೈಕೆಯಾಗುತ್ತಿದೆ. ಕಾಲನಿಯ 70 ಮನೆಗಳಿಗೆ ಕಳೆದ 20 ದಿನಗಳಿಂದ ನೀರು ಸರಬರಾಜಾಗುತ್ತಿಲ್ಲ. ಇಷ್ಟು ಮನೆಗಳಿಗೆ ಕಳೆದ ಸೋಮವಾರ ಒಂದು ಟ್ಯಾಂಕರ್ ನೀರು ಸರಬರಾಜು ಮಾಡಿದ್ದಾರೆ. ನೀರಿಲ್ಲದೆ ಯುಗಾದಿ ಹಬ್ಬದಂದು ಕಾಲನಿ ಜನರು ಸ್ನಾನ ಕೂಡ ಮಾಡಿಲ್ಲ. ದಲಿತರೆಂದರೆ ಅಧಿಕಾರಿಗಳಿಗೆ ಇಷ್ಟೊಂದು ನಿರ್ಲಕ್ಷ್ಯವೇಕೆ ಎಂದು ಪ್ರಶ್ನಿಸಿದರು.

ಗ್ರಾಪಂ ಪಿಡಿಒ ಧನಂಜಯ ಮಾತನಾಡಿ, ಗ್ರಾಮದಲ್ಲಿರುವ ನಾಲ್ಕು ಕೊಳವೆಬಾವಿಗಳ ಪೈಕಿ ಒಂದು ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ಎತ್ತರದ ಪ್ರದೇಶಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ಹಣದ ಸಮಸ್ಯೆಯಿಂದಾಗಿ ಒಂದು ಕೊಳವೆ ಬಾವಿ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿ ಎತ್ತರ ಪ್ರದೇಶಕ್ಕೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ.

ಹಣದ ಸಮಸ್ಯೆಯಿಂದಾಗಿ ಕಳೆದ 9 ತಿಂಗಳಿಂದ ನೌಕರರಿಗೆ ಸಂಬಳ ನೀಡಿಲ್ಲ, ಪಂಪು ಮೋಟಾರು ಅಳವಡಿಸಲು ಸಾಧ್ಯವಾಗಿಲ್ಲ. ಸಾಲ ತಂದು ತುರ್ತಾಗಿ ಮೋಟಾರು ಮತ್ತು ಪಂಪು ಅಳವಡಿಸಿ, ಕಾಲನಿಗೆ ಪ್ರತ್ಯೇಕ ಪೈಪ್‌ಲೈನ್ ಅಳವಡಿಸಿ ನೀರು ಪೂರೈಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ಇದೇ ಮಾರ್ಗದಲ್ಲಿ ತೆರಳುತ್ತಿದ್ದ ಶಾಸಕ ಎ. ಮಂಜುನಾಥ್ ಅವರು ಪಂಚಾಯಿತಿ ಎದುರು ಪ್ರತಿಭಟನೆ ನಡೆಯುತ್ತಿರುವುದನ್ನು ನೋಡಿ, ಸ್ಥಳಕ್ಕೆ ತೆರಳಿ ಪಿಡಿಒ ಧನಂಜಯ ಅವರಿಂದ ಮಾಹಿತಿ ಕಲೆಹಾಕಿದರು. ತುರ್ತಾಗಿ 2 ಕೊಳವೆ ಬಾವಿ ಕೊರೆಸುವಂತೆ ಸೂಚಿಸಿದರು.

ಗ್ರಾಮದ ವಿಶ್ವನಾಥ್, ರಾಮಕೃಷ್ಣ, ವೆಂಕಟಮ್ಮ, ಕಲ್ಪನಾ, ಮಂಜಮ್ಮ, ಮಂಜುಳ, ಭಾಗ್ಯಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net