

ಕೋಲಾರ: ಎತ್ತಿನಹೊಳೆ ಯೋಜನೆಯಿಂದ ಕೋಲಾರ-ಚಿಕ್ಕಬಳ್ಳಾಪುರ ಭಾಗಕ್ಕೆ ನೀರು ಹರಿಯುವುದು ಖಚಿತ, ಇದರಲ್ಲಿ ಯಾವುದೇ ರೀತಿ ಅನುಮಾನ ಬೇಡ ಎಂದು ಸಚಿವ ಕೆ.ಎಚ್.ಮುನಿಯಪ್ಪ ಸ್ಪಷ್ಟಪಡಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯೋಜನೆಯ ಮೊದಲ ಹಂತದಲ್ಲಿ ಕುಡಿಯುಲು ಹಾಗೂ 2ನೇ ಹಂತದಲ್ಲಿ ಕೆರೆಗಳಿಗೆ 24 ಟಿಎಂಸಿ ನೀರು ಹರಿಸಲಾವುದು ಎಂದರು.
ನೀರು ಪ್ರಾರಂಭವಾಗುವ ಹೇಮಾವತಿಯಿಂದ ಅಂದರೆ ಚಿಕ್ಕಮಗಳೂರು ಜಿಲ್ಲೆಯಿಂದ ಹಾಸನ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರದ ನಂಗಲಿಯವರೆಗೂ ಕಡೆಯವರೆಗೂ ಬಂದೇ ಬರುತ್ತದೆ. ಯಾವ ಜಿಲ್ಲೆಗೆ ಎಷ್ಟು ನೀಡಬೇಕು ಅಷ್ಟು ಕೊಟ್ಟೇ ಕೊಡುತ್ತಾರೆ. ಹೀಗಾಗಿ ನಮ್ಮ ಪಾಲು ನಮಗೆ ಬಂದೇ ಬರುತ್ತದೆ ಎಂದರು.
ಎರಡನೇ ಹಂತದಲ್ಲಿ ಕೆರೆಗಳಿಗೆ ನೀರು ಹರಿಸಲು ಕ್ರಮಕೈಗೊಳ್ಳಲಾಗುವುದು. ಕೊರಟಗೆರೆವರೆಗೆ ಕಾಲುವೆಯಲ್ಲಿ ನೀರು ಬರಲಿದ್ದು, ಅಲ್ಲಿಂದ ದೊಡ್ಡ ಟ್ಯಾಂಕ್ ಸೇರಿ ಬಳಿಕ ಪೈಪ್ಲೈನ್ ಮೂಲಕ ಇತರೆ ಭಾಗಗಳಿಗೆ ಹರಿಯುತ್ತದೆ. ಯೋಜನೆಯ ನೀರು ಕದ್ದರೆ ದಂಡದ ಜತೆಗೆ ಕ್ರೂರ ಶಿಕ್ಷೆ ವಿಧಿಸಲಾಗುವುದು. ನೀರು ಸೋರಿಕೆ ತಡೆಯಲು ಕಾನೂನನ್ನು ಕಠಿಣಗೊಳಿಸಲಾಗಿದೆ ಎಂದು ತಿಳಿಸಿದರು.
ಸಿಎಂ ಬದಲಾವಣೆಯಿಲ್ಲಂದರೆ ರೇಸ್ ಎಲ್ಲಿದೆ..?
ಇನ್ನು ರಾಜ್ಯದಲ್ಲಿ ಸಿಎಂ ಬದಲಾವಣೆ, ನೀವು ರೇಸ್ನಲ್ಲಿ ಇದ್ದೀರಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಿಎಂ ಬದಲಾವಣೆಯೇ ಇಲ್ಲ. ಹೀಗಿರುವಾಗ ರೇಸ್ ಎಲ್ಲಿದೆ ? ಅಕಸ್ಮಾತ್ ಬದಲಾವಣೆ ಎನ್ನುವುದೂ ಇಲ್ಲ. ಹೈಕಮಾಂಡ್ನಲ್ಲಿಯೂ ಈ ಬಗ್ಗೆ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದರು.
30 ವರ್ಷದಲ್ಲಿ ಯಾವುದೇ ಗಲಾಟೆಯಿರಲಿಲ್ಲ
ಇತ್ತೀಚೆಗೆ ಹಬ್ಬಗಳ ಸಂದರ್ಭಗಳಲ್ಲಿ ಆಗುತ್ತಿರುವ ಅವಘಡಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಸಮಾಜದಲ್ಲಿ ಚುನಾಯಿತ ಪ್ರತಿನಿಧಿಗಳು ಶಾಂತಿ, ಸಹಬಾಳ್ವೆಯಿಂದ ವರ್ತಿಸಿದರೆ ಯಾವುದೇ ಗಲಾಟೆ ಆಗುವುದಿಲ್ಲ. ನಾನು ಕೋಲಾರ ಸಂಸದನಾಗಿದ್ದ 30 ವರ್ಷಗಳಲ್ಲಿ ಯಾವುದೇ ಗಲಾಟೆಯಿರಲಿಲ್ಲ. ಎಂದಾದರೂ ನೋಡಿದ್ದೀರಾ ಎಂದು ಪ್ರಶ್ನಿಸಿದರು.
ಬಳಕೆ ಮಾಡಿರುವ ಭಾಷೆ ಸಂಂಜಸವಲ್ಲ
ಶಾಸಕ ಮುನಿರತ್ನ ಪ್ರಕರಣ ವಿಚಾರಣೆ ನಡೆಯುತ್ತಿದ್ದು, ಅದರ ಬಗ್ಗೆ ಮಾತನಾಡುವುದಿಲ್ಲ. ಆಡಿಯೋದಲ್ಲಿ ಬಳಸಿರುವ ಭಾಷೆ ಸಮಂಜಸವಲ್ಲ. ಅಂತಿಮವಾಗಿ ಕಾನೂನು ತೀಮಾರ್ನ ಮಾಡಲಿದೆ ಎಂದು ಹೇಳಿದರು.
ಈ ಭಾಗದಿಂದ ಸತತವಾಗಿ 8 ಬಾರಿ ಮುಸ್ಲಿಂ ಸಮುದಾಯವು ನನಗೆ ಮತ ನೀಡಿದ್ದು, ಅವರೊಂದಿಗೆ ಸದಾ ಇರುತ್ತೇವೆ ಉರುಸ್ಗೆ ನಾವು ಹೋಗುತ್ತೇವೆ, ಜಾತ್ರೆಗೆ ಅವರು ಬರುತ್ತಾರೆ. ಅಲ್ಲಾಹು ಒಳ್ಳೆಯ ಶಕ್ತಿ ನೀಡಲಿ ಮಳೆ, ಬೆಳೆ ಆಗಲಿ ಎಂದು ಪ್ರಾರ್ಥಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ನಗರ ಬ್ಲಾಕ್ ಅಧ್ಯಕ್ಷ ಪ್ರಸಾದ್ ಬಾಬು, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಉದಯ ಶಂಕರ್, ಮುಖಂಡರಾದ ಜಮೀರ್ ಅಹಮದ್, ಕೆ.ಜಯದೇವ್, ಮುಸ್ತಫಾ, ಮಧುಸೂದನ್ ಹಾಜರಿದ್ದರು.