

ಶ್ರೀರಾಮನ ಅಪೇಕ್ಷೆಯಂತೆ ಶ್ರೀ ವಸಿಷ್ಠರು ಯುದ್ಧದ ವರ್ಣನೆಯನ್ನು ಮುಂದುವರಿಸಿದ್ದಾರೆ. ವೇದಾಂತದ ಪ್ರವಚನದ ಮಧ್ಯದಲ್ಲಿ ಯುದ್ಧದ ವರ್ಣನೆ. ಇದು ಯೋಗವಾಸಿಷ್ಠದ ಶೈಲಿ. ಆದರೆ ಯುದ್ಧದ ವರ್ಣನೆಯ ಮಧ್ಯದಲ್ಲಿ ವೇದಾಂತದ ಪ್ರವಚನ ಮಹಾಭಾರತದಲ್ಲಿ ಭಗವದ್ಗೀತೆಯ ಶೈಲಿಯಾಗಿದೆ. ಯೋಗವಾಸಿಷ್ಠ ಮತ್ತು ಭಗವದ್ಗೀತೆಗಳ ನಡುವೆ ಅನೇಕ ಸಾಮ್ಯಗಳಿರುವುದನ್ನು ವಿದ್ವಾಂಸರು ಹೇಳುತ್ತಾರೆ. ಇದೊಂದು ರೀತಿಯ ಸಾಮ್ಯ ಎನ್ನಬಹುದು. ಯುದ್ಧದ ಜೊತೆ ವೇದಾಂತ ಚಿಂತನೆಯ ಹದವಾದ ಪಾಕ.
ಕಥೆಯ ಹಿನ್ನಲೆ ಹೇಳುವುದಾದರೆ, ಲೀಲಾಮಹಾರಾಣಿಯ ಪತಿ ಯಾಗಿದ್ದ ಪದ್ಮಮಹಾರಾಜನು ಮರಣ ಹೊಂದಿ, ವಿದೂರಥನೆಂಬ ಕ್ಷತ್ರಿಯನಾಗಿ ಹುಟ್ಟಿ, ಈಗ ಸಾಮ್ರಾಟನಾಗಿದ್ದಾನೆ. ಜ್ಞಾನದೇವಿಯ ಜೊತೆಯಲ್ಲಿ ಸೂಕ್ಷ್ಮರೂಪದಿಂದ ಲೀಲಾಮಹಾರಾಣಿಯು ಈಗ ವಿದೂರಥನ ರಾಜಧಾನಿಗೆ ಬಂದಿದ್ದಾಳೆ. ಅದೇ ವೇಳೆಗೆ ವಿದೂರಥನ ರಾಜಧಾನಿಯ ಮೇಲೆ ಅವನ ಸಾಮಂತ ರಾಜರಲ್ಲಿ ಕೆಲವರು ಯುದ್ಧಕ್ಕೆ ಬಂದಿದ್ದಾರೆ. ಎರಡೂ ಪಕ್ಷಗಳ ಸೇನೆಗಳೂ ಯುದ್ಧರಂಗದಲ್ಲಿ ಸಜ್ಜಾಗಿ ನಿಂತಿದ್ದನ್ನು ಲೀಲಾಮಹಾರಾಣಿಯು ದೇವಿಯ ಜೊತೆ ಆಕಾಶದಲ್ಲಿಯೇ ವಿಮಾನದಲ್ಲಿ ಕುಳಿತು ನೋಡಿದ್ದಾಳೆ. ಇದೀಗ ಅಧಿಕೃತವಾಗಿ ಯುದ್ಧ ಪ್ರಾರಂಭವಾಗಿದೆ.
ಶ್ರೀ ವಸಿಷ್ಠರು ಯುದ್ಧವರ್ಣನೆಯನ್ನು ಮುಂದುವರಿಸುತ್ತಿದ್ದಾರೆ - ‘ಶ್ರೀರಾಮ! ಆ ಯುದ್ಧರಂಗದಲ್ಲಿ ಸೈನಿಕರು ‘ಹುಂ’ಕಾರಗೈಯುತ್ತಾ ಪ್ರಹಾರ ಮಾಡಿದ ಆಯುಧಗಳ ಪರಸ್ಪರ ತೀಕ್ಷ್ಣವಾದ ಘರ್ಷಣೆಯಿಂದ ಕರ್ಕಶವಾದ ಠಣ್-ಠಣ್ ಎಂದು ಶಬ್ದ ಕೇಳಿಬರುತ್ತಿತ್ತು. ಖಡ್ಗಗಳ ಪ್ರಹಾರ ಎಷ್ಟು ತೀಕ್ಷ್ಣವಾಗಿತ್ತೆಂದರೆ ಚಲಿಸುತ್ತಿರುವ ಖಡ್ಗಗಳ ಧಾರೆ (ಹರಿತವಾದ ಅಲಗು) ಗಳ ತರಂಗಗಳಿಂದ ಕೂಡಿದ, ಮೋಡಗಳ ಪ್ರಹಾರಗಳಿಂದ ಎಲ್ಲಾದಿಕ್ಕುಗಳ ಮುಖ (ಬಾಯಿ) ಗಳ ಮೇಲೆ ಪೆಟ್ಟುಬಿದ್ದು, ಆ ಮುಖಗಳಲ್ಲಿ ಹಲ್ಲುಗಳು ಉಬ್ಬಿ ಬಂದಿದೆಯೋ ಎಂಬಂತಿತ್ತು.’
‘ಯುದ್ಧದಲ್ಲಿ ಪ್ರಯೋಗಿಸಲ್ಪಡುತ್ತಿರುವ ಖಡ್ಗಗಳ, ಮತ್ತಿತರ ಆಯುಧಗಳ ಶಬ್ದ ಎಷ್ಟು ಸ್ಪುಟವಾಗಿ ಆಕಾಶದಲ್ಲಿ ಹರಡಿತ್ತೆಂದರೆ ಖಡ್ಗ ಪ್ರಹಾರದಿಂದ ಶತ್ರುಸೈನ್ಯದಲ್ಲಿ ಚೆಲ್ಲಾಪಿಲ್ಲಿಯಾಗಿರುವ ಶತ್ರುವಿನ ತಲೆಯನ್ನು ಹಿಡಿಯಲು ಬೀಸಿದ ಕೈಗೆ ಆ ತಲೆಯ ಬದಲಾಗಿ ಝುುಣ-ಝುಣ ಎಂಬ ಆಯುಧಗಳ ಶಬ್ದವೇ ಹಿಡಿಯಲು ಸಿಗುವಂತಿತ್ತು. ಯೋಧರು ಯುದ್ಧೋತ್ಸಾಹದಲ್ಲಿ ತಮ್ಮ ಬಾಹುಗಳನ್ನು ತಟ್ಟಿಕೊಳ್ಳುತ್ತಿದ್ದರು. ಹಾಗೆ ತಟ್ಟಿಕೊಳ್ಳುತ್ತಿರುವುದರಿಂದ ಉಟಾಗುತ್ತಿರುವ ‘ಛಟ-ಛಟ’ ಶಬ್ದಗಳು ಆ ರಣಾಂಗಣದಲ್ಲಿ ಹೆಚ್ಚು ಸಮಯದವರೆಗೂ ಭೂಮಿಯಲ್ಲಿ ಹೊರಳಾಡುತ್ತಿರುವಂತೆ ಕೇಳಿಬರುತ್ತಿತ್ತು.’
