

ಶಿವಮೊಗ್ಗ: ಹನಿ ನೀರಾವರಿಯಿಂದ ನೀರಿನ ಸದ್ಬಳಕೆ ಹಾಗೂ ಬೆಳೆಗಳ ಉತ್ಪಾದನೆಯಲ್ಲಿ ಹೆಚ್ಚಳ ಕಾಣಬಹುದು ಎಂದು ಕೃಷಿ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಬಸಮ್ಮ ಆಲದಕಟ್ಟಿ ಹೇಳಿದರು.
ಶಿಕಾರಿಪುರ ತಾಲೂಕಿನ ಹಳೇ ಮುಗಳಗೆರೆ ಗ್ರಾಮದಲ್ಲಿ ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಲ್ಲಿ ಹನಿ ನೀರಾವರಿ ವಿಷಯ ಕುರಿತ ಗುಂಪು ಚರ್ಚೆಯಲ್ಲಿ ಮಾತನಾಡಿದರು. ಹನಿ ನೀರಾವರಿ ಪದ್ಧತಿಯಲ್ಲಿ ಬೆಳೆಗಳಿಗೆ ಎಷ್ಟು ನೀರು ಅಗತ್ಯವೋ ಅಷ್ಟನ್ನು ಮಾತ್ರ ನೀಡಬಹುದು. ಇದರಿಂದ ಶೇ.50ರಿಂದ 60ರಷ್ಟು ನೀರಿನ ಉಳಿತಾಯ ಸಾಧ್ಯವಿದೆ. ಸಾಂಪ್ರದಾಯಿಕ ವಿಧಾನದಲ್ಲಿ ನೀರನ್ನು ಸಾಮಾನ್ಯವಾಗಿ ಮಣ್ಣಿನ ಕಾಲುವೆಗಳಲ್ಲಿ ಹಾಯಿಸುವುದರಿಂದ ಶೇ.30ರಿಂದ 40ರಷ್ಟು ಹೆಚ್ಚುವರಿ ನೀರು ಪೋಲಾಗುತ್ತದೆ. ಜತೆಗೆ ಜಮೀನಿನ ಗುಣಮಟ್ಟವೂ ಕಡಿಮೆಯಾಗುತ್ತದೆ ಎಂದರು. ನೀರಿನಲ್ಲಿ ಕರಗುವ ಹಾಗೂ ಸಾವಯವ ಗೊಬ್ಬರಗಳನ್ನೂ ಈ ಪದ್ಧತಿ ಮೂಲಕ ಸಕಾಲದಲ್ಲಿ ನೀಡಬಹುದು. ಬೆಳೆ ಮಧ್ಯೆ ಇರುವ ಸ್ಥಳ ನೆನೆಯುವುದಿಲ್ಲ. ಆದ್ದರಿಂದ ಮಳೆಗಾಲ ಹೊರತುಪಡಿಸಿ ಬೇರೆ ದಿನಗಳಲ್ಲಿ ಕಳೆ ಬೆಳೆಯುವ ಅವಕಾಶವೂ ಕಡಿಮೆ. ಲವಣಾಂಶ ಹೆಚ್ಚಿರುವ ನೀರನ್ನು ಸಾಂಪ್ರದಾಯಿಕ ನೀರಾವರಿ ವಿಧಾನದ ಮೂಲಕ ಬಳಸುವುದರಿಂದ ಮಣ್ಣಿನ ಗುಣಮಟ್ಟ ಹಾಳಾಗುತ್ತದೆ. ಆದರೆ ಹನಿ ನೀರಾವರಿಯಿಂದ ಮಣ್ಣಿನ ಸಂರಕ್ಷಣೆಯಾಗುತ್ತದೆ. ಬಹಳಷ್ಟು ರೈತರು ಹನಿ ನೀರಾವರಿ ಬಳಸುತ್ತಿದ್ದಾರೆ. ಆದರೆ ಅದರಲ್ಲಿ ಫಿಲ್ಟರ್ ಮತ್ತು ಒತ್ತಡ ಮಾಪಕಗಳನ್ನು ಅಳವಡಿಸುತ್ತಿಲ್ಲ. ಫಿಲ್ಟರ್ ಮತ್ತು ಒತ್ತಡ ಮಾಪಕಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸೂಕ್ಷ್ಮ ನೀರಾವರಿ ಪದ್ಧತಿಯಿಂದ ನೀರನ್ನು ಕೊಳವೆ ಮೂಲಕ ನೇರವಾಗಿ ಗಿಡಗಳ ಬುಡಕ್ಕೆ ಸಾಗಿಸಿ ಬೇರಿನ ವಲಯವನ್ನು ಭಾಗಶಃ ನೆನೆಯುವಂತೆ ಮಾಡಿ ಗಿಡದ ಬೆಳವಣಿಗೆಗೆ ಅಗತ್ಯ ಇರುವಷ್ಟನ್ನೇ ಕೊಡಬಹುದು. ಅಲ್ಲದೆ ಅಧಿಕ ಇಳಿಜಾರು ಹಾಗೂ ಏರುಪೇರು ಜಮೀನುಗಳಲ್ಲಿಯೂ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು. - ಡಾ. ಬಸಮ್ಮ ಆಲದಕಟ್ಟಿ, ಕೃಷಿ ವಿವಿ ಸಹಾಯಕ ಪ್ರಾಧ್ಯಾಪಕಿ