ಕಳ್ಳೋಟಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ವಜಾಗೊಳಿಸಲು ಆಗ್ರಹ ರಾಹುಲ್‌ಗಾಂಧಿ ಸಿಡಿಸಿದ್ದು ಬಾಂಬ್ ಅಲ್ಲ, ಟುಸ್ ಪಟಾಕಿ: ಅಶೋಕ್ ವ್ಯಂಗ್ಯ

R Ashok
Published on

ಬೆಂಗಳೂರು:

ಕಳ್ಳೋಟಿನ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮೀಕ್ಷೆಯ ಪ್ರಕಾರ ಬಿಜೆಪಿಗೆ 150 ಸ್ಥಾನ ಬರಬೇಕಿತ್ತು. ಆದರೆ ಬಂದಿದ್ದು 60 ಸ್ಥಾನ. ಹಾಗಾದರೆ ಕಾಂಗ್ರೆಸ್ ಕೂಡ ಕಳ್ಳೋಟಿನ ಮೂಲಕವೇ ಗೆದ್ದಿದೆ ಅಲ್ಲವೇ? ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.

ಮತದಾರರ ಪಟ್ಟಿ ತಯಾರಿಯಲ್ಲಿ ಪ್ರಧಾನಿ ಅಥವಾ ಬಿಜೆಪಿ ನಾಯಕರ ಪಾತ್ರವಿಲ್ಲದೆ ಇದ್ದರೂ, ರಾಹುಲ್ ಗಾಂಧಿ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು. ರು.

ರಾಹುಲ್ ಗಾಂಧಿ ಆಟಂ ಬಾಂಬ್ ಸಿಡಿಸುತ್ತೇನ ಎಂದು ೋಷಿಸಿದ್ದರು. ಆದರೆ, ಅದು ಟುಸ್ ಪಟಾಕಿಯಾಗಿದೆ. ದೀಪಾವಳಿಗೆ ತಂದು ಉಳಿದಿದ್ದ ಕಳೆದ ವರ್ಷದ ಪಟಾಕಿ ಸಿಡಿಸಿ ನಗೆಪಟಾಲಿಗೆ ಗುರಿಯಾಗಿದ್ದಾರೆ ಎಂದರು.

ಚುನಾವಣೆಯಲ್ಲಿ ಪ್ರತಿ ಬೂತ್‌ಗೆ ಬಿಎಲ್‌ಎಗಳನ್ನು (ಬೂತ್ ಲೆವೆಲ್ ಏಜೆಂಟ್) ಕಾಂಗ್ರೆಸ್ ನೀಡಿದೆ. ಅವರನ್ನು ಕೆಪಿಸಿಸಿ ಅಧ್ಯಕ್ಷರೇ ನೇಮಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ಸತ್ತವರ ಹೆಸರು ತೆಗೆದುಹಾಕುವುದು, ಹೊಸಬರನ್ನು ಸೇರಿಸುವುದು ಮೊದಲಾದ ಕೆಲಸವನ್ನು ಬಿಎಲ್‌ಎ ಮಾಡಬೇಕು. ಇಂತಹ ಬಿಎಲ್‌ಎಗಳನ್ನು ನೇಮಿಸಿದ ಕಾಂಗ್ರೆಸ್ ಏನು ತಪ್ಪು ಮಾಡಿಲ್ಲವೇ? ಎಂದು ಪ್ರಶ್ನಿಸಿದರು.

ಡಿ.ಕೆ.ಶಿವಕುಮಾರ್ ಬಳಿಯೇ ಮತದಾರರ ಪಟ್ಟಿ ಇದ್ದಾಗ, ಆಗಲೇ ಅಕ್ರಮದ ಬಗ್ಗೆ ದೂರು ನೀಡಬೇಕಿತ್ತು. ಇದರಲ್ಲಿ ಪ್ರಧಾನಿ ಪಾತ್ರ ಹೇಗೆ ಬರಲು ಸಾಧ್ಯ? ಬಿಜೆಪಿ ನಾಯಕರ ಪಾತ್ರವೇ ಇಲ್ಲ ಎಂದರು.

ಪಂಚಾಯಿತಿ ಕಾರ್ಯದರ್ಶಿ, ಅಂಚೆಯವರು, ತೆರಿಗೆ ಸಂಗ್ರಹ ಮಾಡುವವರು, ಆರೋಗ್ಯ ಸಿಬ್ಬಂದಿ ಹೀಗೆ ಇವರೆಲ್ಲರೂ ಮತದಾರರ ಪಟ್ಟಿಗೆ ತಯಾರಿಯಲ್ಲಿ ಭಾಗವಹಿಸುತ್ತಾರೆ. ಇವರೆಲ್ಲರೂ ಬಿಜೆಪಿಯವರಾ? ಪಟ್ಟಿಗೆ ಅಕ್ರಮವಾಗಿ ಹೆಸರನ್ನು ಬಿಜೆಪಿಯವರು ಹೇಗೆ ಸೇರಿಸಲು ಸಾಧ್ಯ? ಎಂದು ಕೇಳಿದರು.