‘ಸೈನಿಕರು ಯುದ್ಧದ ಮಧ್ಯದಲ್ಲಿ ಆಯುಧಗಳನ್ನು ಬದಲಾಯಿಸಿಕೊಳ್ಳುತ್ತಿದ್ದರು. ಆಗ ತ್ವರೆಯಿಂದ ಖಡ್ಗವನ್ನು ಅದರ ವರೆಯಿಂದ ಸೆಳೆಯುವಾಗ ಉಂಟಾದ ಘರ್ಷಣೆಯಿಂದ ಕಿಡಿಗಳು ‘ಸುಂಯ್’ ಎಂದು ಶಬ್ದ ಮಾಡುತ್ತಾ ಹೊರಬರುತ್ತಿದ್ದವು. ನಿರ್ದಿಷ್ಟ ಲಕ್ಷ್ಯವನ್ನು ಭೇದಿಸಲು ಪ್ರಯೋಗಿಸಲ್ಪಟ್ಟ ಬಾಣಗಳ ಸಮೂಹಗಳು ವೇಗವಾಗಿ ಹೊರಟು ತಮ್ಮ ದಾರಿಯ ಕೊನೆಯಲ್ಲಿ ಅನೇಕ ಶರೀರಗಳನ್ನು ಸೀಳಿಹಾಕುತ್ತಿದ್ದವು. ಸೀಳಿ ಹಾಕಲ್ಪಟ್ಟ ಶರೀರಗಳು ಪ್ರಾಣೋತ್ಕ›ಮಣದ ತೀವ್ರತೆಯಿಂದಾಗಿ ‘ಖರ-ಖರ’ ಎಂದು ಶಬ್ದ ಮಾಡುತ್ತಿದ್ದವು. ಕತ್ತರಿಸಲ್ಪಟ್ಟ ಕಂಠಗಳಿಂದ ಉಕ್ಕಿ ಹೊರಬರುತ್ತಿರುವ ರಕ್ತದ ಜೊತೆ ಪ್ರಾಣವಾಯು ಸೇರಿಕೊಂಡಿದ್ದರಿಂದ ‘ಧಕ್-ಧಕ್’ ಎಂಬ ಶಬ್ದವು ಉಂಟಾಗುತ್ತಿತ್ತು. ಯುದ್ಧದ ತೀವ್ರತೆಯಲ್ಲಿ ಕತ್ತರಿಸಲ್ಪಟ್ಟ ಬಾಹುಗಳು, ರುಂಡಗಳು ಮತ್ತು ಖಡ್ಗಗಳ ಚೂರು ಗಳು ಎಲ್ಲೆಂದರಲ್ಲಿ ಹಾರಿಬರುತ್ತಿರುವುದ ರಿಂದ ಆಕಾಶದಲ್ಲಿ ದಟ್ಟವಾಗಿ ತುಂಬಿಕೊಂಡಂತೆ ಕಾಣುತ್ತಿತ್ತು.’ ‘ಆಯುಧಗಳ ಘರ್ಷಣೆಯಿಂದ ಲೋಹದ ಕವಚಗಳಿಂದ ಉತ್ಪತ್ತಿಯಾಗುವ ಹೊಳೆಯುವ ಜಟೆಗಳಂತಹ ಜ್ವಾಲೆ (ಕಿರಣ) ಗಳಿಂದ ಪಕ್ಕದಲ್ಲಿರುವವರ ತಲೆಕೂದಲು ನಸುಕೆಂಪು ಬಣ್ಣವುಳ್ಳದ್ದಾಗಿ ಕಾಣುತ್ತಿತ್ತು. ಖಡ್ಗಧಾರಿಗಳಾದ ಯೋಧರ ಯುದ್ಧೋತ್ಸಾಹ ಎಷ್ಟು ಹೆಚ್ಚಿದೆಯೆಂದರೆ, ಅವರ ಅವರ ಖಡ್ಗಸಮೂಹಗಳ ಏಟುಗಳು ಶಬ್ದ ಮಾಡುತ್ತಾ ವೈರಿಗಳ ಮೇಲೆ ಬಿದ್ದಾಗ ಅವರು ಹರ್ಷಪರವಶರಾಗಿ ಇನ್ನಷ್ಟು ರಣೋತ್ಸಾಹದಿಂದ ತುಂಬಿದವರಾಗುತ್ತಿದ್ದರು. ಇದಕ್ಕೆ ಖಡ್ಗಪ್ರಹಾರದಿಂದ ಉಂಟಾಗುತ್ತಿರುವ ‘ಝುಣ್-ಝುಣ್’ ಎಂಬ ಶಬ್ದ. ‘ಕುಂತ’ ಎಂಬ ಆಯುಧಗಳಿಂದ ಹೊಡೆಯಲ್ಪಟ್ಟ ಆನೆಗಳ ರಕ್ತವು ಉತ್ತುಂಗ ತರಂಗಗಳೊಂದಿಗೆ ಹರಿಯುತ್ತಿತ್ತು. ಇನ್ನೊಂದೆಡೆ ಆನೆಗಳ ದಂತಗಳಿಂದ ತಿವಿಯಲ್ಪಟ್ಟು ಸಾಯುತ್ತಿರುವವರ ಚೀತ್ಕಾರ ತಾರಸ್ವರದಲ್ಲಿ ಕರ್ಕಶವಾಗಿ ಕೇಳಿಬರುತ್ತಿತ್ತು.’
