

ಸೊರಬ: ರಾಜ್ಯದಲ್ಲಿ ರೈತರಿಗೆ ಕೃಷಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಂತರ್ಜಲ ಅಭಿವೃದ್ಧಿ ಹೆಚ್ಚಿಸುವ ಜತೆಗೆ ಬರಪೀಡಿತ ಪ್ರದೇಶಗಳಲ್ಲೂ ಕೃಷಿಗೆ ನೀರೊದಗಿಸಲು ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ಗುರುವಾರ ಪಟ್ಟಣದ ಬಂಗಾರಧಾಮಕ್ಕೆ ಭೇಟಿ ನೀಡಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಮತ್ತು ಶಕುಂತಲಾ ಬಂಗಾರಪ್ಪ ಅವರ ಸಮಾಧಿಗೆ ನಮನ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲು ಏತ ನೀರಾವರಿ ಯೋಜನೆಯಡಿ ಸೇತುವೆ, ಬ್ಯಾರೇಜ್ ಹಾಗೂ ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗುತ್ತಿದೆ ಎಂದರು.
ಅಂತರ್ಜಲ ಮಟ್ಟ ಹೆಚ್ಚಿಸಲು ಕೆರೆಗಳನ್ನು ತುಂಬಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. 1,080 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ನಗರ ಸೇರಿ ಸುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಿಸಲು 250 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಬೆಂಗಳೂರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಶಿವಮೊಗ್ಗ ಜಿಲ್ಲೆಯಲ್ಲಿ ಕೈಗೊಂಡಿರುವ ನೀರಾವರಿ ಯೋಜನೆಗೆ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಸಚಿವ ಮಧು ಬಂಗಾರಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಪ್ರಮುಖರಾದ ಕಲಗೋಡು ರತ್ನಾಕರ್, ಅಣ್ಣಪ್ಪ, ಸುಜಾತಾ ಜೋತಾಡಿ, ನಾಗರಾಜ್ ಗೌಡ, ಎಚ್.ಗಣಪತಿ, ಹಿರಿಯಣ್ಣ ಕಲ್ಲಂಬಿ, ನಾಗರಾಜ್ ಇತರರಿದ್ದರು.