ಬಿಹಾರ ಚುನಾವಣೆ: ಮೂರನೇ ಮತ್ತು ಕೊನೆಯ ಹಂತದ ಮತದಾನ ಇಂದು

Bihar election voting 1
Published on

ಪಟನಾ: ಬಿಹಾರ ವಿಧಾನಸಭೆಯ ಚುನಾವಣೆಯ ಮೂರನೇ ಮತ್ತು ಕೊನೆಯ ಹಂತದ ಮತದಾನ ಶುರುವಾಗಿದೆ. 78 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು, 1,204 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು 2.35 ಕೋಟಿ ಮತದಾರರು ನಿರ್ಧರಿಸಲಿದ್ದಾರೆ. ರಾಜ್ಯದ 15 ಜಿಲ್ಲೆಗಳಲ್ಲಿರುವ ಈ ವಿಧಾನಸಭಾ ಕ್ಷೇತ್ರಗಳ 33,782 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಎಲ್ಲ ಕಡೆ ಇವಿಎಂ ಮತ್ತು ವಿವಿಪ್ಯಾಟ್ ಗಳನ್ನು ಅಳವಡಿಸಲಾಗಿದ್ದು, ಇದುವರೆಗೆ ಯಾವುದೇ ಅಡ್ಡಿ ಆತಂಕ ಎದುರಾಗಿಲ್ಲ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಇದಕ್ಕೆ ಹೊರತಾಗಿ, ನಲಂದಾ ಜಿಲ್ಲೆಯ ಹಿಸುವಾ ಕ್ಷೇತ್ರದಲ್ಲಿನ ಎರಡು ಮತಗಟ್ಟೆಗಳಲ್ಲಿ ಮರುಮತದಾನ ಏರ್ಪಡಿಸಲಾಗಿದೆ. ನವೆಂಬರ್ 3ರಂದು ಎರಡನೇ ಹಂತದ ಮತದಾನವಾದ ಸಂದರ್ಭದಲ್ಲಿ ಇಲ್ಲಿ ಮತದಾನ ನಡೆದಿತ್ತು. ಆದರೆ, ಇವಿಎಂ ಕೊಂಡೊಯ್ಯುತ್ತಿದ್ದ ವಾಹನ ರಸ್ತೆ ಅಪಘಾತಕ್ಕೀಡಾದ ಕಾರಣ ಇವಿಎಂ ಹಾನಿಗೀಡಾಗಿತ್ತು. ಇದೇ ಕಾರಣಕ್ಕೆ ಇಲ್ಲಿ ಮರುಮತದಾನ ನಡೆಯುತ್ತಿದೆ ಎಂದು ಆಯೋಗ ತಿಳಿಸಿದೆ.

ಶರದ್ ಯಾದವ್ ಅವರ ಪುತ್ರಿ ಸುಭಾಷಿಣಿ ಯಾದವ್​ ಬಿಹಾರಿ ಗಂಜ್​ ಕ್ಷೇತ್ರದಿಂದ ಇದೇ ಮೊದಲ ಬಾರಿ ಸ್ಪರ್ಧಿಸಿದ್ದು, ರಾಜಕೀಯ ಭವಿಷ್ಯದ ಅದೃಷ್ಟ ಪರಿಶೀಲಿಸಲು ಮುಂದಾಗಿದ್ದಾರೆ. ಈ ಹಂತದಲ್ಲಿ ಜೆಡಿಯುವಿನ 37 ಅಭ್ಯರ್ಥಿಗಳು, ಬಿಜೆಪಿಯ 35, ವಿಕಾಸ್​ಶೀಲ್ ಇನ್ಸಾನ್ ಪಾರ್ಟಿಯ 5, ಹಿಂದುಸ್ತಾನಿ ಅವಾಂ ಮೋರ್ಚಾದ ಒಬ್ಬ ಅಭ್ಯರ್ಥಿ, ಲೋಕ ಜನಶಕ್ತಿ ಪಾರ್ಟಿಯ 42 ಅಭ್ಯರ್ಥಿಗಳು ಕಣದಲ್ಲಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net