

ಹಾಗಾಗಿಯೇ ನಮ್ಮ ದಿನಚರಿಯಲ್ಲಿ ನೀರಿನ ಸೇವನೆ ಕಡಿಮೆಯಾ ದಾಗ ನಮಗೆ ಸುಸ್ತು, ತಲೆನೋವು ಅಷ್ಟೇ ಏಕೆ ಬುದ್ಧಿಯಲ್ಲಿನ ವ್ಯತ್ಯಾಸ ಕೂಡ ಉಂಟಾಗುತ್ತದೆ. ನಮ್ಮ ದೇಹ ಒಂದು ಹದದ ತಾಪಮಾನದಲ್ಲಿ ಮಾತ್ರ ಆರೋಗ್ಯದಿಂದ ಇರಲು ಸಾಧ್ಯ. ಈ ತಾಪಮಾನವನ್ನು ನಿಯಂತ್ರಿಸುವ ಕೆಲಸ ಮುಖ್ಯವಾಗಿ ನೀರಿನದ್ದೇ ಆಗಿದೆ. ಏಕೆಂದರೆ ದೇಹ ನೀರನ್ನು ಬಳಸಿ ಬೆವರಿನ ಮೂಲಕ ತಾಪಮಾನವನ್ನು ನಿಯಂತ್ರಿಸುತ್ತದೆ. ವಿಟಮಿನ್ಗಳು, ಖನಿಜಗಳು ಇತ್ಯಾದಿ ಹಲವು ರೀತಿಯ ನಾವು ಸೇವಿಸುವ ಆಹಾರದಲ್ಲಿರುವ ಪೋಷಕಾಂಶಗಳು ನೀರಿನಲ್ಲಿ ಕರಗಿಯೇ ದೇಹದ ಎಲ್ಲ ಜೀವಕೋಶಗಳಿಗೆ ಹೋಗಿ ಅವುಗಳ ಬೆಳವಣಿಗೆ, ರಿಪೇರಿ ಮತ್ತು ಶಕ್ತಿ ತುಂಬುವ ಕೆಲಸ ಆಗಬೇಕು. ಜೊತೆಗೆ ದೇಹದಲ್ಲಿರುವ ವಿಷಾಂಶಗಳು, ತ್ಯಾಜ್ಯಗಳು, ಮಲಮೂತ್ರ, ಬೆವರುಗಳ ಮೂಲಕ ಹೊರಗೆ ಹೋಗಲು ನೀರು ಬೇಕೇ ಬೇಕು. ದೇಹದ ಎಷ್ಟೋ ಭಾಗಗಳಲ್ಲಿ ಲೋಳೆಯಂತಹ ವಸ್ತುಗಳು ಇದ್ದು ಘರ್ಷಣೆಯನ್ನು ತಪ್ಪಿಸುತ್ತಿರುತ್ತವೆ - ಒಳ್ಳೆಯ ಉದಾಹರಣೆ ಎಂದರೆ ಸಂಧಿಗಳಲ್ಲಿ ಇರುವ ಕೀಲೆಣ್ಣೆ. ಇದು ಚೆನ್ನಾಗಿರಲು ಕೂಡ ನೀರು ಬೇಕು. ನಮಗೆಲ್ಲ ಗೊತ್ತಿರುವಂತೆ ಸರಿಯಾಗಿ ನೀರನ್ನು ಸೇವಿಸುವುದರಿಂದ ನಮ್ಮ ಮೂತ್ರಾಂಗವ್ಯೂಹ ಚೆನ್ನಾಗಿ ಇರಲು ಸಾಧ್ಯವಾಗುತ್ತದೆ. ಕಿಡ್ನಿಯಲ್ಲಿ ಕಲ್ಲುಗಳಾಗುವುದು, ಪದೇ ಪದೇ ಉರಿ ಮೂತ್ರದ ಸಮಸ್ಯೆಗಳಾಗಲು ಸಾಧ್ಯವಿಲ್ಲ. ಒಂದು ವೇಳೆ ಮೂತ್ರಮಾರ್ಗದಲ್ಲಿ ಕೆಟ್ಟ ಬ್ಯಾಕ್ಟೀರಿಯಾ ಬೆಳೆಯಲು ಪ್ರಾರಂಭಿಸುತ್ತಿದ್ದರೂ ನೀರಿನ ಸೇವನೆಯಿಂದಾಗಿ ಅದು ಹೊರ ಹೋಗುತ್ತದೆ. ಬಹಳಷ್ಟು ಜನರಿಗೆ ಮಲಬದ್ಧತೆಗೆ ಮುಖ್ಯ ಕಾರಣ ನೀರಿನ ಸೇವನೆ ಕಡಿಮೆಯಾಗುವುದು. ಮಲವನ್ನು ಮೃದುವಾಗಿಸಲು ಕೂಡ ನೀರು ಅನುಕೂಲಕರ. ಮೈಗ್ರೇನ್ ಸಮಸ್ಯೆ ಇತ್ತೀಚೆಗೆ ತುಂಬಾ ಸಾಮಾನ್ಯವಾಗುತ್ತಿದೆ. ನೂರರಲ್ಲಿ ಐವತ್ತು ಜನರಿಗೆ ಮೈಗ್ರೇನ್ ಬರಲು ಕಾರಣವಾಗುತ್ತಿ ರುವುದು ನೀರನ್ನು ಕಡಿಮೆ ಕುಡಿಯುವುದು.
ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಇತ್ತೀಚೆಗೆ ಹೇಳಿದ್ದೇ ನೆಂದರೆ ಸರಿಯಾದ ಪ್ರಮಾಣ ದಲ್ಲಿ ನೀರನ್ನು ಕುಡಿಯುವುದರಿಂದ ಹೃದಯವು ಸುಲಭವಾಗಿ ಇಡೀ ದೇಹಕ್ಕೆ ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗುತ್ತದೆ. ಇದರಿಂದಾಗಿ ಹೃದಯದ ಮೇಲೆ ಒತ್ತಡ ಕಡಿಮೆಯಾಗುತ್ತದೆ. ಹಾಗಾಗಿ ದೀರ್ಘಕಾಲದವರೆಗೆ ಹೃದಯ ಯೌವ್ವನದಿಂದ ಇರಲು ಸಾಧ್ಯವಾಗುತ್ತದೆ. ಉಷ್ಣಕ್ಕೆ ಸಂಬಂಧಿಸಿದ ತೊಂದರೆಗಳಿಗೆ ಕೂಡ ನೀರು ಅತ್ಯುತ್ತಮ ಔಷಧ. ಎಲ್ಲ ರೀತಿಯ ದ್ರವ ಪದಾರ್ಥಗಳನ್ನು ಸೇರಿಸಿ ಪ್ರತಿದಿನ 3 ರಿಂದ 4 ಲೀಟರ್ ನೀರಿನ ಅಂಶ ದೇಹಕ್ಕೆ ಹೋಗಬೇಕು. ಕೇವಲ ನೀರೊಂದನ್ನೇ ಲೆಕ್ಕ ಹಾಕುವುದಾದರೆ ಕನಿಷ್ಠ 2 ಲೀಟರ್ ಆದರೂ ನಾವು ನೀರು ಕುಡಿಯಬೇಕು. ಅದರಲ್ಲೂ ದೈಹಿಕ ಶ್ರಮ ಹೆಚ್ಚಿರುವವರು, ಹೆಚ್ಚು ಬೆವರುವವರು, ಉಷ್ಣ ಪ್ರದೇಶದಲ್ಲಿ ವಾಸಿಸುತ್ತಿರುವವರು ಹೆಚ್ಚು ನೀರಿನ ಸೇವನೆ ಮಾಡುವುದು ಅತ್ಯಂತ ಅವಶ್ಯಕ. ಪದೇ ಪದೇ ನೀರು ಕುಡಿಯುವ ರೂಢಿ ಮಾಡಿಕೊಳ್ಳುವುದು ಕಷ್ಟವಾದರೆ ದಿನಕ್ಕೆ ಎರಡು ಅಥವಾ ಮೂರು ಬಾರಿ ಯಾವುದಾದರೂ ಹಣ್ಣು ಅಥವಾ ತರಕಾರಿಯ ಜ್ಯೂಸ್ ಕುಡಿಯುವ ರೂಢಿ ಇಟ್ಟುಕೊಳ್ಳಬೇಕು.
ಊಟದ ಕೊನೆಯಲ್ಲಿ ಒಂದು ಲೋಟ ಮಜ್ಜಿಗೆಯನ್ನಾದರೂ ಸೇವಿಸಬೇಕು. ನೀರು ಕುಡಿಯುವಾಗಲೆಲ್ಲಾ ಬಿಸಿ ನೀರನ್ನೇ ಕುಡಿಯಬೇಕು ಅಥವಾ ತಣ್ಣೀರನ್ನೇ ಕುಡಿಯಬೇಕು ಎಂಬ ನಿಯಮ ಮಾಡಿಕೊಂಡಿರುವವರು ತುಂಬಾ ಜನರಿರು ತ್ತಾರೆ. ಆದರೆ ಅಂತಹ ಗಟ್ಟಿ ನಿಯಮದ ಅವಶ್ಯಕತೆಯಿಲ್ಲ. ನಾವು ದಣಿದಾಗ, ಅತಿ ಯಾದ ಬಾಯಾರಿಕೆ ಇರುವಾಗ ಡಿಹೈಡ್ರೇಶನ್ ಆಗಿರುವಾಗ ತಂಪು ನೀರು ಹೆಚ್ಚು ಅನುಕೂಲಕರ. ತಂಪು ನೀರನ್ನು ಕುಡಿಯುವುದರಿಂದ ಚಯಾಪಚಯ (Metabolism)ಪ್ರಕ್ರಿಯೆ ಕೂಡ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಏಕೆಂದರೆ ನಮ್ಮ ದೇಹಕ್ಕೆ ಆ ತಂಪು ನೀರನ್ನು ಬಿಸಿ ಮಾಡಲು ಸ್ವಲ್ಪ ಶಕ್ತಿಯ ಅವಶ್ಯಕತೆ ಇರುವ ಕಾರಣ ಸ್ವಲ್ಪ ಕ್ಯಾಲೋರಿಗಳು ಸುಡಲ್ಪಡುತ್ತವೆ. ಬಿಸಿ ನೀರು ಕೂಡ ಅವಶ್ಯಕತೆ ಇರುವಾಗ ಆರೋಗ್ಯಕರವೇ. ಅದರಲ್ಲು ವಿಶೇಷವಾಗಿ ಕಫ, ಅಜೀರ್ಣ, ಜ್ವರ, ಮೈ ಕೈ ನೋವು ಮುಂತಾದ ತೊಂದರೆಗಳಿರುವಾಗ ಬಿಸಿ ನೀರಿನ ಸೇವನೆ ಹೆಚ್ಚು ಅನುಕೂಲಕರ. ಒಟ್ಟಿನಲ್ಲಿ ನೀರು ಒಂದು ಅದ್ಭುತ ಔಷಧ.
(ಪ್ರತಿಕ್ರಿಯಿಸಿ; vvsudina@gmail.com)