

ಬೆಂಗಳೂರು: ಪರಿಶಿಷ್ಟ ಜಾತಿ ಅಧಿಕಾರಿ, ನೌಕರರ ಉಪಜಾತಿಗಳ ಮಾಹಿತಿ ನೀಡದ ವಿಧಾನಸಭೆ ಸಚಿವಾಲಯದ ಸಿಸ್ಟಮ್ ಅನಾಲಿಸ್ಟ್ ಎಚ್.ಎಂ.ಮೋಹನ್ ಕುಮಾರ್‌ಗೆ ನ್ಯಾ. ಎಚ್. ಎನ್. ನಾಗಮೋಹನ್ ದಾಸ್ ಏಕಸದಸ್ಯ ಆಯೋಗ ನೋಟಿಸ್ ಜಾರಿ ಮಾಡಿದೆ.
ವಿಧಾನಸಭೆ ಸಚಿವಾಲಯದ ಸಿಸ್ಟಮ್ ಅನಾಲಿಸ್ಟ್ ಎಚ್.ಎಂ. ಮೋಹನ್ ಕುಮಾರ್‌ಗೆ ಏ.9ರಂದು ಪತ್ರ ಬರೆದು ಆಯೋಗ ವರದಿ ಕೇಳಿತ್ತು. ತಮ್ಮ ಸಚಿವಾಲಯ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿಯ ಅಧಿಕಾರಿ, ನೌಕರರ ಉಪಜಾತಿಗಳ ಬಗ್ಗೆ ನಿಗದಿತ ಅನುಬಂಧಗಳಲ್ಲಿ ಮಾಹಿತಿ ಸಲ್ಲಿಸುವಂತೆ ಸೂಚಿಸಿತ್ತು.
ಸಮಾಜ ಕಲ್ಯಾಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಮಾಹಿತಿ ಅಪ್‌ಡೇಟ್ ಮಾಡಲು ಸರ್ಕಾರದ ಅಧೀನ ಕಾರ್ಯದರ್ಶಿಗಳು ನಿಮ್ಮನು ನೇಮಕ ಮಾಡಿದ್ದರು. ಜವಾಬ್ದಾರಿಯುತ ಅಧಿಕಾರಿಯಾದ ನಿಮ್ಮನ್ನು ಸರ್ಕಾರ ಮೇ 27ರಂದು ನೋಡಲ್ ಅಧಿಕಾರಿಯಾಗಿ ನೇಮಿಸಿದೆ. ಇಲ್ಲಿಯವರೆಗೂ ಮಾಹಿತಿ ಕ್ರೋಡೀಕರಿಸಿ ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಮಾಡದೆ ಇರುವುದು ನಿಮ್ಮ ಕರ್ತವ್ಯಲೋಪ ಮತ್ತು ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ. ಜೂನ್ 13ರ ಒಳಗಾಗಿ ಕಡ್ಡಾಯವಾಗಿ ಮಾಹಿತಿ ಅಪ್‌ಡೇಟ್ ಮಾಡಬೇಕು. ತಪ್ಪಿದರೇ ವಾರಂಟ್ ಜಾರಿ ಮಾಡುವುದಾಗಿ ಆಯೋಗ ಎಚ್ಚರಿಕೆ ನೀಡಿದೆ.