

ಶಿವಮೊಗ್ಗ: ಬೆಂಗಳೂರಿನಲ್ಲಿ ಶೇ.50ಕ್ಕಿಂತ ಕಡಿಮೆ ಮತದಾನವಾಗಿದ್ದು, ಹಿಂದಿನ ಚುನಾವಣೆಗಳಲ್ಲಿ ಶಿವಮೊಗ್ಗ ನಗರದಲ್ಲೂ ಕಡಿಮೆಯಾಗಿತ್ತು. ಈ ಬಾರಿ ಪ್ರಮಾಣ ಹೆಚ್ಚಾಗಲು ಎಲ್ಲರೂ ಕಡ್ಡಾಯವಾಗಿ ಹಕ್ಕು ಚಲಾಯಿಸಬೇಕು ಎಂದು ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಸ್ನೇಹಲ್ ಲೋಖಂಡೆ ಹೇಳಿದರು.
ನಗರದ ಸಿಟಿ ಸೆಂಟರ್ ಮಾಲ್‌ನಲ್ಲಿ ಮತದಾನದ ಮಾದರಿ ಉದ್ಘಾಟಿಸಿ ಮಾತನಾಡಿ, ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.100 ಮತದಾನವಾಗಲು ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.
ಜಿಪಂ ಮುಖ್ಯ ಯೋಜನಾಧಿಕಾರಿ ಗಾಯತ್ರಿ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ.76, ನಗರ ಪ್ರದೇಶದಲ್ಲಿ ಶೇ. 60 ಮತದಾನವಾಗಿತ್ತು. ನಗರ ಪ್ರದೇಶದ ಜನ ನಿರಾಸಕ್ತಿ ತೋರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸ್ವೀಪ್ ತರಬೇತುದಾರ ನವೀದ್ ಅಹಮದ್ ಪರ್ವೀಜ್ ಮಾತನಾಡಿ, ಮೇ 7ರಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನಕ್ಕೆ ಅವಕಾಶವಿದೆ. ವಯೋವೃದ್ಧರು ಮತ್ತು ಅಂಗವಿಕಲರಿಗೆ ಮನೆಯಿಂದಲೇ ಮತ ಹಾಕುವ ಅವಕಾಶ ನೀಡಲಾಗಿತ್ತು ಎಂದರು.
ಚುನಾವಣಾ ರಾಯಭಾರಿ ನಿವೇದನ್ ನೆಂಪೆ ಮಾತನಾಡಿ, ಶಿವಮೊಗ್ಗದ ಜನರು ಪ್ರಜ್ಞಾವಂತರೆಂದು ಸಾಬೀತು ಮಾಡಲು ಒಳ್ಳೆಯ ಅವಕಾಶ ದೊರಕಿದೆ. ಬುದ್ಧಿವಂತರು ಮತದಾನ ಮಾಡುವ ಮೂಲಕ ಪ್ರಜ್ಞಾವಂತರಾಗುತ್ತಾರೆ ಎಂದು ಹೇಳಿದರು.
ಕಲಾವಿದರಾದ ಸತೀಶ ಪುರಪ್ಪೆಮನೆ ಹಾಗೂ ತಂಡದವರು ಮತದಾನ ಮಾದರಿಯನ್ನು ಸಿದ್ಧಪಡಿಸಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ.