

ವಿಜಯವಾಣಿ ಸುದ್ದಿಜಾಲ ದಾವಣಗೆರೆ
ಪ್ರತಿಷ್ಠಿತ ವಿಆರ್ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್ ಕಂಪನಿಯ ಹೆಸರು, ಲೋಗೋ, ಜಿಎಸ್ಟಿ ಸಂಖ್ಯೆ, ಪಾನ್ ನಂಬರ್ ಬಳಸಿಕೊಂಡು ಆನ್ಲೈನ್ನಲ್ಲಿ ಗ್ರಾಹಕರನ್ನು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಗ್ರಾಹಕರೊಬ್ಬರ ಮನೆಯ ವಸ್ತುಗಳನ್ನು ಬೆಂಗಳೂರಿನಿಂದ ದಾವಣಗೆರೆಗೆ ಸಾಗಿಸಲು ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಹೆಚ್ಚುವರಿ ಹಣ ಪಡೆಯುವ ಮೂಲಕ ಕಂಪನಿಯ ವರ್ಚಸ್ಸಿಗೆ ಕಳಂಕ ತರುವ ಪ್ರಯತ್ನ ನಡೆದಿದೆ.
ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಗ್ರಾಹಕರೊಬ್ಬರು ಮನೆಯ ಸಾಮಾನುಗಳನ್ನು ದಾವಣಗೆರೆಗೆ ಕಳುಹಿಸಲು ಆ. 18 ರಂದು ಗೂಗಲ್ನಲ್ಲಿ ಹುಡುಕಾಟ ಮಾಡುವಾಗ ‘ಅಗರವಾಲ್ ಮೂವರ್ಸ್ ಆಂಡ್ ಪ್ಯಾಕರ್ಸ್’ ಎಂಬ ಸಂಸ್ಥೆಯ ಮಾಹಿತಿ ದೊರಕಿತು. ಆ ವಿಳಾಸಕ್ಕೆ ಇ-ಮೇಲ್ ಐಡಿ, ಮೊಬೈಲ್ ಸಂಖ್ಯೆ, ಲೊಕೇಶನ್ ಶೇರ್ ಮಾಡಿದರು. ಅಲ್ಲಿಂದ ಒಬ್ಬರು ಕರೆ ಮಾಡಿ 40 ಸಾವಿರ ರೂ.ಗಳ ಕೊಟೇಷನ್ ಕಳುಹಿಸಿದರು. ಅದು ಇಷ್ಟವಾಗದ ಕಾರಣ ಗ್ರಾಹಕ ಸುಮ್ಮನಾದರು. ಅದಾದ 2 ಗಂಟೆಗಳ ನಂತರ ‘ವಿಆರ್ಎಲ್ ಲಾಜಿಸ್ಟಿಕ್ಸ್ ಪ್ಯಾಕರ್ಸ್ ಆಂಡ್ ಮೂವರ್ಸ್’ ನಿಂದ ಎಂದು ಹೇಳಿಕೊಂಡು ವಾಟ್ಸ್ ಆಪ್ ಸಂದೇಶ ಬಂದಿದೆ. ನಾವು 12 ಸಾವಿರ ರೂ.ಗಳಿಗೆ ಬಬಲ್ ಪ್ಯಾಕಿಂಗ್, ಪ್ಲಾಸ್ಟಿಕ್ ಪ್ಯಾಕಿಂಗ್, ಲೋಡಿಂಗ್, ಅನ್ಲೋಡಿಂಗ್ ಸೇವೆ ನೀಡುವುದಾಗಿ ನಂಬಿಸಿದ್ದಾರೆ. ಸೆ.18 ರಂದು ಆ ಗ್ರಾಹಕ 1 ಸಾವಿರ ರೂ. ಮುಂಗಡ ಪಾವತಿಸಿದ್ದಾರೆ. 22 ರಂದು ಬೆಳಗ್ಗೆ ಬೆಂಗಳೂರಿನ ಮನೆಯಿಂದ ಸಾಮಾನುಗಳನ್ನು ಪ್ಯಾಕಿಂಗ್ ಮಾಡಿಕೊಂಡು ಹೋಗಿದ್ದಾರೆ. ಅದಾದ ಸ್ವಲ್ಪ ಹೊತ್ತಿನಲ್ಲೇ ಮತ್ತೊಮ್ಮೆ ಕರೆ ಮಾಡಿ ಬಾಕಿ 11 ಸಾವಿರ ರೂ. ಕಟ್ಟಿಸಿಕೊಂಡಿದ್ದಾರೆ.
ವಿಮೆ, ಸಾರಿಗೆ ವೆಚ್ಚ, ಜಿಎಸ್ಟಿ ಸೇರಿ ಒಟ್ಟು 29,926 ರೂ.ಗಳ ಬಿಲ್ ಕಳಿಸಿ, ಈಗಾಗಲೇ ಪಾವತಿಸಿರುವ 12 ಸಾವಿರ ರೂ. ಬಿಟ್ಟು ಉಳಿದ 17,926 ರೂ.ಗಳನ್ನು 3 ಗಂಟೆಯೊಳಗೆ ಪಾವತಿಸುವಂತೆ ಹೇಳಿದ್ದಾರೆ. ಗ್ರಾಹಕ ದಾವಣಗೆರೆ ತಲುಪಿದ ನಂತರ ಬೇರೊಬ್ಬರಿಂದ ಸಾಲ ಪಡೆದು ಬಾಕಿ ಪಾವತಿಸಿದ್ದಾರೆ. ಅಷ್ಟಾಗಿಯೂ 3 ದಿನಗಳ ಬಳಿಕ ವಾಹನ ದಾವಣಗೆರೆಗೆ ಬಂದಿದೆ.
