

ಕಾಲಕ್ಕನುಗುಣವಾಗಿ ನೀರಿನ ಸೇವನೆ ಮಾಡುವ ವಿಧಾನವನ್ನು ತಿಳಿಹೇಳಿದ ಹೆಗ್ಗಳಿಕೆಯೂ ಆಯುರ್ವೆದಕ್ಕಿದೆ. ಚಳಿಗಾಲದ ಪ್ರಾರಂಭದ ಹೇಮಂತ ಋತುವಿನಲ್ಲಿ ಶುಂಠಿಯ ಜೊತೆ ಬಿಸಿನೀರು ಕುಡಿಯುತ್ತಿದ್ದರೆ ಬಾಯಾರಿಕೆ ಅತಿಯಾಗಿ ಆಗುವುದಿಲ್ಲ. ಶಿಶಿರದ ಚಳಿಗಾಲದಲ್ಲೂ ಬಿಸಿನೀರಿನ ಸೇವನೆ ಉತ್ತಮ. ಸ್ವಲ್ಪ ಹಿಪ್ಪಲಿಯನ್ನು ಸೇರಿಸಿ ಅಂತರಿಕ್ಷ ಜಲ ಸೇವಿಸುವುದು ಹಿತಕಾರಿ. ಸಂಗ್ರಹಿಸಿಟ್ಟ ಅಂತರಿಕ್ಷ ಜಲವನ್ನು ವಸಂತಕಾಲದಲ್ಲಿ ಬಿಸಿಮಾಡಿ ಸೇವಿಸುವುದು ಅತ್ಯುತ್ತಮ. ತಣ್ಣೀರಿನೊಂದಿಗೆ ಜೇನುತುಪ್ಪ ಮಿಶ್ರಮಾಡಿಯೂ ಸೇವಿಸಬಹುದು. ಬೇಸಿಗೆಯಲ್ಲಿ ತಣ್ಣೀರಿನೊಂದಿಗೆ ಬೆಲ್ಲ ಅಥವಾ ಅಲ್ಪ ಪಚ್ಚೆಕರ್ಪರ ಸೇವಿಸಿದರೆ ಬಾಯಾರಿಕೆ ಅತಿಬೇಗ ನೀಗುತ್ತದೆ. ಮಳೆಗಾಲದಲ್ಲಿ ಶುದ್ಧ ಅಂತರಿಕ್ಷ ಜಲ, ಆಳವಾದ ಬಾವಿಯ ತಣ್ಣಗಾದ ನೀರಿಗೆ ಜೇನುತುಪ್ಪ ಸೇರಿಸಿ ಮಿತವಾಗಿ ಕುಡಿಯುತ್ತಿದ್ದರೆ ಬಾಯಾರಿಕೆ ಶಮನಕ್ಕೆ ಅನುಕೂಲಕಾರಿ. ಶರತ್ಕಾಲದಲ್ಲಿ ಸೂರ್ಯತಾಪದಿಂದ ಹಗಲಿನಲ್ಲಿ ಬಿಸಿಯಾದ ಕೆರೆಯ ಶುದ್ಧ ನೀರಿನ ಸೇವನೆ ಬಾಯಾರಿಕೆ ತಣಿಸಲು ಅತ್ಯುತ್ತಮ. ಅತಿಬಾಯಾರಿಕೆಯ ಚಿಕಿತ್ಸೆಗಾಗಿ ಮಳೆಗಾಲದಲ್ಲಿ ಸಂಗ್ರಹಿಸಲಾಗುವ ಅಂತರಿಕ್ಷ ಜಲಕ್ಕೆ ಮೊದಲ ಮಣೆ ಹಾಕಲಾಗಿದೆ. ಅದು ಸುಲಭವಾಗಿ ಜೀರ್ಣಗೊಳ್ಳುವ ಗುಣ ಹೊಂದಿದ್ದು ಸುಗಂಧಿತವೂ, ಶೀತಲವೂ, ರುಚಿಕಾರಿಯೂ ಆಗಿದೆ. ದೇಹದ ಸೂಕ್ಷ್ಮ ನಾಡಿಗಳಲ್ಲಿ ತಡೆಯನ್ನು ಉಂಟುಮಾಡದ ಗುಣವನ್ನು ಹೊಂದಿರುವುದರಿಂದ ಚಿಕಿತ್ಸೆಗೆ ಶ್ರೇಷ್ಠ.
