

ವಿಜಯಪುರ: ಮತದಾರರಲ್ಲಿ ಜಾಗೃತಿ ಮೂಡಿಸಲು ಮತದಾರರ ಸಾಕ್ಷರತಾ ಸಂಘಗಳು ಚಟುವಟಿಕೆಯನ್ನು ಸಮರ್ಪಕವಾಗಿ ಹಮ್ಮಿಕೊಳ್ಳಬೇಕು ಎಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ ಸೂಚನೆ ನೀಡಿದರು.
ನಗರದ ಜಿ.ಪಂ. ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಸ್ವೀಪ್ ಚಟುವಟಿಕೆ ಕೈಗೊಂಡಿರುವ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಲೆ- ಕಾಲೇಜುಗಳಲ್ಲಿ ಯುವ ಮತದಾರರಿಗೆ ಮತದಾನ ಮಹತ್ವ ಕುರಿತು ಜಾಗೃತಿ ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಯುವ ಮತದಾರರಿಗೆ ಮತದಾನದ ಪ್ರಾಮುಖ್ಯತೆ ಕುರಿತು ತಿಳಿಸುವುದು, ಶಾಲಾ ಕಾಲೇಜುಗಳಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್‌ಗಳ ಅಡಿ ವಿನೂತನ ಚಟುವಟಿಕೆ ಕೈಗೊಳ್ಳುವ ಜತೆಗೆ ಮತದಾನದ ಹಕ್ಕುಗಳ ಬಗ್ಗೆ ಯುವ ಮತದಾರರಿಗೆ ಅರಿವು ಮೂಡಿಸಿ ನೋಂದಣಿ ಮಾಡಿಸಬೇಕು ಎಂದು ಸೂಚಿಸಿದರು.
ಈಗಾಗಲೇ 17.6 ವಯಸ್ಸು ಪೂರ್ಣಗೊಂಡ ಎಲ್ಲ ವಿದ್ಯಾರ್ಥಿಗಳ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸುವುದು, ಅದಕ್ಕೆ ಪೂರಕವಾಗಿ ಮತದಾನ ಜಾಗೃತಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವ ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್‌ಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದರು.
ಈಗಾಗಲೇ ಹಮ್ಮಿಕೊಂಡಿರುವ ಉತ್ತಮ ಚಟುವಟಿಕೆಗಳ ಲೇಖನಗಳನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಕಳುಹಿಸಬೇಕು. ಕಳೆದ ಚುನಾವಣೆಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ಯಶೋಗಾಥೆಗಳನ್ನು ತಯಾರಿಸಿ ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಇಎಲ್‌ಸಿಗಳ ಚಟುವಟಿಕೆಗಳನ್ನು ಡಿ.25ರೊಳಗೆ ಆನ್‌ಲೈನ್‌ನಲ್ಲಿ ನೋಂದಣಿ ಪೂರ್ಣಗೊಳಿಸಬೇಕು. ಉತ್ತಮ ಲೇಖನಗಳನ್ನು ಒಂದು ವಾರದೊಳಗೆ ಕಳುಹಿಸಲು ಸೂಚಿಸಿದರು.
ಜಿ.ಪಂ. ಸಿಇಒ ರಿಷಿ ಆನಂದ, ಜಿಲ್ಲಾ ಸ್ವೀಪ್ ಸಮಿತಿಯ ನೊಡಲ್ ಅಧಿಕಾರಿ ಬಿ.ಎಸ್. ರಾಠೋಡ, ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಎ.ಬಿ ಅಲ್ಲಾಪೂರ, ಚುನಾವಣಾ ತಹಸೀಲ್ದಾರ್ ಪ್ರೇಮಸಿಂಗ್ ಪವಾರ ಮತ್ತಿತರರಿದ್ದರು.