

ಬೆಂಗಳೂರು: ರಾಜ್ಯ ಕಾಂಗ್ರೆಸ್ ಒಡೆದ ಮನೆ(State Congress is a divided house) ಯಾಗಿದ್ದು, ಆ ಪಕ್ಷದ ನಾಯಕರು ಅಧಿಕಾರಕ್ಕಾಗಿ ಬಕಪಕ್ಷಿಗಳಂತೆ ಹಾತೊರೆಯುತ್ತಿದ್ದಾರೆ ಎಂದು ಜೆಡಿಎಸ್ ಲೇವಡಿ ಮಾಡಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್(DCM DK Shivakumar) ನಮ್ಮಲ್ಲಿ ಒಪ್ಪಂದವಾಗಿದೆ ಎಂದು ಹೇಳಿದ್ದೇ ತಡ ಸಿದ್ದರಾಮಯ್ಯ ಅವರ ಸಿಎಂ ಕುರ್ಚಿ ಅಲುಗಾಡಲು ಶುರುವಾಗಿರುವುದು ಸತ್ಯ. ಸಿದ್ದರಾಮಯ್ಯ-ಡಿಕೆಶಿ ನಡುವೆ ಒಪ್ಪಂದ ಆಗಿದ್ದರೆ ನಾವ್ಯಾಕೆ ಇರೋದು? ಅವರಿಬ್ಬರೇ ರಾಜಕಾರಣ ಮಾಡಲಿ ಎಂದು ಸಿಟ್ಟಾಗಿದ್ದಾರೆ ಗೃಹ ಸಚಿವ ಡಾ.ಜಿ.ಪರಮೇಶ್ವರ್. ಹೀಗಾಗಿ ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟ ನಡೆದಿದೆ ಎಂದು ಟೀಕಿಸಿದೆ.
ಅಧಿಕಾರ ಹಂಚಿಕೆ ಒಪ್ಪಂದ ಆಗಿರುವುದು ನಿಜ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿರುವುದು ರಾಜ್ಯ ಕಾಂಗ್ರೆಸ್‌ನಲ್ಲಿ ‘ಅಧಿಕಾರದ ಅಂತರ್ಯುದ್ಧ’, ‘ಬಡಿದಾಟ’ ಭುಗಿಲೆದ್ದಿರುವುದಕ್ಕೆ ಸಾಕ್ಷಿಯಾಗಿದೆ.
ಚಾಮರಾಜನಗರ ಜಿಲ್ಲೆಯ ‘ಸತ್ತೇಗಾಲ’ದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ನಾನು ರಾಜಕೀಯದ ಕೊನೆಗಾಲದಲ್ಲಿದ್ದೇನೆ ಎಂದು ಹೇಳಿದ್ದಾರೆ. ಅವರ ಭಾವುಕತೆ, ಅಧಿಕಾರದ ಮೇಲಿನ ವ್ಯಾಮೋಹದ ತೀವ್ರತೆ ಕುರ್ಚಿ ಬಿಡುವುದಿಲ್ಲ ಎಂಬುದನ್ನು ಕಡ್ಡಿ ಮುರಿದಂತೆ ಹೇಳಿದ್ದಾರೆ ಎಂದು ಜೆಡಿಎಸ್ ವ್ಯಂಗ್ಯವಾಡಿದೆ.
ನೂರಾರು ದಾರಿಗಳು, ಸಾವಿರಾರು ಅಡ್ಡರಸ್ತೆಗಳ ಕಾಂಗ್ರೆಸ್ಸಿನಲ್ಲಿ ಅಧಿಕಾರಕ್ಕಾಗಿ ತಂತ್ರ, ಕುತಂತ್ರ, ಷಡ್ಯಂತ್ರಗಳ ಪ್ರಯೋಗ ಜೋರಾಗಿದ್ದು, ಕೊನೆಗೆ ಯಾರು ಯಾರು ಏನಾಗುತ್ತಾರೋ ಎನ್ನುವುದು ಸದ್ಯವೇ ಗೋಚರವಾಗಲಿದೆ ಎಂದು ಜೆಡಿಎಸ್ ಟಾಂಗ್ ಕೊಟ್ಟಿದೆ.