‘ದೊಡ್ಡ ದೊಡ್ಡ ಮುಸಲಾಯುಧಗಳ ಪ್ರಹಾರದಿಂದ ಏಟು ತಿಂದವರು ತುಂಬಾ ಸಂಕಟದಿಂದ ಗಟ್ಟಿಯಾಗಿ ಕಿರುಚಿಕೊಳ್ಳುತ್ತಿದ್ದರು. ಆಯುಧಗಳಿಂದ ಕತ್ತರಿಸಲ್ಪಟ್ಟ ಶೂರರ ತಲೆಬುರುಡೆಗಳೆಂಬ ಕಮಲಗಳು ಮೇಲೆ ಆಕಾಶವನ್ನೆಲ್ಲಾ ಆಚ್ಛಾದಿಸಿಕೊಂಡಿವೆಯೋ ಎಂಬಂತೆ ಘನಘೊರ ಸಂಗ್ರಾಮ ನಡೆಯುತ್ತಿತ್ತು.’ ‘ಯುದ್ಧದಲ್ಲಿ ತುಂಡರಿಸಲ್ಪಟ್ಟು ಆಕಾಶದೆತ್ತರಕ್ಕೆ ಹಾರಿಹೋಗಿ ಬೀಳುತ್ತಿರುವ ತೋಳುಗಳು ಆಕಾಶದಲ್ಲಿ ತೇಲಾಡುತ್ತಿರುವ ದಪ್ಪನೆಯ ಹಾವುಗಳಂತೆ ಕಾಣುತ್ತಿದ್ದವು. ಆಕಾಶದಲ್ಲಿರುವ ಮೋಡಗಳೆಲ್ಲ ಧೂಳಿನಿಂದ ಆವರಿಸಲ್ಪಟ್ಟಿದ್ದವು. ಆಯುಧಗಳನ್ನು ತುಂಡರಿಸಿರುವುದಕ್ಕೆ ಪ್ರತೀಕಾರವಾಗಿ ಶತ್ರುಸೈನಿಕರ ತಲೆಕೂದಲುಗಳನ್ನು ಪರಸ್ಪರ ಹಿಡಿದುಕೊಂಡು ಹೋರಾಡುತ್ತಿರುವ ಸೈನಿಕರನ್ನು ನೋಡಿದರೆ ಅತ್ಯಂತ ಭಯವಾಗುವಂತಿತ್ತು.’
‘ಹೀಗೆ ಮುಂದುವರಿದು, ಕೈಗಳ ಉಗುರುಗಳಿಂದಲೇ ಶತ್ರುಸೈನಿಕರ ಮೇಲೆ ಮುಗಿಬಿದ್ದು, ಶತ್ರುಸೈನಿಕರ ಕಣ್ಣು, ಕಿವಿ, ಮೂಗು, ತುಟಿ, ಕುತ್ತಿಗೆಗಳನ್ನು ಹರಿದುಹಾಕುತ್ತಿರುವ ದೃಶ್ಯವು ಕಂಡುಬಂದಿತು. ಕೈಯಲ್ಲಿದ್ದ ಆಯುಧಗಳು ತುಂಡಾಗಿಹೋಗಿದ್ದರಿಂದ ಅನೇಕ ಯೋಧರು ಮಲ್ಲಯುದ್ಧವನ್ನು ಮಾಡುತ್ತಿದ್ದರು. ಅವರ ಮಲ್ಲಯುದ್ಧವು ಮಹಾಮಲ್ಲ (ಮಲ್ಲಯುದ್ಧದಲ್ಲಿ ಅತ್ಯಂತ ಪಳಗಿದವ) ರನ್ನೂ ನಾಚಿಸುವಂತಿತ್ತು. ಅಲ್ಲದೇ ಉತ್ಕೃಷ್ಟವಾದ ಬಾಹುಯುದ್ಧ ಕ್ರೀಡೆಯಿಂದ ಅವರು ವಿಜಯಶಾಲಿಗಳಾಗತೊಡಗಿದರು.’