ವಕ್ಫ್ ತಿದ್ದುಪಡಿ ಹಿಂದುಳಿದವರಿಗೆ ನ್ಯಾಯ: ಡಾ.ಸರ್ಜಿ

bjp
ಸಂಸತ್‌ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವಾದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿ ಎದುರು ಜಗದೀಶ್, ಎಂ.ಬಿ.ಹರಿಕೃಷ್ಣ, ಮಾಲತೇಶ್, ರಾಜು ತಲ್ಲೂರು, ಸುಮಲತಾ ಭೂಪಾಳಂ, ಅಣ್ಣಪ್ಪ, ಶಿವರಾಜ್ ಮತ್ತಿತರರಿದ್ದರು.
Published on

ಶಿವಮೊಗ್ಗ: ಸಂಸತ್‌ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವಾದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯಾಲಯದ ಎದುರು ಶುಕ್ರವಾರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.

ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರು ವಕ್ಫ್ ಕಾಯ್ದೆ ಜಾರಿಗೆ ತಂದಿದ್ದರು. ಪ್ರಧಾನಿಯಾಗಿದ್ದ ಅವಧಿಯಲ್ಲಿ ಮನಮೋಹನ್ ಸಿಂಗ್ ಈ ಕಾಯ್ದೆಗೆ ಮತ್ತಷ್ಟು ಬಲ ತುಂಬಿದರು. ಈ ಮೂಲಕ ಒಂದು ಸಮುದಾಯವನ್ನು ಕಾಂಗ್ರೆಸ್ ಸರ್ಕಾರ ಇದುವರೆಗೆ ತುಷ್ಟೀಕರಣ ಮಾಡುತ್ತ ಬಂದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಕ್ಫ್ ಕಾಯ್ದೆಗೆ ವಿಶೇಷ ಅಧಿಕಾರ ನೀಡಿದ್ದರಿಂದ ದೇಶದ ಅನೇಕ ಕಡೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು ಹಲವಾರು ವರ್ಷಗಳಿಂದ ಉಳುಮೆ ಮಾಡುತ್ತಿದ್ದ ಭೂಮಿ ವಕ್ಫ್ ಭೂಮಿ ಎಂದು ನಮೂದಾಯಿತು. ಮತಕ್ಕಾಗಿ ದೇಶವನ್ನು, ಧರ್ಮವನ್ನು ಒಡೆದವರು ಕಾಂಗ್ರೆಸ್ಸಿಗರು. ನಿರಂತರವಾಗಿ ತುಷ್ಟೀಕರಣ ನೀತಿ ಅನುಸರಿಸುತ್ತಿರುವುದು ಕಾಂಗ್ರೆಸ್. ಪ್ರಧಾನಿ ನರೇಂದ್ರ ಮೋದಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದು ದೇಶದ ಹಿಂದುಳಿದ ವರ್ಗಕ್ಕೆ ನ್ಯಾಯ ಒದಗಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಜಗದೀಶ್, ಎಸ್ಸಿ-ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಾಲತೇಶ್, ಎಂ.ಬಿ.ಹರಿಕೃಷ್ಣ, ಶಿವರಾಜ್, ಪ್ರಮುಖರಾದ ಶಿವಾನಂದ್, ಅಣ್ಣಪ್ಪ, ಗಣೇಶ್ ಬೀಳಗಿ, ಮೋಹನ್, ರಾಜು ತಲ್ಲೂರು, ಸುಮಲತಾ ಭೂಪಾಳಂ, ಶುಭಾ, ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net