ಮತಗಳ್ಳತನ ಆರೋಪ; ಆದಿತ್ಯ ಠಾಕ್ರೆ ಮಹಾರಾಷ್ಟ್ರದ ಪಪ್ಪು ಆಗಬಾರದು: ಸಿಎಂ ದೇವೇಂದ್ರ ಫಡ್ನವೀಸ್ ವಾಗ್ದಾಳಿ|CM Devendra Fadnavis

ವಿಜಯವಾಣಿ - 2025-10-28T184425.586
Published on

ಮುಂಬೈ: 2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಇಂದು(ಅ. 28) ಶಿವಸೇನಾ(ಯುಬಿಟಿ) ನಾಯಕ ಆದಿತ್ಯ ಠಾಕ್ರೆ ತಮ್ಮ ವರ್ಲಿ ಕ್ಷೇತ್ರದಲ್ಲಿ ಮತದಾರರ ವ್ಯತ್ಯಾಸಗಳನ್ನು ಪಿಪಿಟಿ ಮೂಲಕ ಕೆಲವು ವಿಷಯಗಳನ್ನು ಪ್ರಸ್ತುತ ಪಡಿಸಿದ್ದನ್ನು ಟೀಕಿಸಿರುವ ಸಿಎಂ ದೇವೇಂದ್ರ ಫಡ್ನವೀಸ್(CM Devendra Fadnavis) ಅವರು ಮಹಾರಾಷ್ಟ್ರದ ಪಪ್ಪು ಆಗಬಾರದು ಎಂದು ವಾಗ್ದಾಳಿ ನಡೆಸಿದ್ದಾರೆ.

ಮುಂಬೈನಲ್ಲಿ ಮಾತನಾಡಿದ ಅವರು, ಆದಿತ್ಯ ಠಾಕ್ರೆಯವರು ರಾಹುಲ್ ಗಾಂಧಿಯುವರನ್ನು ಅನುಸರಿಸಿದ್ದು, ದೊಡ್ಡ ಪರೆದೆ ಹಾಕಿ, ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹೆಜ್ಜೆ ಹಾಕಿದರು ಅಷ್ಟೇ. ಅವರು ಯಾಕೆ ಇಂತಹ ಕವರಿಂಗ್ ಫೈರಿಂಗ್ ಭಾಷಣ ಮಾಡಿದ್ದಾರೆ ಅಂದ್ರೆ ಜನರು ಅವರೊಂದಿಗೆ ಇಲ್ಲ. ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಸೋತ ಬಳಿಕ ಜನರಿಗೆ ಹೀಗೆ ಪಿಪಿಟಿ ಮೂಲಕ ತೋರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಪಿಪಿಟಿ ಮೂಲಕ ಆದಿತ್ಯ ಠಾಕ್ರೆ ಹೇಳಿಕೊಂಡದ್ದೇನು?

ವಿಧಾನಸಭೆ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವರ್ಲಿ ವಿಧಾನಸಭಾ ಕ್ಷೇತ್ರ ಮತದಾರ ಪಟ್ಟಿಯಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿರುವ ಅವರು, ಚುನಾವಣಾ ಬಳಿಕದ ನಮ್ಮ ಅಧ್ಯಯನದಲ್ಲಿ ಮತದಾರ ಪಟ್ಟಿಯಲ್ಲಿ 19,333 ಮತದಾರರ ವ್ಯತ್ಯಾಸಗಳನ್ನು ಕಂಡು ಹಿಡಿದಿದ್ದೇವೆ. ಹೆಸರುಗಳು, ಛಾಯಾಚಿತ್ರಗಳು, ವಿಳಾಸಗಳು ಹಾಗೂ ಲಿಂಗದಲ್ಲೂ ಸಹ ಹೊಂದಾಣಿಕೆ ಕಂಡುಬಂದಿಲ್ಲ ಎಂದು ಆರೋಪಿಸಿದ್ದಾರೆ.

ಮತದಾರರ ಪಟ್ಟಿಗಳನ್ನು ಶುದ್ಧೀಕರಿಸುವ ಕರ್ತವ್ಯವನ್ನು ನಿರ್ವಹಿಸದ ಮೂಲಕ ಚುನಾವಣಾ ಆಯೋಗವು ಚುನಾವಣೆಯಲ್ಲಿ ಸಾಮೂಹಿಕ ರಿಗ್ಗಿಂಗ್‌ಗೆ ಅವಕಾಶ ನೀಡಿದೆ. ನನ್ನ ಕ್ಷೇತ್ರದಲ್ಲಿ ಹೀಗಾಗಿದ್ದರೆ, ಪ್ರಸ್ತುತ ಸರ್ಕಾರದಲ್ಲಿರುವವರು ರಾಜ್ಯಾದ್ಯಂತ ಮಾಡಿರುವ ಮತ ವಂಚನೆಯನ್ನು ಊಹಿಸಿ ಎಂದು ಚುನಾವಣಾ ಆಯೋಗದ ವಿರುದ್ದ ಕಿಡಿಕಾರಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net