

RACHITA RAM : ಸಿನಿಮಾ ನಟ ಹಾಗೂ ನಟಿಯರು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಾರೆ. ಇನ್ನೂ ಅಭಿಮಾನಿಗಳು ಸಹ ಆ ದಿನವಾದರೂ ತಮ್ಮ ನೆಚ್ಚಿನ ನಟ/ನಟಿಯನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಳ್ಳಬಹುದು ಎಂದು ಕಾತುರದಿಂದ ಕಾಯುತ್ತಿರುತ್ತಾರೆ. ಆದರೆ ಸಿನಿಮಾ ಶೂಟಿಂಗ್ ಬ್ಯುಸಿಯಲ್ಲಿ ಎಷ್ಟೋ ಸ್ಟಾರ್ಗಳು ತಮ್ಮ ಅಭಿಮಾನಿಗಳ ಒಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ನಡುವೆ ನಟಿ ರಚಿತಾರಾಮ್ ತಮ್ಮ ಅಭಿಮಾನಿಗಳಿಗೆ ಗುಡ್ನ್ಯೂಸ್ ನೀಡಿದ್ದಾರೆ.
ಡಿಂಪಲ್ ಕ್ವೀನ್ ನಾಳೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. 1992ರ ಅಕ್ಟೋಬರ್ 3ರಂದು ಹುಟ್ಟಿರೋ ನಟಿಗೆ ಈಗ 33 ವರ್ಷ ವಯಸ್ಸು. ಹಾಗಾಗಿ ಡಿಂಪಲ್ ಕ್ವೀನ್ ರಚಿತಾ ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಗುವುದಾಗಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಂದು ರಾತ್ರಿ ಮತ್ತು ನಾಳೆ ನಿಮ್ಮೆಲ್ಲರನ್ನೂ ನಾನು ನೋಡಲು ಕಾತುರದಿಂದ ಕಾಯುತ್ತಿದ್ದೇನೆ, ಈ ಸಂದರ್ಭದಲ್ಲಿ ನೀವು ಉಪಸ್ಥಿತರಿರುವುದೇ ನನಗೆ ದೊಡ್ಡ ಉಡುಗೊರೆ. ನಾವೆಲ್ಲರೂ ಸೇರಿ ಅದನ್ನು ಅವಿಸ್ಮರಣೀಯವಾಗಿಸೋಣ ಎಂದು ಬರೆದಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಡಿಂಪಲ್ ಕ್ವೀನ್ ಆಗಿರೋ ರಚಿತಾ ರಾಮ್ 'ಕೂಲಿ' ಚಿತ್ರದಲ್ಲಿ ಖಡಕ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಉಪೇಂದ್ರ, ರಜನಿಕಾಂತ್, ನಾಗಾರ್ಜುನ್ ಸೇರಿದಂತೆ ಘಟಾನುಘಟಿ ತಾರೆಯರು ಬಣ್ಣ ಹಚ್ಚಿದ್ದ ಈ ಚಿತ್ರದಲ್ಲಿ ರಚಿತಾ ರಾಮ್, ಕಲ್ಯಾಣಿ ಚಾಲಾಕಿ ಪಾತ್ರದಲ್ಲಿ ನಟಿಸಿ. ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅಂದಹಾಗೆ ರಚಿತಾ ರಾಮ್ ಅವರ ಮನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇದೆ. ಅಲ್ಲಿ ನಟಿ ಅಭಿಮಾನಿಗಳಿಗಾಗಿ ಕಾಯುತ್ತಿದ್ದಾರೆ.
ಎಲ್ಲಾರಿಗೂ ನಮಸ್ಕಾರ, ನನ್ನ ಬದುಕಿನಲ್ಲಿ ನೀವು ತೋರಿದ ಪ್ರೀತಿ, ಪ್ರೋತ್ಸಾಹ, ಕಾಳಜಿ ಹಾಗೂ ನನ್ನ ಪ್ರತಿಯೊಂದು ಹಂತದಲ್ಲಿ ನನ್ನ ಜೊತೆ ನಿಂತು ಬೆಂಬಲಿಸಿದ ನಿಮ್ಮೆಲ್ಲರಿಗೂ ನಾನು ಸದಾ ಋಣಿಯಾಗಿದ್ದೇನೆ. ಅಭಿಮಾನಿಗಳ ಒತ್ತಾಯ ಹಾಗೂ ನನ್ನ ಕುಟುಂಬದ ಒತ್ತಾಯದ ಮೇರೆಗೆ ಅಕ್ಟೋಬರ್ 3 ರಂದು ನನ್ನ ಮನೆಯ ಬಳಿ ನಿಮ್ಮೆಲ್ಲರೊಂದಿಗೆ ಈ ವಿಶೇಷ ದಿನವನ್ನು ಹಂಚಿಕೊಳ್ಳಲು ನಾನು ಕಾಯುತ್ತಿದ್ದೇನೆ. ಇದು ಕೇವಲ ಹುಟ್ಟುಹಬ್ಬದ ಆಚರಣೆ ಅಲ್ಲ, ಇದು ನಮ್ಮ ಸಂಬಂಧದ ಸಂಭ್ರಮ ಎಂದು ರಚಿತಾ ತನ್ನ ಪೋಸ್ಟ್‌ನಲ್ಲಿ ಬರೆದಿದ್ದಾರೆ.
(ಏಜೆನ್ಸೀಸ್)