

ಬೆಂಗಳೂರು: ಲಾಕ್ಡೌನ್ನಿಂದ ಪರಿತಪಿಸುತ್ತಿದ್ದ ಕೂಲಿ ಕಾರ್ಮಿಕರಿಗೆ ಸ್ವಂತ ಊರುಗಳಿಗೆ ತೆರಳಲು ಸರ್ಕಾರ ಅನುಮತಿ ನೀಡಿದೆ.
ವಲಸೆ ಹಾಗೂ ಕೂಲಿ ಕಾರ್ಮಿಕರನ್ನು ಕೆಎಸ್ಆರ್ಟಿಸಿ ಬಸ್ಗಳಲ್ಲಿ ಸ್ವಂತ ಊರಿಗೆ ಕಳುಹಿಸಲು ವ್ಯವಸ್ಥೆ ಕಲ್ಪಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಆದೇಶ ಹೊರಡಿಸಿದ್ದಾರೆ.
ಕೇಂದ್ರ ಸರ್ಕಾರ ಏ.20ರಂದು ಹೊರಡಿಸಿದ ಆದೇಶದಲ್ಲಿ ರಾಜ್ಯದೊಳಗೆ ಕಾರ್ಮಿಕರನ್ನು ಸ್ಥಳಾಂತರಿಸಲು ಅವಕಾಶ ಕಲ್ಪಿಸಿದೆ. ಹೀಗಾಗಿ ರಾಜ್ಯದಲ್ಲಿರುವ ಗ್ರಾಮಗಳಿಗೆ ಕಾರ್ಮಿಕರು ತೆರಳಬಹುದಾಗಿದೆ. ಆದರೆ ಅಂತಾರಾಜ್ಯಗಳಿಗೆ ತೆರಳಲು ಅವಕಾಶ ಇಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕೆಎಸ್ಆರ್ಟಿಸಿ ಬಸ್ಗಳಲ್ಲಿ ಶೇ.40ರ ಅನುಪಾತದಲ್ಲಿ ಕಾರ್ಮಿಕರನ್ನು ಸ್ಥಳಾಂತರಿಸಬೇಕು. ಕಾರ್ಮಿಕರಿಗೆ ಸ್ಯಾನಿಟೈಸರ್, ಮಾಸ್ಕ್ ವಿತರಿಸಬೇಕು. ಎಲ್ಲ ರೀತಿಯ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ವಲಸೆ ಹಾಗೂ ಕೂಲಿ ಕಾರ್ಮಿಕರು ತಮ್ಮ ಊರುಗಳಲ್ಲಿ ಕೃಷಿ ಚಟುವಟಿಕೆ ಹಾಗೂ ಇತರ ಕೆಲಸ ಮಾಡಲು ನಿರ್ಧರಿಸಿರುವುದರಿಂದ ಅವರನ್ನು ಕಳುಹಿಸಿಕೊಡಲು ಕೇಂದ್ರ ಸರ್ಕಾರ ಆದೇಶಕ್ಕೆ ತಿದ್ದುಪಡಿ ಮಾಡಿದೆ.