ಬೇಗನೆ ಜೀರ್ಣಗೊಳ್ಳುವ ಮೃದುವಾದ ಶೀತಲ ದ್ರವಾಹಾರ ಹಿತಕಾರಿ. ದೇಸೀಗೋವಿನ ಹಾಲು, ತುಪ್ಪಗಳಿಗೂ ಅತಿಬಾಯಾರಿಕೆಯನ್ನು ಶಮನಗೊಳಿಸುವ ಗುಣವಿದೆ. ಬೆಲ್ಲವನ್ನು ಮೊಸರಿನೊಂದಿಗೆ ಮಿಶ್ರಮಾಡಿ ಸೇವಿಸುವುದೂ ಸಹಕಾರಿ. ಚಿಕಿತ್ಸೆಯಲ್ಲಿ ಐದು ವಿಧವಾದ ಪಂಚಮೂಲಗಳ ಇಪ್ಪತ್ತೈದು ಸಸ್ಯಗಳ ಬಳಕೆಗಿಲ್ಲಿ ಪ್ರಾಶಸ್ತ್ಯ ನೀಡಲಾಗುತ್ತದೆ. ನೀರನ್ನು ಅರ್ಧಾಂಶ ಆಗುವ ತನಕ ಕುದಿಸಿ ಆರಿಸಿ ಬಳಸುವುದು ಅತ್ಯುಪಯುಕ್ತ. ನೀರಿನೊಂದಿಗೆ ಒಣದ್ರಾಕ್ಷಿ, ಶ್ರೀಗಂಧ, ಖರ್ಜೂರ, ಲಾವಂಚ ಹಾಗೂ ಜೇನುತುಪ್ಪ ಸೇರಿಸಿ ಉಪಯೋಗಿಸಿದರೆ ಅತಿಬಾಯಾರಿಕೆ ಶಮನವಾಗುತ್ತದೆ. ನೀರಿಗೆ ಬೆಟ್ಟದನೆಲ್ಲಿಕಾಯಿ ಹಾಗೂ ಜೇನುತುಪ್ಪವನ್ನು ರಾತ್ರಿಹೊತ್ತಿನಲ್ಲಿ ಬೆರೆಸಿಟ್ಟು ಮರುದಿನ ಬೆಳಗ್ಗೆ ಕುಡಿದರೂ ಹಿತವಾಗುತ್ತದೆ. ಕೆಂಪಕ್ಕಿಯ ಅನ್ನದ ಬಳಕೆ ಹೆಚ್ಚು ಪ್ರಶಸ್ತ. ಬಿಸಿನೀರಿನೊಂದಿಗೆ ಉಪ್ಪನ್ನು ಮಿಶ್ರಣಗೊಳಿಸಿ ವಾಂತಿ ಮಾಡಿಕೊಳ್ಳುವುದೂ ಶಮನಕ್ಕೆ ಅನುಕೂಲ. ದಾಳಿಂಬೆ, ಹುಳಿ ಹಣ್ಣುಗಳು ಸಕ್ಕರೆ ನೀರಿನೊಂದಿಗೆ ಅರಿಶಿಣವನ್ನು ಬೆರೆಸಿ ಸೇವಿಸುವುದೂ ಉಪಕಾರಿ. ಮೊಸರಿನೊಂದಿಗೆ ಜೇನುತುಪ್ಪ ಹಾಕಿ ಸೇವಿಸಿದರೂ ಕಫಜ ಅತಿಬಾಯಾರಿಕೆ ಶೀಘ್ರದಲ್ಲಿ ಶಮನವಾಗುತ್ತದೆ. ಕಾಳುಮೆಣಸು, ಹಿಪ್ಪಲಿ, ಒಣಶುಂಠಿ, ಬಜೆಗಳನ್ನು ಒಟ್ಟಾಗಿ ಅಥವಾ ಪ್ರತ್ಯೇಕವಾಗಿ ನೀರಿನೊಂದಿಗೆ ಅಲ್ಪಕಾಲ ಕುದಿಸಿ ಕುಡಿಯುವುದರಿಂದ ಆಹಾರ ಅಜೀರ್ಣವಾಗಿ ಉಂಟಾದ ಅತಿಬಾಯಾರಿಕೆ ಸಹಜಸ್ಥಿತಿಗೆ ಬರುತ್ತದೆ. ಶುಂಠಿಯನ್ನು ನೀರಿನಲ್ಲಿ ಹಾಕಿ ಕುದಿಸಿ ತಣ್ಣಗಾದ ಮೇಲೆ ಜೇನುತುಪ್ಪ ಬೆರೆಸಿ ಆಗಾಗ ಕುಡಿದರೆ ಅನುಕೂಲಕಾರಿ. ಗೋವಿನ ಹಾಲಿನ ಯಥೇಚ್ಛ ಸೇವನೆಯು ಶರೀರದ ಅತಿದುರ್ಬಲತೆಯಿಂದ ಬರುವ ಬಾಯಾರಿಕೆಯನ್ನು ಹೋಗಲಾಡಿಸುತ್ತದೆ.
