ತ್ಯಾಜ್ಯ ಘಟಕ ನಿರ್ವಹಣೆ ಸಮಾಧಾನಕರ, ತೃಪ್ತಿಕರವಲ್ಲ

Anupinakatte Waste Unit
ಅನುಪಿನಕಟ್ಟೆಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಉಪ ಲೋಕಾಯುಕ್ತ ನ್ಯಾ. ಕೆ.ಎನ್.ಫಣೀಂದ್ರ ಪರಿಶೀಲಿಸಿದರು. ಕವಿತಾ ಯೋಗಪ್ಪನವರ್ ಇದ್ದರು.
Published on

ಶಿವಮೊಗ್ಗ: ಅನುಪಿನಕಟ್ಟೆಯಲ್ಲಿ ಪಾಲಿಕೆಯಿಂದ ನಿರ್ವಹಿಸುತ್ತಿರುವ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ವಹಣೆ ಸಮಾಧಾನಕರ. ಆದರೆ ತೃಪ್ತಿಕರವಲ್ಲ. ಇಲ್ಲಿನ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಉಪ ಲೋಕಾಯುಕ್ತ ನ್ಯಾ. ಕೆ.ಎನ್.ಫಣೀಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ಘನತ್ಯಾಜ್ಯ ನಿರ್ವಹಣೆ ಘಟಕವು ಕಿರಿದಾಗಿದೆ. ತ್ಯಾಜ್ಯದ ಉತ್ಪಾದನೆ ದಿನೇದಿನೆ ಹೆಚ್ಚಾಗುತ್ತಿದೆ. ಪ್ರತಿದಿನ 200ರಿಂದ 300ಟನ್ ತ್ಯಾಜ್ಯ ಸಂಗ್ರಹವಾಗುತ್ತಿದೆ. ನಗರ ಪ್ರದೇಶದಿಂದ ದೂರದಲ್ಲಿ ಮತ್ತೊಂದು ಅತ್ಯಾಧುನಿಕ ಘಟಕ ನಿರ್ಮಿಸಬೇಕು ಎಂದರು. ಈಗಿರುವ ಘಟಕದಿಂದ ನಾಯಿಗಳು, ಪ್ರಾಣಿ ಪಕ್ಷಿಗಳ ಉಪಟಳ, ದುರ್ನಾತ, ನೊಣಗಳಿಂದ ಸಾಂಕ್ರಾಮಿಕ ರೋಗಗಳ ಹರಡುವ ಬಗ್ಗೆ ಜನರಿಂದ ದೂರುಗಳು ಬಂದಿವೆ. ಇಲ್ಲಿನ ಮಲಿನ ನೀರನ್ನು ಸಂಸ್ಕರಿಸಿ ಬಿಡುವಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಕಸದ ಡಂಪಿಂಗ್ ಯಾರ್ಡ್‌ನಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ನ್ಯಾ.ಫಣೀಂದ್ರ ಅವರು ಮಾಹಿತಿ ಪಡೆದರು. ಘಟಕದಿಂದಾಗಿ ನಾಯಿಗಳ ಸಂಖ್ಯೆ ಮಿತಿ ಮೀರುತ್ತಿದೆ. ದುರ್ನಾತ ಎಲ್ಲೆಡೆ ಹರಡುತ್ತದೆ. ಇದರಿಂದ ಸಂಬಂಧಿಕರೂ ಮನೆಗಳಿಗೆ ಬರುತ್ತಿಲ್ಲ ಎಂದು ಹನುಮಂತಪುರದ ಪ್ರಶಾಂತ್ ಅಳಲು ತೋಡಿಕೊಂಡರು. ಮಳೆಗಾಲದಲ್ಲಿ ಇಲ್ಲಿನ ನೀರು ಸಂಸ್ಕರಣೆ ಆಗದೆ ಹಳ್ಳದ ಮೂಲಕ ತುಂಗಾ ನದಿಗೆ ಸೇರುತ್ತಿದೆ ಎಂದು ಪುರದಾಳ್ ಗ್ರಾಮದ ನವೀನ್ ದೂರಿದರು. ಸುತ್ತಮುತ್ತ ಗ್ರಾಮಗಳಿಗೆ ವಾಸನೆ ಹರಡದಂತೆ ಬಫರ್ ಜೋನ್‌ನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಲೋಕಾಯುಕ್ತ ಜಿಲ್ಲಾ ನ್ಯಾಯಾಧೀಶರಾದ ಎನ್.ಆರ್.ಲೋಕಪ್ಪ, ನ್ಯಾ. ಜಿ.ವಿ.ವಿಜಯಾನಂದ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್, ಡಿಸಿ ಗುರುದತ್ತ ಹೆಗಡೆ, ಜಿಪಂ ಸಿಇಒ ಎನ್.ಹೇಮಂತ್, ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net