ಬೆಂಗ್ಳೂರಲ್ಲಿ ಕೇಸ್ : ವಿಆರ್ಎಲ್ ಹೆಸರು, ಲೋಗೋ, ಜಿಎಸ್ಟಿ ಮತ್ತು ಪಾನ್ ಸಂಖ್ಯೆ ಬಳಸಿ ವಂಚಿಸಿರುವ ಬಗ್ಗೆ ನಗರದ ಆರ್.ಎಂ.ಸಿ. ಯಾರ್ಡ್ ಠಾಣೆಯಲ್ಲಿ ವಿಆರ್ಎಲ್ ದಾವಣಗೆರೆ ಶಾಖೆಯ ವ್ಯವಸ್ಥಾಪಕ ಬಿ.ಆರ್.ಮಧು ದೂರು ದಾಖಲಿಸಿದ್ದಾರೆ. ವಂಚನೆಗೆ ಒಳಗಾದ ಗ್ರಾಹಕ ಸೋಮವಾರ ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದೂರು ದಾಖಲಿಸಿದ್ದರು.
ವ್ಯವಸ್ಥಿತ ಜಾಲವಿರುವ ಶಂಕೆ: ಪ್ರಕರಣದ ಹಿಂದೆ ವ್ಯವಸ್ಥಿತ ಜಾಲವೇ ಇರುವ ಶಂಕೆ ವ್ಯಕ್ತವಾಗಿದೆ. ದೊಡ್ಡ ದೊಡ್ಡ ಕಂಪನಿಗಳ ಹೆಸರುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಗ್ರಾಹಕರನ್ನು ಆಕರ್ಷಿಸಿ ವಂಚಿಸುವುದು ಕಂಡುಬಂದಿದೆ. ಬುಕಿಂಗ್ ಮಾಡುವವರು ಬೇರೆ, ಮನೆಯಿಂದ ವಸ್ತುಗಳನ್ನು ಪ್ಯಾಕ್ ಮಾಡಿ ತೆಗೆದುಕೊಂಡು ಹೋಗುವವರು ಬೇರೆ. ಆ ಸಾಮಾನುಗಳನ್ನು ಒಂದು ಕಡೆ ಶೇಖರಿಸಿ, ಅಲ್ಲಿಂದ ಮತ್ತೊಬ್ಬ ಬ್ರೋಕರ್ಗೆ ಅದನ್ನು ವಹಿಸುವುದು... ಹೀಗೆ ಕೈಗಳು ಬದಲಾಗುತ್ತಾ ಹೋಗುತ್ತವೆ. ಇಂಥ ಪ್ರಕರಣಗಳಿಂದಾಗಿ ಪ್ರತಿಷ್ಠಿತ ಕಂಪನಿಗಳ ವಿಶ್ವಾಸಾರ್ಹತೆ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಗ್ರಹಿಕೆಗೆ ಕಾರಣವಾಗುವ ಸಾಧ್ಯತೆ ಇರುತ್ತದೆ.
ಬಿಲ್, ಜಿಎಸ್ಟಿ, ಪಾನ್ ಸಂಖ್ಯೆ, ಲೋಗೋ, ಫೋನ್ ಪೇ ಎಲ್ಲದರಲ್ಲೂ ‘ವಿಆರ್ಎಲ್ ಲಾಜಿಸ್ಟಿಕ್ಸ್’ ಹೆಸರು ಇದ್ದುದರಿಂದ ಅನುಮಾನ ಬರಲಿಲ್ಲ. ಸೆ.23 ರಂದು ಚಿತ್ರದುರ್ಗದ ವಿಆರ್ಎಲ್ ಶಾಖೆಗೆ ಹೋಗಿ ವಿಚಾರಿಸಿದಾಗ, ನಾವು ಆ ರೀತಿ ಸೇವೆ ನೀಡುವುದಿಲ್ಲ, ನೇರವಾಗಿ ಕಚೇರಿಗೆ ಬಂದು ಬುಕ್ ಮಾಡುವ ವ್ಯವಸ್ಥೆಯಿದೆ ಎಂದಾಗ ಮೋಸ ಹೋಗಿರುವುದು ಗೊತ್ತಾಯಿತು. | ವಂಚನೆಗೊಳಗಾದ ಗ್ರಾಹಕ ಬಿಲ್, ಜಿಎಸ್ಟಿ, ಪಾನ್ ಸಂಖ್ಯೆ, ಲೋಗೋ, ಫೋನ್ ಪೇ ಎಲ್ಲದರಲ್ಲೂ ‘ವಿಆರ್ಎಲ್ ಲಾಜಿಸ್ಟಿಕ್ಸ್’ ಹೆಸರು ಇದ್ದುದರಿಂದ ಅನುಮಾನ ಬರಲಿಲ್ಲ. ಸೆ.23 ರಂದು ಚಿತ್ರದುರ್ಗದ ವಿಆರ್ಎಲ್ ಶಾಖೆಗೆ ಹೋಗಿ ವಿಚಾರಿಸಿದಾಗ, ನಾವು ಆ ರೀತಿ ಸೇವೆ ನೀಡುವುದಿಲ್ಲ, ನೇರವಾಗಿ ಕಚೇರಿಗೆ ಬಂದು ಬುಕ್ ಮಾಡುವ ವ್ಯವಸ್ಥೆಯಿದೆ ಎಂದಾಗ ಮೋಸ ಹೋಗಿರುವುದು ಗೊತ್ತಾಯಿತು. | ವಂಚನೆಗೊಳಗಾದ ಗ್ರಾಹಕ