ಕೆಲ ರಾಜ್ಯಗಳಲ್ಲಿ ಕಾಂಗ್ರೆಸ್ ನಾಯಕರು ಬೋಗಸ್ ವೋಟ್‌ಗಳ ಅಕ್ರಮ ಮಾಡಿದ್ದಕ್ಕೆ ಬಂಧಿತರಾಗಿದ್ದಾರೆ. ಬೆಂಗಳೂರಿನ ಗಾಂಧಿನಗರದ ಒಂದು ಚಿಕ್ಕ ಮನೆಯಲ್ಲಿ 18 ಮುಸ್ಲಿಂ ಮತದಾರರಿದ್ದಾರೆ. ಒಂದೇ ಮನೆಯಲ್ಲಿ ಇಷ್ಟೊಂದು ವೋಟು ಇರಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ಸರ್ವಜ್ಞನಗರ ಕ್ಷೇತ್ರದ ನಾಗವಾರ ವಾರ್ಡ್‌ನಲ್ಲಿ ಕಾಂಗ್ರೆಸ್ ಶಾಸಕರಿಗಿಂತಲೂ ಸಂಸದರಿಗೆ 5,965 ಹೆಚ್ಚುವರಿ ಮತ ಸಿಕ್ಕಿದೆ. ಹಾಗಾದರೆ ಕಾಂಗ್ರೆಸ್‌ಗೆ ಹೆಚ್ಚು ಮತ ಸಿಕ್ಕಿದ್ದು ಹೇಗೆ? ಎಚ್‌ಬಿಆರ್ ಲೇಔಟ್‌ನಲ್ಲಿ ಶಾಸಕರಿಗಿಂತಲೂ ಸಂಸದರಿಗೆ 3,646 ಮತ ಹೆಚ್ಚಾಗಿ ಸಿಕ್ಕಿದೆ. ಕಾಡುಗೊಂಡನಹಳ್ಳಿಯಲ್ಲಿ 3432 ಹೆಚ್ಚು ಮತ ಸಿಕ್ಕಿದೆ. ಹಾಗಾದರೆ ಇವೆಲ್ಲವನ್ನೂ ಸೇರಿಸಿದ್ದು ಯಾರು? ಸೋತ ಕೂಡಲೇ ಚುನಾವಣಾ ಆಯೋಗ ಸರಿ ಇಲ್ಲ ಎನ್ನುವುದು ಸರಿಯಲ್ಲ ಎಂದರು.

ವಿಧಾನಸಭಾ ಚುನಾವಣೆ ಬಳಿಕ, ಲೋಕಸಭಾ ಚುನಾವಣೆ ನಡೆಯಿತು. ಒಂದೇ ವರ್ಷದಲ್ಲಿ ಕೆಲವು ಹೊಸ ಮತದಾರರು ಬಂದಿದ್ದಾರೆ. ಪದ್ಮನಾಭನಗರದಲ್ಲಿ 57 ಸಾವಿರ ಮತ ನನಗೆ ಬಂದಿದೆ. ಇನ್ನೂ 20 ಸಾವಿರ ಬರಬೇಕಿತ್ತು. ಆದರೆ ಬೇರೆ ಕಡೆಯಿಂದ ಮುಸ್ಲಿಮರನ್ನು ತಂದು ಇಲ್ಲಿಗೆ ಸೇರಿಸಿದ್ದಾರೆ ಎಂದು ದೂರಿದರು.

ಕಂದಾಯ ಇಲಾಖೆ ಎಲ್ಲ ಚುನಾವಣೆ ನಡೆಸುತ್ತದೆ. ಎಲ್ಲರೂ ಕಾಂಗ್ರೆಸ್ ಸರ್ಕಾರದವರೇ ಆಗಿರುವಾಗ ಅಕ್ರಮವಾಗಲು ಹೇಗೆ ಸಾಧ್ಯ? ಈ ಹಿಂದೆ ಕಾಂಗ್ರೆಸ್ ಎಲ್ಲ ಕಡೆ ಅಧಿಕಾರದಲ್ಲಿದ್ದಾಗ ಕಳ್ಳ ಮತದಾನ ಸಾಮಾನ್ಯವಾಗಿತ್ತು. ಮತ ಪೆಟ್ಟಿಗೆಗಳನ್ನು ಎತ್ತಿಕೊಂಡು ಹೋಗುತ್ತಿದ್ದರು. ಪೂಲನ್ ದೇವಿಯಂತಹ ಡಕಾಯಿತರ ಆಡಳಿತವೇ ಎಲ್ಲ ಕಡೆ ನಡೆಯುತ್ತಿತ್ತು. ಅಂತಹ ಚುನಾವಣೆ ರಾಹುಲ್ ಗಾಂಧಿಗೆ ಈಗ ಬೇಕೆನೋ ಎಂದು ವ್ಯಂಗ್ಯವಾಡಿದರು.

ಇಂದಿರಾಗಾಂಧಿ ಚುನಾವಣಾ ಅಕ್ರಮ ಮಾಡಿ ಗೆದ್ದು ಅನರ್ಹರಾಗಿದ್ದರು. ಅದೇ ರೀತಿ ನರೇಂದ್ರ ಮೋದಿಗೆ ಆಗಿಲ್ಲ. ಗಾಂಧಿ ಕುಟುಂಬದ ಇತಿಹಾಸವೇ ಅಕ್ರಮ. ಚುನಾವಣೆಯಲ್ಲಿ ಅಕ್ರಮ ಮಾಡಿಯೇ ಎಲ್ಲರೂ ಗೆದ್ದಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net