

ಸುಳ್ಯ: ಅರಂಬೂರಿನ ಪಾಲಡ್ಕದ ಗ್ರಾಹಕರೊಬ್ಬರಲ್ಲಿದ್ದ ಅಡುಗೆ ಅನಿಲ ಸಿಲಿಂಡರ್‌ನಲ್ಲಿ ಗ್ಯಾಸ್‌ನ ಬದಲಾಗಿ ನೀರು ಕಂಡು ಬಂದ ವಿದ್ಯಮಾನ ನಡೆದಿದೆ.
ಪಾಲಡ್ಕದ ದಿನಕರ ನಾಯಕ್ ಎಂಬುವರು ಕೆಲದಿನಗಳ ಹಿಂದೆ ಗ್ಯಾಸ್ ಸಿಲಿಂಡರ್ ಪಡೆದಿದ್ದರು. ಅದರಲ್ಲಿ ಅಡುಗೆ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಸ್ಟೌ ಆರಿದೆ. ಪರಿಶೀಲಿಸಿದಾಗ ಪೈಪ್ ಮೂಲಕ ಗ್ಯಾಸ್ ಬರುತ್ತಿರಲಿಲ್ಲ. ಸಿಲಿಂಡರ್ ಅನ್ನು ಪರಿಶೀಲಿಸಿದಾಗ ಅದರೊಳಗೆ ನೀರು ಇರುವಂತೆ ಸದ್ದು ಬರುತ್ತಿದ್ದು, ಮಗುಚಿ ಹಿಡಿದಾಗ ರೆಗ್ಯುಲೇಟರ್ ಅಳವಡಿಸುವ ರಂಧ್ರದ ಬಳಿಯಿಂದ ಬಕೆಟ್‌ನೊಳಗೆ ನೀರು ಬೀಳತೊಡಗಿತು. ಈ ವಿಚಾರವನ್ನು ಗ್ಯಾಸ್ ವಿತರಕರ ಗಮನಕ್ಕೆ ತಂದಾಗ ಅವರು ಸಿಲಿಂಡರ್ ಬದಲಾಯಿಸಿ ಕೊಟ್ಟರೆಂದು ತಿಳಿದು ಬಂದಿದೆ.