ಭತ್ತದ ಅರಳನ್ನು ಹುಡಿಮಾಡಿ ಅದರೊಂದಿಗೆ ಸಕ್ಕರೆ, ಜೇನುತುಪ್ಪ ಮಿಶ್ರಗೊಳಿಸಿ ನೀರಿನೊಂದಿಗೆ ಕುಡಿಯುವುದೂ ವಿವಿಧ ವ್ಯಾಧಿಗಳಿಂದಾಗಿ ಉಂಟಾಗುವ ಅತಿಬಾಯಾರಿಕೆಯಲ್ಲಿ ಪರಿಣಾಮಕಾರಿಯಾಗಿದೆ. ಅನ್ನದ ಗಂಜಿಗೆ ಜೇನುತುಪ್ಪ, ಸಾವಯವ ಸಕ್ಕರೆ ಸೇರಿಸಿ ಸೇವಿಸಿದರೂ ಹಿತಕರ. ಬಾರ್ಲಿಯನ್ನು ಅರ್ಧ ಬೇಯಿಸಿ ಅದರ ತಿಳಿಗೆ ಸಕ್ಕರೆ ಹಾಕಿ ಕುಡಿಯುವುದೂ ಲಾಭಕಾರಿ. ಜೇನುತುಪ್ಪ, ಕಬ್ಬಿನಹಾಲು, ಗೋವಿನಹಾಲು, ಬೆಲ್ಲನೀರು, ಕಲ್ಲುಸಕ್ಕರೆ, ಮಾದಲಹಣ್ಣು, ಮುರುಗಲಹಣ್ಣು, ಲಿಂಬೆಹಣ್ಣು, ಎಳನೀರುಗಳನ್ನು ಪ್ರತ್ಯೇಕವಾಗಿ ನೀರಿನೊಂದಿಗೆ ಬಾಯಿಯಲ್ಲಿ ನಾಲ್ಕೈದು ನಿಮಿಷ ತುಂಬಿಟ್ಟುಕೊಳ್ಳುವುದು ಪರಿಣಾ ಮಕಾರಿಯಾಗಿದೆ. ಖರ್ಜೂರಾದಿ ಮಂಥ, ಧಾನ್ಯಕಾದಿ ಮಂಥ, ಷಡಂಗ ಪಾನೀಯದಂತಹ ರುಚಿಯಾದ ಪಾನೀಯಗಳು ಅತಿಬಾಯಾರಿಕೆ ನೀಗಿಸುವಲ್ಲಿ ಫಲಪ್ರದವಾಗಿವೆ. ಆಯುರ್ವೆದಲ್ಲಿ ಅಮೃತಬಳ್ಳಿ, ಭದ್ರಮುಷ್ಟಿ, ಕಿರಾತಕಡ್ಡಿ, ಲಾವಂಚ, ಕಮಲ, ಶ್ರೀಗಂಧ, ಕೊತ್ತಂಬರಿ ಮೊದಲಾದ ಅನೇಕ ಔಷಧೀಯ ಸಸ್ಯಗಳನ್ನು ಬಳಸಿ ವಮನಕರ್ಮದಂತಹ ಚಿಕಿತ್ಸೆಗಳನ್ನೂ ವಿವರಿಸಲಾಗಿದೆ.
(ಪ್ರತಿಕ್ರಿಯಿಸಿ vvsudina@gmail.com)