

ಬೆಂಗಳೂರು: ವಕ್ಫ್‌ಗೆ ಸೇರಿದ ಆಸ್ತಿಯೆಂದು ಅಧಿಕಾರಿಗಳು ನೀಡಿರುವ ನೋಟಿಸ್ ವಿಜಯಪುರ ಜಿಲ್ಲೆಯ ರೈತರಲ್ಲಿ ಗೊಂದಲ, ಕಳವಳ ಹುಟ್ಟಿಹಾಕಿದೆ. ಈ ಬೆಳವಣಿಗೆ ವಿರುದ್ಧ ಪ್ರತಿಪಕ್ಷ ಬಿಜೆಪಿ ರೊಚ್ಚಿಗೆದ್ದಿದ್ದು, ಚಿಂತಾಕ್ರಾಂತ ರೈತರಿಗೆ ಹೋರಾಟದ ಬಲ ತುಂಬಲು ಸಜ್ಜಾಗುತ್ತಿದೆ.
ಈ ನಿಟ್ಟಿನಲ್ಲಿ ಮುಂದಿಡಬೇಕಾದ ಹೆಜ್ಜೆ ಕುರಿತು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಮಕ್ಷಮ ಹಿರಿಯ ನಾಯಕರು ಭಾನುವಾರ ಚರ್ಚಿಸಿದ್ದಾರೆ. ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ಸಮಸ್ಯೆ ತಿಳಿದುಕೊಳ್ಳಲು ತಂಡವನ್ನು ನೇಮಿಸಲು ನಿರ್ಧರಿಸಲಾಗಿದೆ.
ಶಾಸಕರಾದ ಹರೀಶ್ ಪೂಂಜಾ, ಮಹೇಶ್ ಟೆಂಗಿನಕಾಯಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪುರ ಮತ್ತು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ ಈ ತಂಡದಲ್ಲಿದ್ದು, ಗೊಂದಲದ ಕಾರ್ಯ-ಕಾರಣಗಳನ್ನು ಪರಿಶೀಲಿಸಲಿದೆ.
ವಕ್ಫ್ ಮಂಡಳಿಯಿಂದ ವಿಜಯಪುರ ಜಿಲ್ಲೆಯಲ್ಲಿ ಆಗುತ್ತಿರುವ ತೊಂದರೆ ಹಾಗೂ ಬಾಧಿತ ರೈತರ ಅಹವಾಲನ್ನು ಕೇಳಲು ಈ ತಂಡ ಅ.29ರಂದು ಭೇಟಿ ನೀಡಿ, ಸಮಸ್ಯೆ ಸಮಗ್ರ ವರದಿ ಸಲ್ಲಿಸಲು ತಂಡಕ್ಕೆ ಬಿ.ವೈ.ವಿಜಯೇಂದ್ರ ನಿರ್ದೇಶಿಸಿದ್ದಾರೆ.