

ಅಮರಾವತಿ: ಹಿಂದೂ ದೇವಾಲಯದ ಟ್ರಸ್ಟ್ ಅನ್ನು ವಕ್ಫ್ ಬೋರ್ಡ್‌ಗೆ ಹೋಲಿಸಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ಹೇಳಿಕೆಯನ್ನು ತಿರುಮಲ ತಿರುಪತಿ ದೇವಸ್ಥಾನಂ(TTD) ಅಧ್ಯಕ್ಷ ಬೊಳ್ಳಿನೇನಿ ರಾಜಗೋಪಾಲ್ ನಾಯ್ಡು ಅವರು ಸೋಮವಾರ(ನವೆಂಬರ್ 4) ತಿರಸ್ಕರಿಸಿದ್ದಾರೆ. ವಕ್ಫ್ ಬೋರ್ಡ್ ಒಂದು ರಿಯಲ್ ಎಸ್ಟೇಟ್ ಕಂಪನಿ ಮತ್ತು ತಿರುಮಲ ದೇವಸ್ಥಾನವಾಗಿರುವುದರಿಂದ ಎರಡು ಸಂಸ್ಥೆಗಳ ನಡುವಿನ ಹೋಲಿಕೆ ಆಧಾರರಹಿತವಾಗಿದೆ ಎಂದು ಅವರು ಹೇಳಿದರು.
ಈ ಹೇಳಿಕೆ ಆಧಾರ ರಹಿತ, ವಕ್ಫ್ ಬೋರ್ಡ್ ರಿಯಲ್ ಎಸ್ಟೇಟ್ ಕಂಪನಿ. ಇದನ್ನು ತಿರುಮಲಕ್ಕೆ ಹೋಲಿಸುವುದು ಹೇಗೆ? ತಿರುಮಲ ಹಿಂದೂ ದೇವಾಲಯ, ತಿರುಮಲದಲ್ಲಿ ಹಿಂದೂಯೇತರರು ಇರಬಾರದು ಎಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಇದು ನನ್ನ ವೈಯಕ್ತಿಕ (ಅಭಿಪ್ರಾಯ) ಅಲ್ಲ. ಸನಾತನ ಧರ್ಮವು ಹಿಂದೂಗಳು ಮಾತ್ರ ಇರಬೇಕೆಂದು ಹೇಳುತ್ತದೆ ಮತ್ತು ನಾವು ಅದರ ಬಗ್ಗೆ ಕೆಲಸ ಮಾಡುತ್ತಿದ್ದೇವೆ. ನಾವು ಮೊದಲ ಮಂಡಳಿಯ ಸಭೆಯಲ್ಲಿ ನಿರ್ಧರಿಸುತ್ತೇವೆ ಎಂದು ಅವರು ಹೇಳಿದರು.
ಆಂಧ್ರಪ್ರದೇಶ ಸರ್ಕಾರವು ಬೊಳ್ಳಿನೇನಿ ರಾಜಗೋಪಾಲ್ ನಾಯ್ಡು ಅವರನ್ನು ಟಿಟಿಡಿ ಅಧ್ಯಕ್ಷರನ್ನಾಗಿ ಅಕ್ಟೋಬರ್ 30ರಂದು ನೇಮಿಸಿತು. ನವೆಂಬರ್ 6ರಂದು ಅವರು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ತಿರುಮಲದಲ್ಲಿ ಕೆಲಸ ಮಾಡುತ್ತಿರುವ ಹಿಂದೂಯೇತರ ನೌಕರರನ್ನು ವರ್ಗಾವಣೆ ಮಾಡಬೇಕೋ ಅಥವಾ ವಿಆರ್ ಎಸ್ ನೀಡಬೇಕೋ ಎಂಬ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸುವುದಾಗಿ ಬಿ.ಆರ್ ನಾಯ್ಡು ಕಳೆದ ವಾರ ಹೇಳಿದ್ದರು.
ಟಿಟಿಡಿ ಮಂಡಳಿಯ (ತಿರುಮಲ ತಿರುಪತಿ ದೇವಸ್ಥಾನಗಳು) 24 ಸದಸ್ಯರಲ್ಲಿ ಒಬ್ಬ ಕೂಡ ಹಿಂದೂಯೇತರ ಸದಸ್ಯರಿಲ್ಲ. ಟಿಟಿಡಿಯ ನೂತನ ಅಧ್ಯಕ್ಷರು ಅಲ್ಲಿ ಕೆಲಸ ಮಾಡುವವರು ಹಿಂದೂಗಳಾಗಿರಬೇಕು ಎಂದು ಹೇಳುತ್ತಾರೆ. ನಾವು ಅದನ್ನು ವಿರೋಧಿಸುವುದಿಲ್ಲ, ಆದರೆ ಕೇಂದ್ರದ ವಕ್ಫ್ ಕೌನ್ಸಿಲ್‌ನಲ್ಲಿ 2 ಮುಸ್ಲಿಮೇತರ ಸದಸ್ಯರು ಇರುವುದನ್ನು ಕಡ್ಡಾಯಗೊಳಿಸಲಾಗಿದೆ. ಪ್ರಧಾನಿ ಮೋದಿ ಸರ್ಕಾರದ ಪ್ರಸ್ತಾವಿತ ವಕ್ಫ್ ಮಸೂದೆಯಲ್ಲಿ ಹೇಳುತ್ತಿರುವುದಕ್ಕೆ ನಮ್ಮ ಆಕ್ಷೇಪವಿದೆ. ಟಿಟಿಡಿ ಹಿಂದೂ ಧರ್ಮದ ಮಂಡಳಿ ಮತ್ತು ವಕ್ಫ್ ಬೋರ್ಡ್ ಮುಸ್ಲಿಂ ಧರ್ಮಕ್ಕೆ ಸಮಾನತೆ ಇರಬೇಕು. ಟಿಟಿಡಿಯ ಟ್ರಸ್ಟಿಗಳು ಮುಸ್ಲಿಮರಾಗಲು ಸಾಧ್ಯವಿಲ್ಲ ಎಂದಾದರೆ ಮುಸ್ಲಿಮೇತರ ಸದಸ್ಯರು ವಕ್ಫ್ ಮಂಡಳಿಯಲ್ಲಿ ಹೇಗೆ ಇರುತ್ತಾರೆ? ಎಂದು ಓವೈಸಿ ಪ್ರಶ್ನಿಸಿದ್ದರು.(ಏಜೆನ್ಸೀಸ್)