

ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಗುರುವಾರ ನಡೆದ ಬಹಿರಂಗ ಚರ್ಚೆಯಲ್ಲಿ ಪಾಕಿಸ್ತಾನ ವಿರುದ್ಧ ವಾಗ್ದಾಳಿ ನಡೆಸಿದ ಭಾರತ, ಪಾಕ್ ಪ್ರತಿನಿಧಿಗಳು ಸ್ವಾರ್ಥಕ್ಕಾಗಿ ಕಳ್ಳಾಟವಾಡುತ್ತಿದ್ದು, ಸುಳ್ಳುಗಳನ್ನು ಪ್ರತಿಪಾದಿಸುತ್ತಾರೆ ಎಂದು ಆರೋಪಿಸಿದೆ.
ಇದಕ್ಕೂ ಮುನ್ನ ಪಾಕಿಸ್ತಾನ ವಿಶ್ವಸಂಸ್ಥೆಯ ರಾಯಭಾರಿ ಮುನೀರ್ ಅಕ್ರಮ್ ಅವರು ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ವಿಚಾರವನ್ನು ಎಳೆದುತಂದು ಮುಸ್ಲೀಮರನ್ನು ದಮನ ಮಾಡುವ ಭಾರತದ ಮೊದಲ ಹೆಜ್ಜೆ ಇದಾಗಿದೆ ಎಂದು ಜರಿದರು. ಮುಂದುವರಿದು ಭಾರತ, ಪಾಕ್ ವಿರುದ್ಧ ಮತ್ತೊಂದು ಮಿಲಿಟರಿ ಸಾಹಸಕ್ಕೆ ಕೈಹಾಕಬಹುದು. ಒಂದು ವೇಳೆ ದಾಳಿ ನಡೆದರೆ ಪಾಕಿಸ್ತಾನವು ಕೂಡ ತಕ್ಕ ಉತ್ತರ ನೀಡಲಿದೆ. ಆದರೆ, ನಮಗೆ ಯುದ್ಧ ಬೇಕಾಗಿಲ್ಲ ಎಂದರು.
ಪಾಕ್ ಮಂಡಿಸಿದ ವಾದವನ್ನು ಭಾರತ ತಿರಸ್ಕರಿಸಿ, ವಿಶ್ವಸಂಸ್ಥೆಯ ಭಾರತದ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಮಾತನಾಡಿ, ಪಾಕ್ ತನ್ನ ಒಳಬೇನೆಯನ್ನು ವಾಸಿಮಾಡಿಕೊಳ್ಳಬೇಕಾಗಿದೆ. ನಿಮ್ಮ ಸೋಂಕನ್ನು ಸ್ವೀಕರಿಸಲು ಇಲ್ಲಿ ಯಾರು ಇಲ್ಲ ಎಂದು ತಿರುಗೇಟು ನೀಡಿದರು.
ಇದೇ ವೇಳೆ ಭದ್ರತಾ ಮಂಡಳಿಯನ್ನು ಟೀಕಿಸಿದ ಅಕ್ಬರುದ್ದೀನ್, ಭದ್ರತಾ ಮಂಡಳಿ ಗುರುತು ಮತ್ತು ನ್ಯಾಯಸಮ್ಮತೆಯ ಜತೆಗೆ ಪ್ರಸ್ತುತತೆ ಮತ್ತು ಕಾರ್ಯಕ್ಷಮತೆಯ ಬಿಕ್ಕಟ್ಟು ಎದುರಿಸುತ್ತಿರುವುದನ್ನು ಒಪ್ಪಿಕೊಳ್ಳಬೇಕಾಗಿದೆ. ಜಾಗತಿಕ ಮಟ್ಟದ ಉಗ್ರಜಾಲ ತಮ್ಮ ಶಸ್ತ್ರಾಸ್ತ್ರೀಕರಣದಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿವೆ. ವಿಧ್ವಂಸಕತೆ ಆಶ್ರಯಿಕೊಂಡಿರುವವರನ್ನು ಎದುರಿಸದೇ ಇರುವುದು ಮಂಡಳಿಯ ನ್ಯೂನತೆಗಳನ್ನು ಎತ್ತಿ ತೋರಿಸುತ್ತಿದೆ ಎಂದು ಪಾಕ್ ಹೆಸರು ಹೇಳದೆ ಮಂಡಳಿಯನ್ನು ಟೀಕಿಸಿದರು. (ಏಜೆನ್ಸೀಸ್)